ಉಡುಪಿ ಜಿಲ್ಲೆಯ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಎಂಬುವವರ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಧು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಇದು ಬಿಜೆಪಿ ಸರಕಾರ ಪ್ರಾಯೋಜಿತ ಹಲ್ಲೆ ಎಂದು ಕಾಂಗ್ರೆಸ್ ಆರೋಪಿಸಿದೆ.

ವರ್ಷಗಳ ಹಿಂದೆ ರಾಧಾಕೃಷ್ಟ ಹಿರ್ಗಾನ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಸೈನಿಕರನ್ನು ಅವಮಾನಿಸುವ ಪೋಸ್ಟ್ ಒಂದು ಮಾಡಲಾಗಿತ್ತು. ಹೀಗಾಗಿ ರಾಧಾಕೃಷ್ಣ ನಾಯಕ್ ಅವರ ವಿರುದ್ಧ ಬೆಂಗಳೂರು ಮತ್ತು ಕಾರ್ಕಳದಲ್ಲಿ ಪ್ರಕರಣದ ದಾಖಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಕಳ ಪೊಲೀಸರು ಅವರನ್ನು ಗುರುವಾರ ಠಾಣೆಗೆ ಕರೆಸಿ ಬಿಜೆಪಿ ನಾಯಕರ ಸಮ್ಮುಖದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
‘ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ,ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ.ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು’ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಹೇಳಿದ್ದಾರೆ.

ಹಾಗೆಯೇ ಇದರ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕರ್ನಾಟಕ ಕಾಂಗ್ರೆಸ್ ‘ಬಿಜೆಪಿ ಒಂದು ರಾಜಕೀಯ ಪಕ್ಷವೇ ಅಲ್ಲ, ಅದೊಂದು ಕ್ಷುದ್ರ ಮನಸುಗಳ ಕೂಟ. ರಾಜಕೀಯ ವಿರೋಧಿಗಳ ವಿಡಿಯೋ ತಿರುಚುವುದು, ನಕಲಿ ಖಾತೆ ಸೃಷ್ಟಿಸಿ ಆಕ್ಷೇಪಾರ್ಹವಾಗಿ ಬರೆಯುವುದು, ಇವೆಲ್ಲವೂ ಬಿಜೆಪಿಯ ಟೂಲ್ ಕಿಟ್. ಕಾಂಗ್ರೆಸ್ ಕಾರ್ಯಕರ್ತರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಬೆದರಿಸುತ್ತೇವೆ ಎಂದರೆ ಅದು ನಿಮ್ಮ ಭ್ರಮೆ’ ಎಂದು ಹೇಳಿದೆ.
ʼಪಾಕಿಸ್ತಾನದ ISI ಅನ್ನು ರಾಜಮರ್ಯಾದೆ ಕೊಟ್ಟು ಪಠಾಣ್ ಕೋಟಿಗೆ ಆಹ್ವಾನಿಸಿ ದೇಶಕ್ಕೆ ಕಪ್ಪು ಚುಕ್ಕೆ ಇಟ್ಟ ಬಿಜೆಪಿಗೆ ಪಾಕ್ ಕಂಡರೆ ಎಲ್ಲಿಲ್ಲದ ಸೆಳೆತ, ಪ್ರೀತಿ. ದೇಶದೊಳಗಿನ ತಮ್ಮ ವಿರೋಧಿಗಳನ್ನು ಪಾಕ್ ಹೆಸರಿನಲ್ಲಿ ನಕಲಿ ಕಂಟೆಂಟ್ ತಯಾರಿಸಿ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಸೈನಿಕರ ಸಾವನ್ನೂ ರಾಜಕೀಯ ಲಾಭಕ್ಕೆ ಬಳಸುವ ವಿಕೃತ ಪಕ್ಷʼ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.

