
ದುಬೈನಲ್ಲಿ ಮೆಕಾನ್ ಮತ್ತು ಎನ್‌ಎಂಡಿಸಿ ಕಚೇರಿಗಳನ್ನು ಉದ್ಘಾಟಿಸಿದ ಸಚಿವರು
ಭಾರತ ಮತ್ತು ಯುಎಇ ನಡುವೆ ವ್ಯೂಹಾತ್ಮಕ ಖನಿಜ ಪಾಲುದಾರಿಕೆಗೆ ಬಲ
ಕೊಲ್ಲಿಯಲ್ಲಿ ಭಾರತವು ಕಚ್ಚಾವಸ್ತು ಸುರಕ್ಷತೆ, ಎಂಜಿನಿಯರಿಂಗ್ ವಿಸ್ತರಣೆ ಮತ್ತು ಅನಿವಾಸಿ ಭಾರತೀಯರ ಕಲ್ಯಾಣವನ್ನೇ ಗುರಿಯಾಗಿಸಿಕೊಂಡಿದೆ ಎಂದ ಸಚಿವರು
ಹಸಿರು ಉಕ್ಕಿನ ರಾಜತಾಂತ್ರಿಕತೆ ಬಲಪಡಿಸಲು ಮೆಕಾನ್, ಎನ್‌ಎಂಡಿಸಿ ಕಾರ್ಯಾಚರಣೆ
ದುಬೈ, ಯುಎಇ | ಜೂನ್ 30, 2025: ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯನ ನಿರ್ವಹಿಸುವ ಮೆಕಾನ್ ಹಾಗೂ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ ಸಾಗರೋತ್ತರ ಕಚೇರಿಗಳನ್ನು ಇಂದಿಲ್ಲಿ ಉದ್ಘಾಟಿನೆ ನೆರೆವೇರಿಸಿದ ಕೇಂದ್ರದ ಉಕ್ಕುವ ಹೆಚ್.ಡಿ. ಕುಮಾರಸ್ವಾಮಿ ಅವರು ದುಬೈನ ಪ್ರಮುಖ ಆಡಳಿತಗಾರರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ಸೋಮವಾರದಂದು ದುಬೈನಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಕುಮಾರಸ್ವಾಮಿ ಅವರು; ಎರಡೂ ವ್ಯೂಹಾತ್ಮಕ ಕಚೇರಿಗಳನ್ನು ಉದ್ಘಾಟನೆ ನೆರವೇರಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ರಾಸ್ ಅಲ್ ಖೈಮಾಹ್ (RAK) ಆಡಳಿತಗಾರರಾದ ಗೌರವಾನ್ವಿತ ಶೇಖ್ ಸೌದ್ ಬಿನ್ ಸಕ್ರ್ ಅಲ್ ಖಾಸಿಮಿ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು.

ಅವರ ಭೇಟಿಯ ನಂತರ ಸಚಿವರು ದುಬೈನಲ್ಲಿ ನೆಲೆಯಾಗಿರಿಸಿಕೊಂಡು ಕೊಲ್ಲಿ ಭಾಗದಲ್ಲಿ ಕಾರ್ಯನಿರ್ವಹಿಸುವ ಎನ್ ಎಂಡಿಸಿ (NMDC) ಮತ್ತು ಮೆಕಾನ್ (MECON) ಗಳ ಅಂತಾರಾಷ್ಟ್ರೀಯ ಕಚೇರಿಗಳ ಉದ್ಘಾಟನೆ ಮಾಡಿದರು.
