ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಕಾನೂನು ಹೋರಾಟ ಸೇರಿದಂತೆ ಯಾವುದೇ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ’ ಎಂದು ಉದಯನಿಧಿ ಹೇಳಿದ್ದಾರೆ.
ಯಾವ ಬೆದರಿಕೆಗಳಿಗೂ ನಾನು ಹೆದರುವುದಿಲ್ಲ. ಪೆರಿಯಾರ್, ಅಣ್ಣಾ ಮತ್ತು ಕಲೈನಾರ್ ಅವರ ಅನುಯಾಯಿಗಳಾದ ನಾವು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಹಾಗೂ ತಂದೆ ಎಂ.ಕೆ.ಸ್ಟಾಲಿನ್ ಅವರ ಮಾರ್ಗದರ್ಶನದಲ್ಲಿ ಸಮಾನತೆಯ ಸಮಾಜವನ್ನು ಸ್ಥಾಪಿಸಲು ಹೋರಾಡುತ್ತೇವೆ. ಈ ದ್ರಾವಿಡ ನೆಲದಿಂದ ಸನಾತನ ಧರ್ಮ ನಿರ್ಮೂಲನೆ ಮಾಡುವ ನಮ್ಮ ಸಂಕಲ್ಪ ಸ್ವಲ್ಪವೂ ಕಡಿಮೆಯಾಗುವುದಿಲ್ಲ ಎಂದು ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರು ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ ಸನಾತನ ನಿರ್ಮೂಲನಾ ಸಮಾವೇಶ’ದಲ್ಲಿ ಭಾಗವಹಿಸಿ ಸನಾತನ ಧರ್ಮದ ಬಗ್ಗೆ ಶನಿವಾರ ಮಾತನಾಡಿದ್ದರು.
“ಕೆಲವು ವಿಷಯಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗಿ, ಮಲೇರಿಯಾ ಅಥವಾ ಕೋವಿಡ್ನಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಸನಾತನ ಧರ್ಮದ ವಿರುದ್ಧ ಮಾತನಾಡಿದ್ದರು.
ಅವರು ಸನಾತನ ಧರ್ಮದ ಕುರಿತು ಮಾಡಿದ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಅವರ ಹೇಳಿಕೆಗೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿದೆ.