ಶತಮಾನದ ಸರ್ಕಾರಿ ಶಾಲೆಯ ಕಟ್ಟಡವೂ ಸೇರಿದಂತೆ ಸಾರ್ವಜನಿಕ ಬಳಕೆಯ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡಿರುವ ತುಮರಿಯ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನೂತನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಜಾಗದ ಮೇಲೆ ಕಣ್ಣು ಹಾಕಿರುವ ಭೂ ಮಾಫಿಯಾದ ಜೊತೆ ಸಾಗರ ತಹಶೀಲ್ದಾರರು ಕೈಜೋಡಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ತುಮರಿಯ ಸರ್ವೆ ನಂಬರ್ 24ರ ಜಾಗದಲ್ಲಿ ಇರುವ ನೂರು ವರ್ಷದ ಇತಿಹಾಸ ಇರುವ ಸರ್ಕಾರಿ ಮಾಧ್ಯಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಅವುಗಳಿಗೆ ಹೊಂದಿಕೊಂಡಿರುವ ಆಟದ ಮೈದಾನವನ್ನು ಪರಿಗಣಿಸದೆ, ಆ ಸರ್ವೆನಂಬರಿನಲ್ಲಿ ಎಂಟು ಎಕರೆ ಜಮೀನಿನ ಹಕ್ಕು ಬದಲಾವಣೆ ಮಾಡಲಾಗಿದ್ದು, ಸುಮಾರು 70 ವರ್ಷಗಳ ಹಿಂದೆ ಮಂಜೂರಾಗಿ ಅನುಭೋಗದಲ್ಲಿರದೇ ಇದ್ದ ಜಮೀನನ್ನು ಇದೀಗ ಏಳು ದಶಕದ ಬಳಿಕ ಜಾಗದ ವಾಸ್ತವಿಕ ಸ್ಥಿತಿಗತಿ ಪರಿಶೀಲಿಸದೆ ಹಕ್ಕು ಬದಲಾವಣೆ ಮಾಡಲಾಗಿದೆ.
ಈ ಕುರಿತು ಮೊದಲ ಬಾರಿಗೆ ಹತ್ತು ದಿನಗಳ ಹಿಂದೆ ‘ಪ್ರತಿಧ್ವನಿ’ ವಿಶೇಷ ವರದಿ ಮಾಡಿತ್ತು. ಪ್ರತಿಧ್ವನಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಪ್ರಜಾವಾಣಿ, ವಿಜಯಕರ್ನಾಟಕ, ವಿವಿಧ ಟಿವಿ ವಾಹಿನಿಗಳು ಸೇರಿದಂತೆ ಬಹುತೇಕ ಮಾಧ್ಯಮಗಳು ತುಮರಿ ಶಾಲೆಯ ಈ ವಿಚಿತ್ರ ಸ್ಥಿತಿಯ ಕುರಿತು ವರದಿ ಮಾಡಿದ್ದವು. ಜೊತೆಗೆ ಸ್ಥಳೀಯರು ಕಂದಾಯ ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶಗೊಂಡಿದ್ದರು.
ಇದೀಗ ಇಡೀ ಪ್ರಕರಣಕ್ಕೆ ಮತ್ತೊಂದು ಆಯಾಮದ ಕುರಿತು ಸಾರ್ವಜನಿಕ ಚರ್ಚೆ ಆರಂಭವಾಗಿದ್ದು, “ತುಮರಿ ಭಾಗದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯಾರಂಭದ ಬಳಿಕ ಗರಿಗೆದರಿರುವ ಭೂ ಮಾಫಿಯಾಕ್ಕೂ, ಸಾಗರ ತಹಶೀಲ್ದಾರರ ಹಕ್ಕು ಬದಲಾವಣೆಯ ತರಾತುರಿಗೂ ನೇರ ಸಂಬಂಧವಿದೆ. ತುಮರಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲೇ ಇರುವ ಬಯಲು ಜಾಗಕ್ಕೆ ಈಗ ಭಾರೀ ಬೆಲೆ ಬಂದಿದೆ. ಹಾಗಾಗಿ ಅದರ ಮೇಲೆ ಕಣ್ಣುಹಾಕಿರುವ ಭೂ ಮಾಫಿಯಾದ ಕುಳಗಳು ಖಾಸಗೀ ವ್ಯಕ್ತಿಯ ಮೂಲಕ ಈ ಜಾಗವನ್ನು ಕಬ್ಜಾ ಮಾಡಲು ಹೊಂಚು ಹಾಕಿದ್ದಾರೆ. ಹಾಗಾಗಿಯೇ 70 ವರ್ಷಗಳ ಹಿಂದಿನ ಮಂಜೂರಾತಿಯನ್ನೇ ಮಾನದಂಡವಾಗಿಟ್ಟುಕೊಂಡು ಜಾಗದ ವಾಸ್ತವ ಸ್ಥಿತಿಗತಿ ಪರಿಶೀಲಿಸದೆ ದಿಢೀರನೇ ಹಕ್ಕು ಬದಲಾವಣೆ ಮಾಡಲಾಗಿದೆ” ಎಂಬ ಅನುಮಾನ ಗ್ರಾಮಸ್ಥರದ್ದು!
