ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅವಾಚ್ಯ ಪದ ಬಳಸಿ ನಿಂದಿಸಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಒತ್ತಾಯಗಳು ಹೆಚ್ಚಾಗಿದ್ದು, ಈ ವೇಳೆಯೇ ಆಯೋಗ ಚಿಕ್ಕಬಳ್ಳಾಪುರ ಪೊಲೀಸ್ ಅಧೀಕ್ಷಕರಿಗೆ ಪ್ರಕರಣದ ಸಂಪೂರ್ಣ ವರದಿಯನ್ನು ಕೇಳಿದೆ.

ಈ ಕುರಿತು ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ, ನಡು ರಸ್ತೆಯಲ್ಲಿ ಕಟ್ಟಿದ್ದ ಬ್ಯಾನರ್‌ನ್ನು ನಗರಸಭಾ ಕಾರ್ಮಿಕರು ತೆರವುಗೊಳಿಸಿರುವುದಕ್ಕೆಗೆ ಕೋಪಗೊಂಡ ರಾಜೀವ್ ಗೌಡ ಎಂಬಾತ, ನಗರಸಭಾ ಆಯುಕ್ತರಾದ ಶ್ರೀಮತಿ ಅಮೃತಾ ಗೌಡರ ಎಂಬುವವರಿಗೆ ಚಪ್ಪಲಿಯಲ್ಲಿ ಥಳಿಸಿ, ಜನರನ್ನು ಕರೆತರುವುದಾಗಿ ತಿಳಿಸಿ, ದಂಗೆ ಎಬ್ಬಿಸಿ, ಜೀವ ಬೆದರಿಕೆ ಹಾಕಿರುವ ಕೃತ್ಯದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು. ವರದಿ ನೀಡುವಂತೆ, ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಪತ್ರದಲ್ಲಿ ನಾಗಲಕ್ಷ್ಮಿ ಕೋರಿದ್ದಾರೆ.

ಅಲ್ಲದೆ ಖುದ್ದು ಪೌರಾಯುಕ್ತೆ ಅಮೃತಾ ಗೌಡ ಕೂಡ ಶಿಡ್ಲಘಟ್ಟ ಪೊಲೀಸ್ ಅಧಿಕಾರಿಗಳಿಗೂ ರಾಜೀವ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಒಬ್ಬ ಮಹಿಳಾ ಅಧಿಕಾರಿ ಎನ್ನುವುದನ್ನು ಲೆಕ್ಕಿಸದೆ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಮುಖಂಡನಿಗೆ ಇದೀಗ ತೀವ್ರ ಸಂಕಷ್ಟ ಎದುರಾಗಿದೆ. ಎಲ್ಲ ಕಡೆಗಳಿಂದಲೂ ಆಕ್ರೋಶ ಹೆಚ್ಚಾಗಿ, ದೂರುಗಳು ದಾಖಲಾದ ಬೆನ್ನಲ್ಲೇ ಬಂಧನ ಭೀತಿಯಿಂದ ರಾತೋ ರಾತ್ರಿ ರಾಜೀವ್ ಗೌಡ ತನ್ನ ಮೊಬೈಲ್‌ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಅಲ್ಲದೆ ಮಹಿಳಾ ಅಧಿಕಾರಿಯ ಜೊತೆ ಫೋನ್ ಸಂಭಾಷಣೆಯಲ್ಲಿ ಅವಾಚ್ಯ ಪದ ಬಳಸಿ ನಿಂದಿಸಿರುವ ರಾಜೀವ್ ಗೌಡನನ್ನು ಬಂಧಿಸದಿದ್ದ ಹೋರಾಟದ ಎಚ್ಚರಿಕೆಯನ್ನು ಮೈತ್ರಿ ಪಕ್ಷಗಳಾದ ಬಿಜೆಪಿ- ಜೆಡಿಎಸ್ ನಾಯಕರು ನೀಡಿದ್ದರು. ಈ ಕಾರಣಕ್ಕಾಗಿಯೇ ಪ್ರಕರಣದ ಕಾವು ಹೆಚ್ಚಾಗಿದ್ದು, ಇದನ್ನು ಅರಿತು ಆರೋಪಿ ಕಾಲ್ಕಿತ್ತಿದ್ದಾನೆ.












