ಚುನಾವಣೆ ಗೆಲ್ಲಲು ಬಿಜೆಪಿಯ ಹತ್ತಿರ ಅಭಿವೃದ್ದಿಯ ಸಂಗತಿಯೊಂದನ್ನು ಹೊರತುಪಡಿಸಿ ಅಗಣಿತ ಭಾವನಾತ್ಮಕ ವಿಷಯಗಳಿವೆ. ಹತ್ತು ವರ್ಷಗಳ ತನ್ನ ಬರ್ಬರ ಆಡಳಿತದಲ್ಲಿ ಎಲ್ಲಾ ಬಗೆಯಲ್ಲೂ ಬಸವಳಿದಿಸುವ ಬಿಜೆಪಿಗೆ ಮುಂಬರುವ ೨೦೨೪ ರ ಸಂಸತ್ತಿನ ಸಾರ್ವತ್ರಿಕ ಚುನಾವಣೆಗೆ ಏಕರೂಪ ನಾಗರಿಕ ಸಂಹಿತೆ ಒಂದು ಲಾಭದಾಯಕ ಅಸ್ತ್ರವಾಗಿ ಕಾಣುತ್ತಿರುವುದು ಸೋಜಿಗದ ಸಂಗತಿಯಂತೂ ಖಂಡಿತ ಅಲ್ಲ. ಈ ಕಾನೂನು ಜಾರಿಯಾದರೆ ಭಾರತದ ಬಹುತ್ವ ಸಂಸ್ಕೃತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದು ದೇಶದ ಅಲ್ಪಸಂಖ್ಯಾತರಿಗೆ ಮರಣ ಶಾಸನವಾಗಲಿಗೆ ಎನ್ನು ಮೇಲ್ನೋಟದ ಚರ್ಚೆಗಳು ಮುನ್ನೆಲೆಯಲ್ಲಿ ಕಾಣಸಿಗುತ್ತಿವೆ. ಆದರೆ ಅಸಲಿಗೆ ಇದು ಮೇಲ್ವರ್ಗದ ಬ್ರಾಹ್ಮಣರನ್ನು ಹೊರತುಪಡಿಸಿ ಅಸಂಖ್ಯಾತ ಹಿಂದೂಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎನ್ನುವುದು ತಜ್ಞರ ಅಭಿಮತವಾಗಿದೆ. ಸಮಾನ ನಾಗರಿಕ ಸಂಹಿತೆ (UCC) ಹಿಂದೂ ಅವಿಭಜಿತ ಕುಟುಂಬಗಳ ಆದಾಯ ತೆರೆಗಿಯೆ ಮೇಲೆ ಬೀರುವ ದುಸ್ಪರಿಣಾಮಗಳ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.

ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ತರುವುದರಿಂದ ಹಿಂದೂ ಅವಿಭಜಿತ ಕುಟುಂಬಗಳು (HUF) ಪಾವತಿಸುವ ಆದಾಯ ತೆರಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಕುರಿತು ಸಂಗೀತಾ ಓಝಾ ಎನ್ನುವ ಲೇಖಕಿ ‘ಲೈವ್ ಮಿಂಟ್.ಕಾಮ್ ವೆಬ್ ಜರ್ನಲ್ಲಿನಲ್ಲಿ ಇದೇ ಜೂನ್ ೩೦, ೨೦೨೩ ರಂದು ಒಂದು ಲೇಖನವನ್ನು ಬರೆದಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಭಾರತೀಯ ಬೇಡಿಕೆˌ ಆದ್ಯತೆ ಹಾಗು ಅಗತ್ಯ ಕೂಡ ಅಲ್ಲ. ಅದು ಹಿಂದೂ ಮತಬ್ಯಾಂಕನ್ನು ಕ್ರೂಢೀಕರಿಸಿ ಚುನಾವಣಾ ಗೆಲ್ಲುವ ಬಿಜೆಪಿಯ ಅಸ್ತ್ರ ಮಾತ್ರ. ಈ ಕಾನೂನು ಅನುಷ್ಠಾನಗೊಂಡರೆ, ಇದು ಅವಿಭಜಿತ ಹಿಂದೂ ಕುಟುಂಬಗಳ ಆದಾಯ ತೆರಿಗೆ ಕಾನೂನುಗಳು ಮತ್ತು ಹಿಂದೂ ಉತ್ತರಾಧಿಕಾರ ಪ್ರಕ್ರೀಯೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಲೇಖಕಿ ಸಂಗೀತಾ ಓಝಾ. ಈಗ ದೇಶದಲ್ಲಿ UCC ಗೆ ಸಂಬಂಧಿಸಿದ ಸುದ್ದಿಗಳು ವೇಗವಾಗಿ ಹರಿದಾಡುತ್ತಿವೆ. ವಿವಿಧ ತೆರಿಗೆ ಮತ್ತು ಹೂಡಿಕೆ ತಜ್ಞರು ಈ ಕಾನೂನು ವ್ಯಕ್ತಿಗಳ ಆದಾಯ ತೆರಿಗೆಯ ಮೇಲೆ ಬೀರುವ ಪರಿಣಾಮಗಳ ಕುರಿತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ ಎನ್ನುತ್ತಾರೆ ಲೇಖಕಿ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಯುಸಿಸಿ ಬಗ್ಗೆ ಮಾತನಾಡಿದ್ದಾರೆ. ಈ ವಿಧೇಯಕವನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಬಹುದೆನ್ನುತ್ತವೆ ವರದಿಗಳು. ಈ ಕಾನೂನಿನಿಂದಾಗುವ ಇತರ ಪರಿಣಾಮಗಳ ಜೊತೆಗೆ, ಹಿಂದೂ ಅವಿಭಜಿತ ಕುಟುಂಬಗಳ ಆದಾಯ ತೆರಿಗೆ ಕಾನೂನು ಮತ್ತು ಹಿಂದೂ ಉತ್ತರಾಧಿಕಾರ ಪ್ರಕ್ರೀಯೆಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. UCC ಎಂದರೆ: ಜಾತಿˌ ಮತˌ ಧರ್ಮˌ ಲಿಂಗ ಮುಂತಾದುವನ್ನು ಲೆಕ್ಕಿಸದೆ ಭಾರತದ ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯವಾಗುವಂತೆ ರೂಪಿಸಿˌ ಕಾರ್ಯಗತಗೊಳಿಸುವ ಕಾನೂನನ್ನು ಏಕರೂಪ ನಾಗರಿಕ ಸಂಹಿತೆ ಎನ್ನುತ್ತಾರೆ. ಇನ್ನೂ HUF ಎಂದರೆ: ಇದು ಒಂದು ಕುಟುಂಬವಾಗಿದ್ದು, ತಮ್ಮ ಪುರುಷ ಪೂರ್ವಜರಿಂದ ಬಂದ ಎಲ್ಲರನ್ನು ಒಳಗೊಂಡಿರುತ್ತದೆ. ಈ ಕುಟುಂಬಕ್ಕೆ, ಸಾಮಾನ್ಯವಾಗಿ ಒಬ್ಬ ಹಿರಿಯ ವ್ಯಕ್ತಿ ಮುಖ್ಯಸ್ಥನಾಗಿದ್ದು, ಇತರರು ಕುಟುಂಬದ ಸದಸ್ಯರುತ್ತಾರೆ. ಜೈನ, ಬೌದ್ಧ ಮತ್ತು ಸಿಖ್ ಧರ್ಮೀಯರ ಕುಟುಂಬಗಳನ್ನು ಸಹ HUF ಎಂದೇ ಪರಿಗಣಿಸಲಾಗುತ್ತದೆ ಎನ್ನುತ್ತಾರೆ ಲೇಖಕಿ.
