ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ (ಆಗಸ್ಟ್ 19) ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ರೈಲಿನಲ್ಲಿ ಪ್ರಯಾಣಿಕರು ಇರಲಿಲ್ಲ ಹಾಗೂ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಮುಂಜಾನೆ 7.30 ರ ವೇಳೆಗೆ ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ರೈಲಿನ ಎರಡು ಕೋಚ್ಗಳಿಗೆ ಆವರಿಸಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರೈಲಿನಲ್ಲಿ ಬೆಂಕಿ ಕಂಡು ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಅಗ್ನಿ ದುರಂತ ಉಂಟಾಗಲು ಕಾರಣ ತಿಳಿದು ಬಂದಿಲ್ಲ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಜೆಸ್ಟಿಕ್ ಬಳಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವಿದ್ದು, ಬೆಂಕಿಯಿಂದಾಗಿ ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ.
ಈ ಸುದ್ದಿ ಓದಿದ್ದೀರಾ? ಸೌಜನ್ಯಾ ಪ್ರಕರಣ ಹಿಂದೆ ಜಾಗದ ಮೋಹ ಇದೆ: ವಸಂತ ಬಂಗೇರ ಹೊಸ ಬಾಂಬ್
ಅಗ್ನಿ ಅವಘಡ ಪರಿಣಾಮ ಬೆಂಕಿ ತಗುಲಿದ ಬೋಗಿಯಿಂದ ಉಳಿದ ಬೋಗಿಗಳನ್ನು ಬೇರ್ಪಡಿಸಲಾಗಿದೆ. ತಾಂತ್ರಿಕ ದೋಷದಿಂದಾಗಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ತನಿಖೆ ಬಳಿಕ ನಿಖರ ಕಾರಣ ತಿಳಿದು ಬರಲಿದೆ ಎನ್ನಲಾಗಿದೆ.