ನನ್ನ ಭೇಟಿಯು ಭಾರತ ಮತ್ತು ಯುಎಇ ನಡುವೆ ಆಳವಾಗಿ ಬೇರೂರಿರುವ ಮತ್ತು ವಿಕಸನಗೊಳ್ಳುತ್ತಿರುವ ಸದೃಢವಾದ ಪಾಲುದಾರಿಕೆಯನ್ನು ಒತ್ತಿ ಹೇಳುತ್ತದೆ. ಇದು ಪರಸ್ಪರ ಆರ್ಥಿಕ ಹಿತಾಸಕ್ತಿಗಳು, ಸಾಂಸ್ಕೃತಿಕ ಬಾಂಧವ್ಯಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಮುದಾಯದ ಕೊಡುಗೆಯ ಮೇಲೆ ಅವಲಂಭಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ವ್ಯೂಹಾತ್ಮಕ ಖನಿಜ ಪಾಲುದಾರಿಕೆ ಹಾಗೂ ಕೈಗಾರಿಕಾ ಸಹಯೋಗ ಮತ್ತು ಯುಎಇಯಲ್ಲಿ ವಾಸಿಸುವ 3.5 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರ ಕಲ್ಯಾಣದ ಮೇಲೆ ಕೇಂದ್ರೀಕರಿಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ರಾಸ್ ಅಲ್ ಖೈಮಾಹ್ ಆಡಳಿತಗಾರರೊಂದಿಗೆ ಉನ್ನತ ಮಟ್ಟದ ಸಭೆ:
ಗೌರವಾನ್ವಿತ ಶೇಖ್ ಸೌದ್ ಬಿನ್ ಸಕ್ರ್ ಅಲ್ ಖಾಸಿಮಿ ಅವರೊಂದಿಗಿನ ಸಭೆಯಲ್ಲಿ, ಕೇಂದ್ರ ಸಚಿವರು ವ್ಯಾಪಕ ಶ್ರೇಣಿಯ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ಅವಕಾಶಗಳ ಕುರಿತಾಗಿ ಸುದೀರ್ಘ ಮಾತುಕತೆ ನಡೆಸಿದರು.
ರಾಸ್ ಅಲ್ ಖೈಮಾಹ್ʼದಿಂದ ಸುಣ್ಣದ ಕಲ್ಲಿನ ದೀರ್ಘಾವಧಿಯ ಆಮದು, ಭಾರತದಿಂದ ಮೌಲ್ಯವರ್ಧಿತ ಉಕ್ಕಿನ ರಫ್ತುಗಳ ಮೂಲಕ ವ್ಯಾಪಾರ ಪಾಲುದಾರಿಕೆ ವಿಸ್ತರಿಸುವುದು, ಹಸಿರು ಹೈಡ್ರೋಜನ್ ಮತ್ತು ಗ್ರೀನ್ ಸ್ಟೀಲ್ ಸಹಯೋಗವನ್ನು ಅನ್ವೇಷಿಸುವುದು, ರಾಸ್ ಅಲ್ ಖೈಮಾಹ್ʼದಿಂದ ಸ್ಥಳೀಯ ಸುಣ್ಣದ ಕಲ್ಲು ಮತ್ತು ನೈಸರ್ಗಿಕ ಅನಿಲವನ್ನು ಬಳಸಿಕೊಂಡು ಸುಣ್ಣದ ಉತ್ಪಾದನಾ ಘಟಕಗಳ ಸ್ಥಾಪನೆ, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾವೃದ್ಧಿ ನಿಗಮ (NMDC) ಮತ್ತು ಮೆಕಾನ್ ನಂತಹ ಕೇಂದ್ರ ಸರಕಾರಿ ಸ್ವಾಮ್ಯದ ಕಂಪನಿಗಳ ಮೂಲಕ ಹೆಚ್ಚೆಚ್ಚು ಒಪ್ಪಂದಗಳನ್ನು ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಪ್ರಮುಖ ಅಂಶಗಳ ಬಗ್ಗೆ ಸಚಿವರು ಚರ್ಚೆ ನಡೆಸಿದರು.

“ಭಾರತವು ಉಕ್ಕನ್ನು ಕೇವಲ ಒಂದು ವಸ್ತುವನ್ನಾಗಿ ನೋಡುವುದಿಲ್ಲ. ಆದರೆ ನಮ್ಮ ಮೂಲಸೌಕರ್ಯ, ಚಲನಶೀಲತೆ, ಇಂಧನ ಮತ್ತು ಉತ್ಪಾದನಾ ವಲಯಗಳ ಬೆನ್ನೆಲುಬಾಗಿ ಉಕ್ಕನ್ನು ನಾವು ಗುರುತಿಸುತ್ತೇವೆ” ಎಂದು ಇದೇ ವೇಳೆ ಸಚಿವ ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
“ರಾಸ್ ಅಲ್ ಖೈಮಾಹ್ʼದ ಖನಿಜ ಸಂಪತ್ತು, ಕೈಗಾರಿಕಾ ಸಾಮರ್ಥ್ಯ ಮತ್ತು ಶುದ್ಧ ಇಂಧನವು ಭಾರತದ ಮುಂದಿನ ಪೀಳಿಗೆಯ ಉಕ್ಕು ಮತ್ತು ಸಂಪನ್ಮೂಲ ಕಾರ್ಯತಂತ್ರಕ್ಕೆ ಆದರ್ಶ ಪಾಲುದಾರನನ್ನಾಗಿ ಮಾಡುತ್ತದೆ” ಎಂಬ ಅಂಶವನ್ನು ಅಲ್ಲಿನ ಆಡಳಿತಾರರ ಗಮನಕ್ಕೆ ತಂದರು ಸಚಿವರು.
ಭಾರತದ ಅತಿದೊಡ್ಡ ಉಕ್ಕು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ SAIL, ಪ್ರಸ್ತುತ ರಾಸ್ ಅಲ್ ಖೈಮಾಹ್ʼದ ಆಧಾರಿತ ಸ್ಟೀವಿನ್ ರಾಕ್ LLC ನಿಂದ ವಾರ್ಷಿಕವಾಗಿ ಸುಮಾರು 2.5 ದಶಲಕ್ಷ ಟನ್ ಸುಣ್ಣದ ಕಲ್ಲನ್ನು ಆಮದು ಮಾಡಿಕೊಳ್ಳುತ್ತಿದೆ. ಭವಿಷ್ಯದಲ್ಲಿ SAIL ಸಾಮರ್ಥ್ಯದ ವಿಸ್ತರಣೆಯ ಭಾಗವಾಗಿ ವಾರ್ಷಿಕ 20 ರಿಂದ 35 ದಶಲಕ್ಷ ಟನ್‌ಗಳಿಗೆ ಆಮದು ಹೆಚ್ಚಾಗಲಿದೆ. ಮೂಲಸೌಕರ್ಯ ಅಭಿವೃದ್ಧಿ, ಇಂಧನ ಘಟಕಗಳು ಮತ್ತು ಕಚ್ಚಾ ವಸ್ತುಗಳ ಮೌಲ್ಯ ಸರಪಳಿಗಳಲ್ಲಿ ಸಹಯೋಗವನ್ನು ಅನ್ವೇಷಿಸಲು ಸಚಿವರು, ರಾಸ್ ಅಲ್ ಖೈಮಾಹ್ʼಗೆ ಆಹ್ವಾನ ನೀಡಿದರು.
