
ರಾಜ್ಯಕ್ಕೆ ಮತ್ತೊಮ್ಮೆ ಆಗಮಿಸ್ತಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಬೆಂಗಳೂರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಗಾಗಿ ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಾರ್ಚ್ 21 ರಿಂದ 23 ರವರೆಗೆ ನಡೆಯಲಿರುವ ಹಲವು ಸಭೆಗಳಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ಜೊತೆಗಿನ ಸಭೆಯಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗಿಯಾಗಲಿದ್ದಾರೆ. ಸಭೆಗೆ ಪೂರಕವಾಗಿ ಮಾರ್ಚ್ 14ರಿಂದ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಲ್ ಬೈಠಕ್ಗಳು ನಡೆಯಲಿವೆ. ಸಂಘದ ಮುಖ್ಯಸ್ಥ ಮೋಹನ್ ಭಾಗವತ್ 14 ರಿಂದ 23ರವರೆಗೆ ಎಲ್ಲ ಸಭೆಗಳಲ್ಲೂ ಹಾಜರಾಗಲಿದ್ದಾರೆ.
ಸಂಘ ಪರಿವಾರದ ಸಂಘ-ಸಂಸ್ಥೆಗಳ ಸಣ್ಣ ಗುಂಪುಗಳ ಸಭೆಯೇ ಕಾರ್ಯಕಾರಿಣಿ ಮಂಡಲ್ ಬೈಠಕ್ನ ಮೂಲ ಸ್ವರೂಪ ಆಗಿದೆ. ಹಿಂದಿನ ಕಾರ್ಯಕಾರಿಣಿ ಮಂಡಲ್ ಬೈಠಕ್ ನಿರ್ಣಯಗಳು, ಕಾರ್ಯ ಚಟುವಟಿಕೆಗಳ ಪ್ರಗತಿ, ಅನುಷ್ಠಾನ ವರದಿ ಮಂಡನೆ ಮಾಡಲಿದ್ದಾರೆ. ಮಾರ್ಚ್ 21ರಿಂದ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿಗಳ ಸಭಾದಲ್ಲಿ ಭಾಗವತ್ ಜೊತೆಗೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಜೆ.ಪಿ.ನಡ್ಡಾ, ಅಮಿತ್ ಶಾ, ಸಂಘ-ಪರಿವಾರದ ಪ್ರಮುಖರು ಭಾಗಿಯಾಗಲಿದ್ದಾರೆ.

ಮೂರು ದಿನಗಳಲ್ಲಿ ಸಭೆಯಲ್ಲಿ ದೇಶ, ವಿಶ್ವದ ವಿದ್ಯಮಾನಗಳು, ಮನುಕುಲದ ಸಂಕ್ಷೇಮ, ಸಂಘದ ಶತಮಾನೋತ್ಸವ ಕಾರ್ಯಕ್ರಮದ ರೂಪರೇಷೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಜೊತೆಗೆ ರಾಜ್ಯದ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆ.