ಆಲ್ ರೌಂಡರ್ ಆಂಡ್ರ್ಯೂ ರಸೆಲ್ ಸಿಡಿಸಿದ 70 ರನ್ ನೆರವಿನೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ 6 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 18.2 ಓವರ್ ಗಳಲ್ಲಿ 137 ರನ್ ಗೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಕೆಕೆಆರ್ 14.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಒಂದು ಹಂತದಲ್ಲಿ ಕೆಕೆಆರ್ 51 ರನ್ ಗೆ 4 ವಿಕೆಟ್ ಕಳೆದುಕೊಂಡು ಕಂಗಲಾಗಿತ್ತು. ಆದರೆ ಆಂಡ್ರ್ಯೂ ರಸೆಲ್ ಸಿಡಿಲಬ್ಬರದ ಆಟದಿಂದ ಪಂದ್ಯದ ದಿಕ್ಕನ್ನೇ ಬದಲಿಸಿದರು. ರಸೆಲ್ 31 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಸಿಕ್ಸರ್ ಗಳೊಂದಿಗೆ 70 ರನ್ ಸಿಡಿಸಿದರು.
ರಸೆಲ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಮುರಿಯದ 4ನೇ ವಿಕೆಟ್ ಗೆ 90 ರನ್ ಜೊತೆಯಾಟ ನಿಭಾಯಿಸಿದರು. ರಸೆಲ್ 70 ರನ್ ಪಾಲು ಇದೆ ಅಂದರೆ ಅವರ ಅಬ್ಬರ ಊಹಿಸಬಹುದು. ಬಿಲ್ಲಿಂಗ್ಸ್ 24 ರನ್ ಗಳಿಸಿದರು.