ಭಾರತದ ಹಸಿರು ಪರಿವರ್ತನೆಗಾಗಿ ನಿರ್ಣಾಯಕ ಖನಿಜಗಳ ಸುರಕ್ಷತೆ:
ದುಬೈನಲ್ಲಿ ಭಾರತದ ಪ್ರಮುಖ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆಯಾದ NMDCಯ ಅಂತಾರಾಷ್ಟ್ರೀಯ ಕಚೇರಿಯನ್ನು ಸಚಿವರು ಉದ್ಘಾಟಿಸಿದರು. ಹೊಸ ಕಚೇರಿಯು ಸಂಸ್ಥೆಯ ʼಖನಿಜ ಆಸ್ತಿ ಸ್ವಾಧೀನಗಳನ್ನುʼ ಮುಂದುವರಿಸಲು, ವ್ಯೂಹಾತ್ಮಕ ಜಂಟಿ ಉದ್ಯಮಗಳನ್ನು ರೂಪಿಸಲು ಮತ್ತು ಭಾರತದ ಶುದ್ಧ ಇಂಧನ ಮತ್ತು ಕೈಗಾರಿಕಾ ಉತ್ಪಾದನಾ ವಲಯಗಳಿಗೆ ಅಗತ್ಯವಿರುವ ಉಕ್ಕಿನ ದರ್ಜೆಯ ಸುಣ್ಣದ ಕಲ್ಲು, ಡಾಲಮೈಟ್ ಮತ್ತು ಇತರೆ ನಿರ್ಣಾಯಕ ಖನಿಜಗಳ ಹೆಚ್ಚಿನ ಒಳಹರಿವಿನ ಮೂಲವನ್ನು ಮತ್ತಷ್ಟು ವಿಸ್ತರಿಸಲು ನೆರವಾಗುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
“ಈ ಕ್ರಮವು ಉದ್ದೇಶಪೂರ್ವಕ ಜಾಗತಿಕ ಕಾರ್ಯತಂತ್ರದ ಭಾಗವಾಗಿದೆ” ಎಂದ ಕುಮಾರಸ್ವಾಮಿ ಅವರು, “ಭಾರತದ ಇಂಧನ ಪರಿವರ್ತನೆ ಮತ್ತು ಕೈಗಾರಿಕಾ ವಿಸ್ತರಣೆಯು ಉಕ್ಕು, ನವೀಕರಿಸಬಹುದಾದ ಇಂಧನ ಮೂಲಸೌಕರ್ಯ ಮತ್ತು ಮುಂದುವರಿದ ಉತ್ಪಾದನೆಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಪಡೆದುಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ನ ಹಾದಿಯಲ್ಲಿ ದುಬೈನ ಸ್ಥಾನವು ಭಾರತದ ದೇಶೀಯ ಕೈಗಾರಿಕೆಗಳನ್ನು ನೇರವಾಗಿ ಬೆಂಬಲಿಸುವ ಅಂತಾರಾಷ್ಟ್ರೀಯ ಖನಿಜ ಪೂರೈಕೆ ಸರಪಳಿಗಳನ್ನು ನಿರ್ಮಿಸಲು NMDC ಒಂದು ವ್ಯೂಹಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ” ಎಂದರು.

“MECON: ಎಂಜಿನಿಯರಿಂಗ್ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಉಪಸ್ಥಿತಿ:
ಭಾರತದ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ವಲಯದ ಎಂಜಿನಿಯರಿಂಗ್ ಸಲಹಾ ಸಂಸ್ಥೆಗಳಲ್ಲಿ ಒಂದಾದ ಮೆಕಾನ್ʼನ ಜಾಗತಿಕ ವಿಸ್ತರಣೆ ಅತ್ಯಂತ ಮಹತ್ವದ್ದು ಎಂದು ಪ್ರತಿಪಾದಿಸಿದ ಸಚಿವರು; ದುಬೈ ಕೇವಲ ಒಂದು ಸ್ಥಳವಲ್ಲ. ಇದು ಒಂದು ಲಾಂಚ್‌ಪ್ಯಾಡ್ ಆಗಿದೆ ಎಂದರು.
