ಬೆಂಗಳೂರು: ರಾಜ್ಯದಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬೆಂಗಳೂರಿನಂತೆ ಮಂಗಳೂರು ಮತ್ತು ಉಡುಪಿಯ ಗಾಳಿ ಗುಣಮಟ್ಟವೂ ಹದಗೆಟ್ಟಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ಬೆಂಗಳೂರು ನಗರದಲ್ಲಿ ಗಾಳಿಯ ಗುಣಮಟ್ಟ (AQI) ಪ್ರಮಾಣವು 124ಗೆ ತಲುಪಿದೆ. ಇದು ಕೆಲವು ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಎಕ್ಯೂಐಗಿಂತ ಉತ್ತಮವಾಗಿದೆ. ಆದರೆ ಡಬ್ಲೂಹೆಚ್‌ಒ ಮಾನದಂಡಗಳ ಪ್ರಕಾರ, ಇದು ಆರೋಗ್ಯಕ್ಕೆ ಹಾನಿಕಾರವೇ ಆಗಿದೆ.

ಇನ್ನು ಮಂಗಳೂರಿನಲ್ಲಿ ಗಾಳಿ ಗುಣಮಟ್ಟ ಹೆಚ್ಚು ಕಳಪೆಗೊಂಡಿದ್ದು, AQI 198ಕ್ಕೇರಿದಿದೆ. ಕಳೆದ ಕೆಲ ದಿನಗಳಿಂದ, ಮಂಗಳೂರಿನ ಗಾಳಿಯ ಗುಣಮಟ್ಟವು ಕಳಪೆಯಾಗುತ್ತಿದ್ದು, 200ರ ಗಡಿ ತಲುಪಿದೆ. ಉಡುಪಿಯ ಗಾಳಿಯ ಗುಣಮಟ್ಟ ಕೂಡ ಕಳಪೆಯಾಗಿದ್ದು, ಮಂಗಳೂರಿಗೆ ಹೋಲಿಸಿದರೆ ಸ್ಪಲ್ಪ ಮಟ್ಟಿಗೆ ಉತ್ತಮವಾಗಿದೆ. ಉಡುಪಿ ಹಾಗೂ ಮಂಗಳೂರು ಗಾಳಿ ಗುಣಮಟ್ಟ ದಿನದಿಂದ ದಿನಕ್ಕೆ ಕಳಪೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಮಾಹಿತಿಯಾಗಿದೆ.

ಕಳಪೆ ಗಾಳಿಯ ಗುಣಮಟ್ಟದಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಲಿದ್ದು, ಬೆಂಗಳೂರು, ಮಂಗಳೂರು, ಮತ್ತು ಉಡುಪಿಯಲ್ಲಿ ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಸೇರಿದಂತೆ ಉಸಿರಾಟದ ಸಮಸ್ಯೆ ಇರುವವರು ತೀವ್ರ ಎಚ್ಚರ ವಹಿಸಬೇಕಾಗಿದೆ.