ಅದೂ ಕೂಡ “ಸ್ಥಳೀಯ ಶಾಲಾಭಿವೃದ್ಧಿ ಸಮಿತಿ, ಗ್ರಾಮ ಪಂಚಾಯ್ತಿ ಮತ್ತು ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಶಾಲೆಯ ಜಾಗ ಮತ್ತು ಮೈದಾನದ ಜಾಗವನ್ನು ಶಾಲೆಗೆ ಮಂಜೂರು ಮಾಡಬೇಕು ಮತ್ತು ದಾಖಲೆ ತಿದ್ದುಪಡಿ ಮಾಡಬೇಕು. ಹಾಗೇ ಆ ಜಾಗವನ್ನು ಇತರೆ ಯಾವುದೇ ವ್ಯಕ್ತಿಗಳಿಗೆ ಮಂಜೂರು ಮಾಡಬಾರದು ಎಂದು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರೂ, ಅದನ್ನೆಲ್ಲಾ ಬದಿಗೊತ್ತಿ ಏಕಾಏಕಿಯಾಗಿ ಸಾಗರ ತಹಶೀಲ್ದಾರರು ಏಕಪಕ್ಷೀಯವಾಗಿ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ. ಖಾಸಗಿ ವ್ಯಕ್ತಿಗೆ ಹಕ್ಕು ಬದಲಾವಣೆಗೆ ತೋರಿದ ಆಸಕ್ತಿ, ಧಾವಂತವನ್ನು ಸರ್ಕಾರಿ ಶಾಲೆ ಮತ್ತು ಆಟದ ಮೈದಾನದ ರಕ್ಷಣೆಗೆ ತೋರಲಿಲ್ಲ” ಎಂಬುದು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಲೋಕನಾಥ್ ಜೈನ್ ಅವರ ಆಕ್ರೋಶ.
ಹಾಗೇ, ಶಾಲಾಭಿವೃದ್ಧಿ ಸಮಿತಿ ಮತ್ತು ಪಂಚಾಯ್ತಿಯಿಂದ ಮೂರ್ನಾಲ್ಕು ವರ್ಷಗಳಿಂದಲೇ ಜಾಗದ ಕುರಿತು ಅರ್ಜಿ ಸಲ್ಲಿಸಿದ್ದರೂ, ಆ ಬಗ್ಗೆ ಚಕಾರವೆತ್ತದ ತಹಶೀಲ್ದಾರರು, ಅದೇ ಜಾಗವನ್ನು ಖಾಸಗೀ ವ್ಯಕ್ತಿಗೆ ಹಕ್ಕು ಬದಲಾವಣೆ ಮಾಡಿಕೊಡಲು ಕರೋನಾ ಲಾಕ್ ಡೌನ್ ನಡುವೆಯೇ ಆದೇಶ ಹೊರಡಿಸಿದ್ದಾರೆ. “ಪಂಚಾಯ್ತಿ ಹಿಂದಿನ ಅಧ್ಯಕ್ಷರು ಮತ್ತು ಶಾಲಾ ಸಮಿತಿ ಆಕ್ಷೇಪಣೆ ಸಲ್ಲಿಸಿ, ಶಾಲೆ ಮತ್ತು ಮೈದಾನಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಯಾವುದೇ ಕಾರಣಕ್ಕೂ ಯಾರಿಗೂ ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರೂ, ಆ ಮನವಿದಾರರ ಗಮನಕ್ಕೇ ತರದೇ ಕರೋನಾ ಲಾಕ್ ಡೌನ್ ನಡುವೆ, ಜನ ಸಂಚಾರ ನಿಷೇಧದ ನಡುವೆ, ತಹಶೀಲ್ದಾರರು ದಾಖಲೆ ತಿದ್ದುಪಡಿ ಮಾಡಿ 2021ರ ಏಪ್ರಿಲ್ 29ರಂದು ಆದೇಶ ಹೊರಡಿಸಿರುವುದು ಭೂ ಮಾಫಿಯಾದ ಕೈವಾಡ ಮತ್ತು ಅದರಲ್ಲಿ ತಹಶೀಲ್ದಾರರು ಕೂಡ ಭಾಗಿಯಾಗಿರುವ ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ” ಎಂಬುದು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಕೃಷ್ಣ ಭಂಡಾರಿ ಅವರ ವಾದ.
