ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಭಾರತ ಮತ್ತು ಚೀನಾದ (India & China) ಮೇಲೆ ಗಣನೀಯ ಪ್ರಮಾಣದ ಪರಸ್ಪರ ಸುಂಕಗಳನ್ನ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಭಾಷಣದಲ್ಲಿ ಮಾತಾಡಿದ ಅವರು, ಆ ದೇಶಗಳು ನಮಗೆ ವಿಧಿಸುವ ಸರಿಸುಮಾರು ಅರ್ಧದಷ್ಟು ಶುಲ್ಕ ವಿಧಿಸುವ ಮೂಲಕ ಅವರ ಮೇಲೆ ದಯೆ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೀಗಾಗಿ ಇವುಗಳನ್ನ ರಿಯಾಯಿತಿ ಪರಸ್ಪರ ಸುಂಕಗಳು ಎಂದು ಕರೆದ ಅಧ್ಯಕ್ಷ ಟ್ರಂಪ್, ಅಮೆರಿಕ ಭಾರತದ ಮೇಲೆ ಶೇಕಡ 26 ಮತ್ತು ಚೀನಾದ ಮೇಲೆ ಶೇಕಡ 34 ರಷ್ಟು ಆಮದು ಸುಂಕವನ್ನ ವಿಧಿಸಲಿದೆ ಎಂದರು.
ಇದೇ ವೇಳೆ ಭಾರತದ ಬಗ್ಗೆ ಮಾತನಾಡುತ್ತಾ , ನವದೆಹಲಿಯ ಸುಂಕಗಳನ್ನು ತುಂಬಾ ಕಠಿಣ ಎಂದು ಟ್ರಂಪ್ ಹೇಳಿದ್ದಾರೆ. ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ, ಆದರೆ ನಮ್ಮೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಭಾರತ ನಮಗೆ ಶೇಕಡಾ 52 ರಷ್ಟು ಸುಂಕ ವಿಧಿಸುತ್ತದೆ. ಆದ್ದರಿಂದ ನಾವು ಅದರಲ್ಲಿ ಅರ್ಧದಷ್ಟು ಪ್ರತಿಶತವನ್ನ ವಿಧಿಸುತ್ತೇವೆ ಎಂದು ಹೇಳಿದ್ದಾರೆ.