ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಹೊಸ ಐಟಿ ನಿಯಮವನ್ನು ರೂಪಿಸಿದೆ. ಈ ನಿಯಮ ಪಾಲಿಸದ ಕಾರಣ ಟ್ವಿಟರ್ ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಸಾಮಾಜಿಕ ಮಾಧ್ಯಮಗಳಿಗೆ ಹೊಸ ನಿಯಮ ಪಾಲನೆಗೆ ಮೂರು ತಿಂಗಳ ಗಡುವು ನೀಡಲಾಗಿತ್ತು. ಈ ಗಡುವು ಮೇ 25 ಕ್ಕೆ ಕೊನೆಗೊಂಡಿದೆ. ಮೇ 26 ರಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿದ್ದು, ಇದುವರೆಗೂ ಬದ್ಧತೆ ತೋರದ ಸಾಮಾಜಿಕ ಮಾಧ್ಯಮಗಳಲ್ಲಿ ಏಕೈಕ ಮಾಧ್ಯಮ ಟ್ವಿಟರ್ ಎಂದು ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಸರ್ಕಾರ ಟ್ವಿಟರ್‌ಗೆ ಕೂಡಲೇ ಹೊಸ ನಿಯಮ ಪಾಲಿಸುವಂತೆ ಕೊನೆಯ ಅವಕಾಶ ನೀಡಿ ನೋಟಿಸ್ ನೀಡಿತ್ತು. ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದರೆ ಭಾರತದಲ್ಲಿ ಕಾನೂನು ವಿನಾಯಿತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಖಡಕ್ ಎಚ್ಚರಿಕೆ ನೀಡಿತ್ತು.

ಕೊಟ್ಟ ಅವಧಿಯೊಳಗೆ ಸರ್ಕಾರದ ನಿಯಮಗಳಿಗೆ ಬದ್ಧತೆ ತೋರದಿದ್ದರೆ ಟ್ವಿಟರ್‌ನನ್ನು ಬಳಕೆದಾರರ ವಿಷಯಗಳನ್ನು ಅಥವಾ ಸಂದೇಶಗಳನ್ನು ಪ್ರಕಟಿಸುವ ಒಂದು ಮಧ್ಯವರ್ತಿಯಾಗಿ ಪರಿಗಣಿಸಲಾಗುವುದಿಲ್ಲ, ಬಳಕೆದಾರರು ಬಳಸುವ ಎಲ್ಲಾ ಪೋಸ್ಟ್‌ಗಳಿಗೆ ಟ್ವಿಟರ್ ಹೊಣೆಗಾರನಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.

ಜೂನ್ 9ರಂದು ಟ್ವಿಟರ್ ಐಟಿ ಸಂಬಂಧಿಸಿದ ಹೊಸ ನಿಯಮ ಅನುಸರಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿತ್ತು. ನೂತನ ಐಟಿ ನಿಮಯದ ಪ್ರಕಾರ ಸಂಸ್ಥೆ ಹೊಸ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ತಿಳಿಸಿದೆ. ಕಾನೂನಿನಂತೆ ಪ್ರತಿಯೊಂದು ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಹಾಗು ಶೀಘ್ರದಲ್ಲಿಯೇ ಕೈಗೊಂಡ ಕ್ರಮದ ಬಗ್ಗೆ ಸಚಿವಾಲಯದ ಜತೆ ಮಾಹಿತಿ ಹಂಚಿಕೊಳ್ಳುವುದಾಗಿ ಟ್ವಿಟರ್ ವಕ್ತಾರ ತಿಳಿಸಿದ್ದಾರೆ.