ನವದೆಹಲಿ:ಏ.೦೪: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಲಾಂಛನ ಬದಲಿಸಿದೆ. ಮಂಗಳವಾರ ಟ್ವಿಟರ್ ಖಾತೆ ತೆರೆದಾಗ ಬಳಕೆದಾರರು ನೀಲಿ ಹಕ್ಕಿಯ ಲಾಂಛನದ ಜಾಗದಲ್ಲಿ ನಾಯಿಯ ಮುಖ ಇರುವುದನ್ನು ನೋಡಿ ಗೊಂದಲದಲ್ಲಿ ಸಿಲುಕಿದ್ದರು. ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್ ಮೂಲಕ ಹರಿದಾಡುತ್ತಿದ್ದ ಶಿಬಾ ಇನು ಎಂಬ ನಾಯಿಯ ಮುಖವೇ ಈಗ ಟ್ವಿಟರ್ ಲೋಗೊ ಆಗಿಬಿಟ್ಟಿದೆ.
ಟ್ವಿಟರ್ ತಾಣವನ್ನು ಇತ್ತೀಚೆಗೆ ಖರೀದಿಸಿದ್ದ ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮದೇ ಆದ ಶೈಲಿಯಲ್ಲಿ ಈ ಬದಲಾವಣೆಯನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ಲಾಂಛನವು ಜನಪ್ರಿಯ ಕ್ರಿಪ್ಟೋಕರೆನ್ಸಿ ಡೋಜ್‌ಕಾಯಿನ್ ಎಂಬ ಡಿಜಿಟಲ್ ಕರೆನ್ಸಿಯದು. ಈ ಹಿಂದೆ ಡೋಜ್‌ಕಾಯಿನ್ ಬೆಂಬಲಿಸಲು ಪಿರಮಿಡ್ ಸ್ಕೀಮ್ ಒಂದನ್ನು ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಮಸ್ಕ್ ವಿರುದ್ಧ ಅಮೆರಿಕದಲ್ಲಿ 258 ಶತಕೋಟಿ ಡಾಲರ್ ಮೊತ್ತದ ಮೊಕದ್ದಮೆ ದಾಖಲಾಗಿತ್ತು.

ಅಮೆರಿಕದಲ್ಲಿ ಈಗ ಟ್ವಿಟರ್ ಲೋಗೊವನ್ನು ಡೋಜ್ ಗೆ ಬದಲಾಯಿಸಿದ ತಕ್ಷಣ ಎರಡು ದಿನಗಳಲ್ಲಿ ಡೋಜ್‌ಕಾಯಿನ್‌ನ ಮಾರುಕಟ್ಟೆ ಮೌಲ್ಯವು ದಿಢೀರ್ ಏರಿಕೆ ಕಂಡಿದ್ದು, ಶೇ.30ರಷ್ಟು ಹೆಚ್ಚಾಗಿದೆ. ಸದ್ಯ ವೆಬ್ ಬ್ರೌಸರ್‌ನಲ್ಲಿ ಮಾತ್ರ ಟ್ವಿಟರ್ ಲೋಗೊ ಬದಲಾಗಿದ್ದು, ಆ್ಯಪ್‌ನಲ್ಲಿ ಹಿಂದಿನಂತೆಯೇ ನೀಲಿ ಹಕ್ಕಿಯ ಲಾಂಛನ ಇದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ.