ಹಿಂದೂ ಅವಿಭಕ್ತ ಕುಟುಂಬಗಳ ಆದಾಯ ತೆರಿಗೆ ನಿಯಮಗಳು ವೈಯಕ್ತಿಕ ಆದಾಯ ತೆರಿಗೆ ಖಾತೆಗೆ ಅನ್ವಯಿಸುತ್ತವೆ. “ಹಿಂದೂ ಅವಿಭಕ್ತ ಕುಟುಂಬವನ್ನು ತೆರಿಗೆ ಘಟಕವಾಗಿ ಪರಿಗಣಿಸುತ್ತಿರುವುದು ಹೊಸತಲ್ಲ, ಇದು ಈಗಾಗಲೇ ಆದಾಯ ತೆರಿಗೆ ಕಾಯಿದೆ, ೧೯೨೨ ರಲ್ಲೇ ಇತ್ತು, ಮತ್ತು ಪ್ರಸ್ತುತ ೧೯೬೧ ರ ಆದಾಯ ತೆರಿಗೆ ಕಾಯಿದೆಯ ಪೂರ್ವವರ್ತಿಯಾಗಿ, ಇದನ್ನು ಮುಂದುವರಿಸಲಾಗಿದೆ. ಹಿಂದೂ ಅವಿಭಕ್ತ ಕುಟುಂಬವು ಒಂದು ಪ್ರತ್ಯೇಕ ತೆರಿಗೆ ಘಟಕವಾಗಿರುವುದರಿಂದ, ಇದು ಆದಯ ತೆರಿಗೆ ಅಧಿನಿಯಮ ೮೦C, ೮೦D, ೮೦DDB, ೧೧೨A, ಇತ್ಯಾದಿಗಳ ಅಡಿಯಲ್ಲಿ ವಿವಿಧ ತೆರಿಗೆ ವಿನಾಯಿತಿಗಳ ಜೊತೆಗೆ ಪ್ರತ್ಯೇಕ ತೆರಿಗೆ ವಿನಾಯಿತಿ ಮಿತಿಯನ್ನು ಹೊಂದಿದೆ” ಎಂದು ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಅವರ ಹೇಳಿಕೆಯನ್ನು ಲೇಖಕಿ ತಮ್ಮ ಲೇಖನದಲ್ಲಿ ದಾಖಲಿಸಿದ್ದಾರೆ. ಹಿಂದೂ ಅವಿಭಕ್ಫ ಕುಟುಂಬದ ಆದಾಯ ತೆರಿಗೆ ಮಿತಿಯು, ಹಳೆಯ ತೆರಿಗೆ ಪದ್ಧತಿಯ ಅನುಸಾರ, ₹೨.೫ ಲಕ್ಷ ವಿನಾಯಿತಿ ಮಿತಿ ಹೋಂದಿದ್ದು ಅದು ವಯಕ್ತಿಕ ತೆರೆಗಿ ನಿಯಮವನ್ನು ಹೋಲುತ್ತದೆ.

ಆದಾಯ ತೆರಿಗೆ ಕಾಯಿದೆ ಅಧಿನಿಯಮಗಳಯಲ್ಲಿ ಎಲ್ಲಾ ತೆರಿಗೆ ಪ್ರಯೋಜನ ಪಡೆಯಲು ಹಿಂದೂ ಅವಿಭಕ್ತ ಕುಟುಂಬ ಅರ್ಹತೆ ಹೊಂದಿದ್ದು ಅದು ಮೂಲ ಬಂಡವಾಳದ ಲಾಭಗಳಲ್ಲೂ ವಿನಾಯಿತಿ ಪಡೆಯುತ್ತದೆ. ಆದಾಗ್ಯೂ, ಹೊಸ ಆದಾಯ ತೆರಿಗೆ ನಿಯಮಗಳ ಪ್ರಕಾರ, ಹಿಂದೂ ಅವಿಭಕ್ತ ಕುಟುಂಬದ ತೆರಿಗೆ ವಿನಾಯಿತಿಯ ಮಿತಿಯನ್ನು ₹ ೩ ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈಗ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಗೊಂಡರೆ ಹಿಂದೂ ಅವಿಭಕ್ತ ಕುಟುಂಬದ ಆದಾಯ ತೆರಿಗೆ ನಿಯಮಗಳ ಮೇಲೆ ಅದರ ಪರಿಣಾಮಗಳೇನು ಎನ್ನುವುದನ್ನು ನೋಡೋಣ. ಈ ಕಾನೂನು ಒಂದು ವೇಳೆ ಕಾರ್ಯಗತಗೊಂಡರೆ, ಹಿಂದೂ ಅವಿಭಕ್ತ ಕುಟುಂಬ ಎನ್ನುವ ವಿಶೇಷ ಪರಿಕಲ್ಪನೆಯು ರದ್ದುಗೊಳ್ಳಲಿದೆ. ಬಲ್ವಂತ್ ಜೈನ್ ಅವರ ಪ್ರಕಾರ, “ಕೇರಳ ಅವಿಭಕ್ತ ಹಿಂದೂ ಕುಟುಂಬ ವ್ಯವಸ್ಥೆ (ನಿರ್ಮೂಲನೆ) ಅಧಿನಿಯಮ, ೧೯೭೫” ರಲ್ಲಿ ಒಳಗೊಂಡಿರುವಂತೆ ಏಕರೂಪ ನಾಗರಿಕ ಸಂಹಿತೆಯಲ್ಲಿ ಯಾವುದೇ ನಿರ್ದಿಷ್ಟ ನಿಬಂಧನೆಗಳನ್ನು ಮಾಡದಿದ್ದರೆ ಆದಾಯ ತೆರಿಗೆ ಕಾಯಿದೆಯಲ್ಲಿ ತಿದ್ದುಪಡಿ ಮಾಡಬೇಕಾಗಬಹುದು.
ಅದಷ್ಟೇ ಅಲ್ಲದೆ ಈ ಕಾನೂನು ಜಾರಿಗೆ ಬಂದ ನಂತರ, ಒಬ್ಬ ವ್ಯಕ್ತಿ ಹಿಂದೂ ಕುಟುಂಬದಲ್ಲಿ ಹುಟ್ಟಿದ ಕಾರಣ ಪೂರ್ವಜರ ಆಸ್ತಿಯಲ್ಲಿ ಯಾವುದೇ ಪಾಲನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಯುಸಿಸಿ ಜಾರಿಗೆ ಬಂದ ನಂತರ ಹುಟ್ಟುವ ವ್ಯಕ್ತಿಗಳ ಹಕ್ಕುಗಳ ಬಗ್ಗೆ ಮಾತ್ರವಲ್ಲದೆ ಈಗಾಗಲೆ ಅಸ್ತಿತ್ವದಲ್ಲಿರುವ ಅವಿಭಕ್ತ ಹಿಂದೂ ಕುಟುಂಬದ ಬಗ್ಗೆ ನಿಬಂಧನೆಗಳನ್ನು ಯುಸಿಸಿ ಅಡಿಯಲ್ಲಿ ಅಥವಾ ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ಮಾಡಬೇಕಾಗಿದೆ ಎನ್ನುವ ಬಲವಂತ್ ಜೈನ್ ಅವರ ಅಭಿಪ್ರಾಯವನ್ನು ಲೇಖಕರು ಹಂಚಿಕೊಂಡಿದ್ದಾರೆ. ಯುಸಿಸಿ ಜಾರಿಯಾದರೆ ಕೋಟ್ಯಂತರ ಹಿಂದೂ ಕುಟುಂಬಗಳ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, ಸರಕಾರ ಹಿಂದೂ ಅವಿಭಜಿತ ಕುಟುಂಬ ಎಂಬ ಪರಿಕಲ್ಪನೆಯನ್ನು ತೊಡೆದುಹಾಕುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಲೇಖಕಿ. ಹೀಗೆ ಏಕರೂಪ ನಾಗರಿಕ ಸಂಹಿತೆಯು ದೇಶದ ಜನರ ಬದುಕಿನ ಮೇಲೆ ಅನೇಕ ಬಗೆಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದಾಗಿದೆ.
~ಡಾ. ಜೆ ಎಸ್ ಪಾಟೀಲ.