#FakeFactoryBJP ಎಂಬ ಹ್ಯಾಶ್ ಟ್ಯಾಗ್ ಮೂಲಕ ಸರಣ ಟ್ವೀಟ್ ಮಾಡಿದ ಕಾಂಗ್ರೇಸ್ ʼಕಳೆದ ವರ್ಷವೇ ರಾಧಾಕೃಷ್ಣ ಹಿರ್ಗಾನ ಹೆಸರಿನ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿತ್ತು.ರಾಧಾಕೃಷ್ಣ ತಮ್ಮ ಹೆಸರಿನ ನಕಲಿ ಖಾತೆ ಬಗ್ಗೆ ದೂರು ನೀಡಿದ್ದರೂ ಆ ಬಗ್ಗೆ ಪೊಲೀಸರು ತನಿಖೆ ನಡೆಸಲಿಲ್ಲ ಏಕೆ?#BuildupBommai ( ಬಸವರಾಜ ಬೊಮ್ಮಾಯಿ) ಅವರೇ ಆ ಪೋಸ್ಟಿನ URL ಪಡೆಯದಷ್ಟು ಅಸಮರ್ಥರೇ ಪೊಲೀಸರು?ʼ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ʼಒಬ್ಬೊಬ್ಬ ಯೋಧನ ಹೆಣ ಬಿದ್ದರೂ ಒಂದೊಂದು ಮತ ಬೀಳುತ್ತದೆ ಎಂದು ಯೋಚಿಸುವ ವಿಕೃತ ಮನಸ್ಥಿತಿಯ ಬಿಜೆಪಿ ತನ್ನ ರಾಜಕೀಯ ಲಾಭಕ್ಕೋಸ್ಕರ ಭಾರತೀಯ ಯೋಧರ ಸಾವು ಬಯಸುತ್ತದೆ. ಪಾಕ್ ಉಗ್ರರೊಂದಿಗೆ ಶಾಮೀಲಾಗಿದ್ದ ದೇವಿಂದರ್ ಸಿಂಗ್ ಎಂಬ ಪೊಲೀಸ್ ಅಧಿಕಾರಿಗೆ ಬಿಜೆಪಿ ಸರ್ಕಾರ ಪ್ರಮೋಷನ್ ಹಾಗೂ ಅವಾರ್ಡ್ ಕೊಟ್ಟು ಸನ್ಮಾನಿಸಿದ್ದು ಅದೇ ಕಾರಣಕ್ಕಾಗಿʼ ಎಂದು ಟ್ವೀಟ್ ಮಾಡಿದೆ.
‘ಸಾಕ್ಷ್ಯವಿಲ್ಲದ ಸುಳ್ಳು ಪ್ರಕರಣಕ್ಕೆ ರಾಧಾಕೃಷ್ಣರನ್ನು ಒಂದು ವರ್ಷದ ಬಳಿಕ ಠಾಣೆಗೆ ಕರೆಸಿದ್ದೇಕೆ? ಕರೆಸಿದ ನಂತರ ಅಮಾನವೀಯ ಹಲ್ಲೆ ಮಾಡುವಂತಹ ಪ್ರಮೇಯವೇನು? ಬಿಜೆಪಿ ಶಾಸಕ ಪೊಲೀಸರನ್ನು ಪ್ರಚೋದಿಸಿದ್ದೇಕೆ? ಸಾಕ್ಷ್ಯವಿದ್ದರೆ ಪ್ರಕರಣವನ್ನು ಕೋರ್ಟ್ ನೋಡಿಕೊಳ್ಳುತ್ತದೆ, ಪೊಲೀಸರಿಗೆ ಹಲ್ಲೆ ಮಾಡುವ ಅಧಿಕಾರ ಕೊಟ್ಟವರಾರು? ಎಂದು ಪ್ರಶ್ನಿಸಿದೆ.
ʼಬಸವರಾಜ ಬೊಮ್ಮಾಯಿಯವರೇ, ಪೊಲೀಸ್ ಇಲಾಖೆ ಬಿಜೆಪಿ ಪಕ್ಷದ ‘ಖಾಕಿ ಮೋರ್ಚಾ’ದಂತಾಗಿದೆಯೇ? ದಲಿತರಿಗೆ ಮೂತ್ರ ಕುಡಿಸಲಾಗುತ್ತಿದೆ, ಬಿತ್ತನೆ ಬೀಜ ಕೇಳಿದ ರೈತರಿಗೆ ಹಲ್ಲೆ ಮಾಡಲಾಗುತ್ತದೆ, ಪ್ರತಿಭಟಿಸಿದ ಸಾರಿಗೆ ನೌಕರಿಗೆ ಸುಳ್ಳು ಕೇಸ್ ಹಾಕಲಾಗುತ್ತದೆ, ನಮ್ಮ ಕಾರ್ಯಕರ್ತರಿಗೆ ಸುಳ್ಳು ಕೇಸಿನಲ್ಲಿ ಹಲ್ಲೆ ಹಲ್ಲೆ ಮಾಡಲಾಗುತ್ತಿದೆʼಎಂದು ಹೇಳಿದೆ.
ʼಮಧ್ಯಪ್ರದೇಶದಲ್ಲಿ ISI ಪರ ಕೆಲಸ ಮಾಡುತ್ತಿದ್ದ ಬಂಧಿತರೂ ಬಿಜೆಪಿಗರೇ. ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದವರೂ ಅವರೇ. ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದವರೂ ಅವರೇ. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಕಿತ್ತ ದೀಪ್ ಸಿದು ಬಿಜೆಪಿ ಬೆಂಬಲಿಗನೇ. ತಾವು ಅಮೇದ್ಯ ತಿಂದು ಇತರರತ್ತ ತೋರಿಸುವ ವಿಕೃತ ಚಾಳಿ ಬಿಜೆಪಿಯದ್ದುʼ ಎಂದು ಬಿಜೆಪಿ ವಿರುದ್ಧ ಚಾಟಿ ಬೀಸಿದೆ.