ತಮ್ಮೂರಿನ ಶತಮಾನದ ಶಾಲೆ ಉಳಿಯಬೇಕು ಮತ್ತು ಊರಿನ ಏಕೈಕ ಆಟದ ಮೈದಾನವೂ ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಪಾಲಿಗೆ ಉಳಿಯಬೇಕು ಎಂಬ ನಿರಂತರ ಪ್ರಯತ್ನ ನಡೆಸುತ್ತಿರುವ ಸ್ಥಳೀಯ ಶಿಕ್ಷಣ ಪ್ರೇಮಿಗಳು ಮತ್ತು ಊರಿನ ಹಿತವನ್ನಷ್ಟೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವ ಪುಟ್ಟ ಊರಿನ ಈ ಸ್ಥಳೀಯರ ಕಾಳಜಿಗೆ ಸಾಗರ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಗಳ ಜಾಣಕುರುಡು ಪ್ರತಿಕ್ರಿಯೆ ಕೂಡ ಜನರನ್ನು ರೊಚ್ಚಿಗೆಬ್ಬಿಸಿದೆ.
“ಶತಮಾನದ ಸರ್ಕಾರಿ ಶಾಲೆಯ ಜಾಗವನ್ನೇ ಅಕ್ರಮವಾಗಿ ಮಂಜೂರಾತಿ ಮಾಡಿರುವ ಸಾಗರ ತಹಶೀಲ್ದಾರರ ಅಕ್ರಮ ಬಯಲಿಗೆ ಬಂದು ಹತ್ತು ದಿನಗಳು ಕಳೆದರೂ ಈವರೆಗೆ ಸ್ಥಳಕ್ಕೆ ಭೇಟಿ ನೀಡುವ ಕನಿಷ್ಟ ಕಾಳಜಿಯನ್ನೂ ಅಧಿಕಾರಿ ವರ್ಗ ತೋರಿಲ್ಲ. ಸಾಗರ ಉಪ ವಿಭಾಗ ಕಂದಾಯ ಇಲಾಖೆಯ ಮುಖ್ಯಸ್ಥರಾದ ಉಪ ವಿಭಾಗಾಧಿಕಾರಿಗಳಾಗಲೀ, ಶಿಕ್ಷಣ ಇಲಾಖೆಯ ಮುಖ್ಯಸ್ಥರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲೀ, ಅಥವಾ ಜಿಲ್ಲಾ ಮಟ್ಟದ ಆಯಾ ಇಲಾಖೆಗಳ ಮುಖ್ಯಸ್ಥರಾಗಲೀ ಈವರೆಗೆ ತುಮರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮತ್ತು ಗ್ರಾಮಸ್ಥರೊಂದಿಗೆ ಸಮಸ್ಯೆ ಕುರಿತು ಚರ್ಚಿಸುವ ಆಸಕ್ತಿಯನ್ನೇ ತೋರಿಲ್ಲ. ಸರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳಬೇಕಾದ ಅಧಿಕಾರಿಗಳೇ ಇಂತಹ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ಕೂಡ ನಮಗೆ ಇಡೀ ವ್ಯವಸ್ಥೆ ಭೂ ಮಾಫಿಯಾದ ಕೈವಶವಾಗಿದೆಯೇ ಎಂಬ ಅನುಮಾನಗಳನ್ನು ಹುಟ್ಟಿಸುತ್ತಿದೆ” ಎಂಬುದು ತುಮರಿ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಜಿ ಟಿ ಸತ್ಯನಾರಾಯಣ್ ಅವರ ಅಭಿಪ್ರಾಯ.
Also Read : ಅಧಿಕಾರಿಗಳ ಯಡವಟ್ಟು : ಸಂಭ್ರಮದ ಹೊತ್ತಲ್ಲಿ ಸಂಕಷ್ಟಕ್ಕೆ ಸಿಲುಕಿದ ತುಮರಿ ಶಾಲೆ?
ಒಟ್ಟಾರೆ, ಸರ್ಕಾರಿ ಶಾಲೆಯ ಜಾಗ, ಮೈದಾನಗಳನ್ನು ಒತ್ತುವರಿ ಮಾಡಿ ಕಬ್ಜಾ ಮಾಡಲು ಜನ ಹಾತೊರೆಯುವುದು ಮತ್ತು ಸರ್ಕಾರಿ ವ್ಯವಸ್ಥೆ ಅಂತಹ ಹುನ್ನಾರಗಳನ್ನು ವಿಫಲಗೊಳಿಸಿ ಸರ್ಕಾರಿ ಆಸ್ತಿ ರಕ್ಷಿಸುವುದು ಸಾಮಾನ್ಯ ಸಂಗತಿಯಾಗಿದ್ದರೆ, ಸಾಗರ ತಾಲೂಕು ತಹಶೀಲ್ದಾರರ ವಿಷಯದಲ್ಲಿ ಮಾತ್ರ ಇದು ತದ್ವಿರುದ್ಧ. ಇಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಭೂ ಮಾಫಿಯಾದ ಹುನ್ನಾರಗಳ ವಿರುದ್ಧ ನಾಗರಿಕರೇ ಟೊಂಕ ಕಟ್ಟಿ ನಿಂತಿದ್ದಾರೆ; ಶರಾವತಿ ಹಿನ್ನೀರಿನ ತುಮರಿಯ ಶತಮಾನದ ಸರ್ಕಾರಿ ಶಾಲೆ ಮತ್ತು ಅದರ ಆಟದ ಮೈದಾನದ ರಕ್ಷಣೆಗಾಗಿ!