ಪೊಲೀಸರಿಗೆ ತಲೆ ನೋವಾಗಿದ್ದ 2 ತಿಂಗಳ ಹಿಂದೆ ನಾಲೆಯಲ್ಲಿ ಪತ್ತೆಯಾಗಿದ್ದ ರುಂಡವಿಲ್ಲದ 2 ಮಹಿಳೆಯರ ಮೃತದೇಹ ಪ್ರಕರಣವನ್ನು ಮಂಡ್ಯ ಪೊಲೀಸರು ಕೊನೆಗೂ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಸೈಕೋ ಕಿಲ್ಲರ್ ನನ್ನು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಎಂಬಾತನೇ ಕೊಲೆ ಆರೋಪಿ. ಈತನ ಜೊತೆ ಇನ್ನಿಬ್ಬರನ್ನು ಬಂಧಿಸಲಾಗಿದ್ದು, ಈತ ಇನ್ನೂ 5 ಮಹಿಳೆಯರ ಹತ್ಯೆಗೆ ಸಂಚು ರೂಪಿಸಿದ್ದು ತನಿಖೆಗೆ ಬೆಳಕಿಗೆ ಬಂದಿದೆ.
ಸಿದ್ದಲಿಂಗಪ್ಪನಿಗೆ ಮದುವೆಯಾಗಿದ್ದರೂ ಪತ್ನಿ ಸಂಬಂಧಿಯ ಜೊತೆ ಲವ್‌ನಲ್ಲಿ ಬಿದ್ದಿದ್ದ. ಆದರೆ ಆಕೆಗೆ ವೇಶ್ಯಾವಟಿಕೆ ಸಂಪರ್ಕ ಇತ್ತು. ಇದರಿಂದ ಅಸಮಾಧಾನಗೊಂಡಿದ್ದ ಆತ ಆಕೆಯ ಸಂಪರ್ಕದಲ್ಲಿದ್ದ ಮಹಿಳೆಯರನ್ನೇ ಗುರಿಯಾಗಿ ಹತ್ಯೆ ಮಾಡುತ್ತಿದ್ದ.
ಪ್ರೇಯಸಿಗೆ ಹಣ, ಚಿನ್ನಾಭರಣದ ಆಸೆ ಹುಟ್ಟಿಸಿ ಮೂವರು ಮಹಿಳೆಯರ ಕೊಲೆಗೈದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಜೂನ್ 7ರಂದು ಇಬ್ಬರು ಮಹಿಳೆಯರ ಕೊಲೆಗೈದು ರುಂಡ-ಮುಂಡ ಬೇರೆ ಮಾಡಿ ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ಮೃತದೇಹ ಎಸೆದಿದ್ದ.
ಜು.25ರಂದು ಚಾಮರಾಜನಗರದಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಕಾಲ್ ಲಿಸ್ಟ್ ಆಧರಿಸಿ ತನಿಖೆ ನಡೆಸಿದಾಗ 3 ಕೊಲೆ ಪ್ರಕರಣ ಬಯಲಾಗಿದೆ.

ಮೇ 30ರಂದು ಚಿತ್ರದುರ್ಗ ಮೂಲದ ಮಹಿಳೆಯೊಬ್ಬರ ಕೊಲೆಯಾಗಿತ್ತು. ಜು.3ರಂದು ಚಾಮರಾಜನಗರ ಮೂಲದ ಮತ್ತೊಂದು ಮಹಿಳೆಯ ಕೊಲೆಯಾಗಿತ್ತು. ಇಬ್ಬರನ್ನೂ ಮನೆಗೆ ಕರೆಸಿ ಕುತ್ತಿಗೆ ಬಿಗಿದು ಹತ್ಯೆಗೈದು, ನಂತರ ಇಬ್ಬರ ರುಂಡ ಮುಂಡ ಬೇರ್ಪಡಿಸಿ ನಾಲೆಗೆ ಎಸೆಯಲಾಗಿತ್ತು.
ಚಾಮರಾಜನಗರ ಮೂಲದ ಮಹಿಳೆ ನಾಪತ್ತೆ ಪ್ರಕರಣ ಬಳಿಕ ಈ ಎಲ್ಲಾ ಕೊಲೆ ರಹಸ್ಯ ಬಯಲಾಗಿದೆ. ಸಿದ್ದಲಿಂಗಪ್ಪ ಮತ್ತು ಉಳಿದ ಹಂತಕರು ಸಿಕ್ಕಿಬಿದ್ದಿದ್ದಾರೆ. ವಿಚಾರಣೆಯಲ್ಲಿ ಎರಡರ ಜೊತೆ ಮತ್ತೊಂದು ಕೊಲೆ ಹಾಗೂ 5 ಹತ್ಯೆ ಸ್ಕೆಚ್‌ಗಳ ಬಗ್ಗೆಯೂ ಪಾಪಿಗಳು ಬಾಯ್ಬಿಟ್ಟಿದ್ದಾರೆ. ಮಂಡ್ಯದ ನಾಲೆಯಲ್ಲಿ ಮಾತ್ರವಲ್ಲದೇ ಅದಕ್ಕೂ ಮೊದಲು ಬೆಂಗಳೂರಿನಲ್ಲೂ ಒಂದು ಕೊಲೆ ಮಾಡಿರೋದು ಗೊತ್ತಾಗಿದೆ. ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರಿಗೆ 1 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.