ಕಳೆದ ಹಲವು ದಿನಗಳಿಂದ ತನ್ನ ಪಕ್ಷ ಕಾಂಗ್ರೆಸ್ ಮತ್ತು ನಾಯಕರ ವಿರುದ್ಧವೇ ಕಿಡಿಕಾರುತ್ತಿರುವ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಈಗ ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ನೇರಾ ನೇರಾ ಗುಡುಗಿದ್ದಾರೆ.
ಹೌದು, ವಿಧಾನ ಪರಿಷತ್ ನ ವಿಪಕ್ಷ ನಾಯಕ ಸ್ಥಾನದಿಂದ ಶುರುವಾದ ಈ ಒಂದು ತಿಕ್ಕಾಟ ವರಿಷ್ಠರಿಗೆ ಪ್ರಶ್ನೆ ಮಾಡುವರೆಗೂ ಬಂದು ನಿಂತಿದೆ. ನಮ್ಮ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಬಳಿ ಮಾತನಾಡಲು ಹೋದರೆ ನಮ್ಮಂತ ಹಿರಿಯ ನಾಯಕರ ಜೊತೆ ಮಾತೇ ಆಡುವುದಿಲ್ಲ ಏನೇ ಇದ್ದರು ಸುರ್ಜೆವಾಲ ಜೊತೆ ಮಾತನಾಡಿ ಅಂತ ಹೇಳುತ್ತಾರೆ. ಯಾರು ಈ ಸುರ್ಜೆವಾಲಾ, ಇವನ ಅಪ್ಪನ ಜತೆಗೆ ನಾನು ಕೆಲಸ ಮಾಡಿದ್ದೇನೆ. ನನಗಿಂತ ಜ್ಯೂನಿಯರ್ ಗೆ ರಿಪೋರ್ಟ್ ಮಾಡಿಕೊಳ್ಳಬೇಕಾ ? ಎಂದು ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಕೆ.ಸಿ.ವೇಣುಗೋಪಾಲ ಹಾಗೂ ಸುರ್ಜೇವಾಲಾಗೆ ಚುನಾವಣೆಯಲ್ಲಿ ಗೆದ್ದ ಅನುಭವವೇ ಇಲ್ಲ. ಅಂತವರನ್ನು ನಂಬಿಕೊಂಡು ಕಾಂಗ್ರೆಸ್ ವರಿಷ್ಠರು ಕುಳಿತಿದ್ದಾರೆ. ಸ್ಥಳೀಯ ನಾಯಕರ ಜತೆ ನೇರವಾಗಿ ಮಾತನಾಡುವುದಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಏನು ಸಮಸ್ಯೆ? ಇಬ್ಬರು ಭ್ರಷ್ಟ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಂದ ರಾಜ್ಯ ಕಾಂಗ್ರೆಸ್ ಹಾಳಾಗುತ್ತಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಆಂತರಿಕ ಮತದಾನ ನಡೆಸಿ ಎಂದರೆ ದಿಲ್ಲಿಯಿಂದ ಆದೇಶ ರವಾನಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.














