ಕಟಕ್: ಒಡಿಶಾದ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಮಹಿಳಾ ರೋಗಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವೈದ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಭಾನುವಾರದಂದು ಮಹಿಳೆಯರು ಎಕೋಕಾರ್ಡಿಯೋಗ್ರಾಮ್ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.ಇಬ್ಬರು ಮಹಿಳಾ ರೋಗಿಗಳ ದೂರಿನ ಆಧಾರದ ಮೇಲೆ ಅತ್ಯಾಚಾರದ ಆರೋಪದ ಮೇಲೆ ನಿವಾಸಿ ವೈದ್ಯರನ್ನು ಬಂಧಿಸಲಾಗಿದೆ ಎಂದು ಕಟಕ್ ಡಿಸಿಪಿ ಪ್ರಕಾಶ್ ಆರ್ ಪಿಟಿಐಗೆ ತಿಳಿಸಿದ್ದಾರೆ. ಮಂಗಲಬಾಗ್ ಪೊಲೀಸ್ ಠಾಣೆಯು ಸೋಮವಾರ ಇಬ್ಬರು ರೋಗಿಗಳಿಂದ ಲಿಖಿತ ದೂರನ್ನು ಸ್ವೀಕರಿಸಲಾಗಿದೆ ಮತ್ತು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಅನಿಲ್ ಮಿಶ್ರಾ ತಿಳಿಸಿದ್ದಾರೆ.
ನಿವಾಸಿ ವೈದ್ಯರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದೆ. ಸಮಿತಿಯು ವಿವರವಾದ ತನಿಖೆಯನ್ನು ಕೈಗೊಳ್ಳುತ್ತದೆ ಮತ್ತು ಸರ್ಕಾರಕ್ಕೆ ಸೂಕ್ತ ಕ್ರಮವನ್ನು ಶಿಫಾರಸು ಮಾಡುತ್ತದೆ ಎಂದು ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಆರೋಪಿ ವೈದ್ಯ ಇಬ್ಬರು ಮಹಿಳೆಯರನ್ನು ಶುಕ್ರವಾರದ ಬದಲು ಭಾನುವಾರ ಪರೀಕ್ಷೆಗೆ ಬರುವಂತೆ ಹೇಳಿದ್ದರು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ರೋಗಿಗಳ ಕೆಲವು ಸಂಬಂಧಿಕರು ವೈದ್ಯರಿಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ,ಆದರೆ ಈ ಬಗ್ಗೆ ಪೊಲೀಸರು ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.