ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದ್ದ ಕಾರಣಕ್ಕೆ ಭಾರತದ ಮೇಲೆ ವಿಧಿಸಿದ್ದ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ರದ್ದುಗೊಳಿಸಿದ್ದಾರೆ. ರಷ್ಯಾದಿಂದ ನೇರ ಹಾಗೂ ಪರೋಕ್ಷವಾಗಿ ತೈಲ ಆಮದು ನಿಲ್ಲಿಸುವುದಾಗಿ ಭಾರತ ಬದ್ಧತೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಆದೇಶ ಇಂದಿನಿಂದಲೇ ಜಾರಿಗೆ ಬಂದಿದೆ.

ಭಾರತವು ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಸ್ತುಗಳ ಮೇಲಿನ ಹೆಚ್ಚುವರಿ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಭಾರತ ಅಮೆರಿಕದಿಂದ ಹೆಚ್ಚು ಇಂಧನ ಉತ್ಪನ್ನಗಳನ್ನು ಖರೀದಿಸಲಿದೆ. ಜೊತೆಗೆ ಮುಂದಿನ 10 ವರ್ಷಗಳ ಕಾಲ ರಕ್ಷಣಾ ಸಹಕಾರ ಬಲಪಡಿಸುವ ಹೊಸ ಚೌಕಟ್ಟಿಗೆ ಉಭಯ ದೇಶಗಳು ಒಪ್ಪಿಗೆ ನೀಡಿವೆ. ಇದು ಸುಂಕ ಕಡಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ಕಳೆದ ವರ್ಷ ಅಮೆರಿಕ ಭಾರತಕ್ಕೆ ಒಟ್ಟು ಶೇ.50ರಷ್ಟು ಸುಂಕ ವಿಧಿಸಿತ್ತು. ಪ್ರತೀಕಾರದ ಸುಂಕ ಶೇ.25, ರಷ್ಯಾ ತೈಲ ಖರೀದಿಯ ಹೆಚ್ಚುವರಿ ಸುಂಕ ಶೇ.25 ಒಟ್ಟು ಸುಂಕ ಶೇ.50 ವಿಧಿಸಿತ್ತು ಇತ್ತೀಚೆಗೆ ಪ್ರತೀಕಾರದ ಸುಂಕವನ್ನು ಶೇ.25ರಿಂದ ಶೇ.18ಕ್ಕೆ ಇಳಿಸಲಾಗಿತ್ತು. ಇದೀಗ ರಷ್ಯಾ ತೈಲಕ್ಕೆ ಸಂಬಂಧಿಸಿದ ಶೇ.25ರಷ್ಟು ಸುಂಕವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಇದರಿಂದ ಭಾರತೀಯ ರಫ್ತುದಾರರ ಮೇಲಿನ ಒಟ್ಟು ಅಮೆರಿಕನ್ ಸುಂಕ ಶೇ.50ರಿಂದ ಶೇ.18ಕ್ಕೆ ಇಳಿದಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ಇನ್ನಷ್ಟು ಹೆಚ್ಚಾಗಲಿದೆ.