ಇಲ್ಲಿ MECONನ ಉಪಸ್ಥಿತಿಯು ಜಾಗತಿಕ ವೇದಿಕೆಯಲ್ಲಿ ವಿಶ್ವ ದರ್ಜೆಯ ಎಂಜಿನಿಯರಿಂಗ್ ಪರಿಹಾರಗಳನ್ನು ತಲುಪಿಸುವ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಕೈಗಾರಿಕಾ ಯೋಜನೆಯ ಕಾರ್ಯಗತಗೊಳಿಸುವಿಕೆ ಮತ್ತು ಯೋಜನೆ, ತೈಲ ಮತ್ತು ಅನಿಲ ಮೂಲಸೌಕರ್ಯ ವಿನ್ಯಾಸ, ಉಕ್ಕಿನ ಸ್ಥಾವರ ಕಾರ್ಯಸಾಧ್ಯತೆ ಮತ್ತು ವಿಸ್ತರಣಾ ಸಲಹೆ, ಹಸಿರು ಉಕ್ಕು ಮತ್ತು ಇಂಗಾಲರಹಿತೀಕರಣ ತಂತ್ರಗಳು, ಸ್ಮಾರ್ಟ್ ಉತ್ಪಾದನೆ ಮತ್ತು ಡಿಜಿಟಲ್ ಅವಳಿ ತಂತ್ರಜ್ಞಾನಗಳ ಕಾರ್ಯಾಚರಣೆಗಳ ಮೂಲಕ ದುಬೈನಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಕೇಂದ್ರೀಕರಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
“ಈ ಹಂತವು ರಾಷ್ಟ್ರೀಯ ಉಕ್ಕು ನೀತಿ ಮತ್ತು ಆತ್ಮನಿರ್ಭರ ಭಾರತದ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ. ಇದು ಸುಸ್ಥಿರ, ತಂತ್ರಜ್ಞಾನ ಚಾಲಿತ ಮೂಲಸೌಕರ್ಯದಲ್ಲಿ ಜಾಗತಿಕ ಪರಿಹಾರ ಪೂರೈಕೆದಾರರಾಗಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಯುಎಇ ನಾಯಕರೊಂದಿಗೆ ಸಂವಾದ:
ಇದೇ ವೇಳೆ ಸಚಿವರು, ಯುಎಇಯ ಭಾರತದ ರಾಯಭಾರಿ ಮತ್ತು ರಾಸ್ ಅಲ್ ಖೈಮಾದ ಆಡಳಿತಗಾರರ ಸಲಹೆಗಾರರ ಸಮ್ಮುಖದಲ್ಲಿ ಕೊಲ್ಲಿ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸ್ವಾಮ್ಯದ ಕಂಪನಿಗಳ ಸಿಇಒಗಳು ಮತ್ತು ಎಂಡಿಗಳೊಂದಿಗೆ ಉನ್ನತ ಮಟ್ಟದ ಸಂವಾದ ನಡೆಸಿದರು.

ಖನಿಜ ಸಂಸ್ಕರಣೆ ಮತ್ತು ಪ್ರಯೋಜನಕಾರಿ ಪಾಲುದಾರಿಕೆಗಳು, ಹಸಿರು ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಕೈಗಾರಿಕಾ ಉದ್ಯಮಗಳಲ್ಲಿ ಅನಿವಾಸಿ ಭಾರತೀಯರು ತೊಡಗಿಸಿಕೊಳ್ಳುವಿಕೆಯಂತಹ ಅತಿ ಮುಖ್ಯ ಅಂಶಗಳ ಬಗ್ಗೆ ಈ ಸಭೆಯಲ್ಲಿ ಸಚಿವರು ಸಮಾಲೋಚನೆ ನಡೆಸಿದರು.
ಸಚಿವರೊಂದಿಗೆ ಭಾರತೀಯ ಉಕ್ಕು ಪ್ರಾಧಿಕಾರ, ಭಾರತೀಯ ಖನಿಜಾಭಿವೃದ್ಧಿ ನಿಗಮ, ಉಕ್ಕು ಸಚಿವಲಾಯದ ಉನ್ನತ ಅಧಿಕಾರಿಗಳು ನೀಯೋಗದಲ್ಲಿ ಇದ್ದರು.