ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಭಾರೀ ಸದ್ದು ಮಾಡುತ್ತಿರುವಂತೆ ವನ್ಯಜೀವಿಗಳ ದೇಹದ ಭಾಗಗಳನ್ನು ವಿವಿಧ ಕಾರಣಗಳಿಗಾಗಿ ಬಳಸುತ್ತಿರುವುದರ ಬಗ್ಗೆ ಚರ್ಚೆ ಮುನ್ನಲೆಗೆ ಬಂದಿದೆ.
ಈ ಹೊತ್ತಿನಲ್ಲೇ ಒರಿಸ್ಸಾ ಮೂಲದ ಮೂವರು ಇಟ್ಟಿಗೆ ಫ್ಯಾಕ್ಟರಿ ಉದ್ಯೋಗಿಗಳು ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಿಸುತ್ತಿರುವುದು ಬಯಲಿಗೆ ಬಂದಿದೆ.
ತುಮಕೂರಿನ ಮಾರನಾಯಕನಪಾಳ್ಯದಲ್ಲಿ ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾದ ಮೂವರು ಕಳೆದ ಹಲವು ದಿನಗಳಿಂದ ನವಿಲುಗಳನ್ನ ಕೊಂದು ಭಕ್ಷಿಸುತ್ತಿದ್ದರು ಎನ್ನಲಾಗಿದೆ.
ಆರೋಪಿಗಳನ್ನು ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನವಿಲಿನ ಮಾಂಸ ಭಕ್ಷಣೆಗೆ ತಯಾರಿ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು 1.5 ಕೆ.ಜಿ ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲುಗಳು, ಬೇಯಿಸಿದ ಮಾಂಸ, ನವಿಲು ಹಿಡಿಯಲು ಬಳಸಿದ್ದ ಬಲೆಗಳು, ಮಾಂಸ ಬೇಯಿಸಿದ್ದ ಪಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ.














