ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂವಿನಂತೆ ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸೋಮವಾರ (ಸೆಪ್ಟೆಂಬರ್ 4) ಖಂಡಿಸಿದ್ದಾರೆ.
ಈ ಬಗ್ಗೆ ಸೋಮವಾರ ಮೈಸೂರಿನಿಂದ ಮಾಧ್ಯಮಗಳಿಗೆ ವಿಡಿಯೊ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಶ್ರೀಗಳು, ಉದಯನಿಧಿ ಸ್ಟಾಲಿನ್ ಒಂದು ರಾಜ್ಯದ ಮಂತ್ರಿಯಾಗಿದ್ದಾರೆ. ಸಮಾಜದಲ್ಲಿ ಇಂತಹ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ.‘ಸನಾತನ’ ಎಂದರೆ ಸದಾ ಕಾಲವೂ ಇರುವಂತಹದ್ದು ಎಂದರ್ಥ. ಎಲ್ಲರೂ ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ನಮ್ಮ ಸುಖದಿಂದ ಅಕ್ಕಪಕ್ಕದವರಿಗೆ ದುಃಖವಾಗಬಾರದು. ಬದಲಾಗಿ ನಮ್ಮ ಸುಖದಿಂದ ಅಕ್ಕಪಕ್ಕದವರಿಗೂ ಸಂತೋಷ ಲಭಿಸಬೇಕು. ಇದು ಸನಾತನ ಧರ್ಮದ ಮೂಲ ಆಶಯವಾಗಿದೆ. ಅಂತಹ ಧರ್ಮವನ್ನು ನಿರ್ಮೂಲಿಸಬೇಕು ಎನ್ನುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದ್ದಾರೆ.
ಸಮಾಜದೊಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು. ಸಚಿವರೊಬ್ಬರ ಸನಾತನ ಧರ್ಮದ ಹೇಳಿಕೆ ಕೇಳಿ ತೀವ್ರ ಅಘಾತವಾಗಿದೆ. ಸನಾತನ ಧರ್ಮ ಅಂದ್ರೆ ಸದಾಕಾಲ ಇರುವಂತಹದ್ದು. ಎಲ್ಲಾರು ಸುಖ ಶಾಂತಿಯಿಂದ ಬಯಸುವವರು. ಸಮಾಜದಲ್ಲಿ ಸುಖ ಶಾಂತಿಯಿಂದ ಬದುಕುಬೇಕು. ಇದೇ ಸನಾತನ ಧರ್ಮದ ಆಶಯವಾಗಿರುತ್ತದೆ. ಸನಾತದ ಧರ್ಮದ ನಿರ್ಮೂಲನೆ ಹೇಳಿಕೆಯನ್ನ ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ
ಮುತಾಲಿಕ್ ತೀವ್ರ ಆಕ್ರೋಶ
ಇನ್ನು ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಹೇಳನಾಕಾರಿ ಹೇಳಿಕೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿರುವ ಅವರು, ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಅಸಭ್ಯವಾದದ್ದು. ಸನಾತನ ಧರ್ಮ ನಾಶಪಡಿಸುತ್ತೇನೆ ಎಂಬ ಹೇಳಿಕೆಯನ್ನು ಖಂಡಿಸುತ್ತೇನೆ. ಪೆರಿಯಾರ್ ಸಂಸ್ಕೃತಿಯಿಂದ ಬಂದ ಉದಯನಿಧಿ ಆಟ ಇಲ್ಲಿ ನಡೆಯಲ್ಲ. ಉದಯನಿಧಿ ತನ್ನ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸನಾತನ ಧರ್ಮ ಮಲೇರಿಯಾ, ಡೆಂಗ್ಯು ಇದ್ದಂತೆ ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು’ ಎಂದು ತಮಿಳುನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದರು.