ತ್ರಿಪುರಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದ ಶಾಸಕರೊಬ್ಬರು ತಮ್ಮ ನಾಲಗೆ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ. ಟಿಎಂಸಿ ನಾಯಕರು ಏರ್ಪೋರ್ಟ್’ನಲ್ಲಿ ಇಳಿದ ಕೂಡಲೇ ‘ತಾಲೀಬಾನ್’ ಶೈಲಿಯಲ್ಲಿ ಅವರ ಮೇಲೆ ದಾಳಿ ನಡೆಸಲು ಬಹಿರಂಗವಾಗಿ ಸಂದೇಶ ರವಾನಿಸಿದ್ದಾರೆ.
ತ್ರಿಪುರಾದ ಬೆಲೊನಿಯಾ ವಿಧಾನಸಭಾ ಕ್ಷೇತ್ರದ ಅರುಣ್ ಚಂದ್ರ ಭೌಮಿಕ್ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕರು. ಗುರುವಾರದಂದು ರಾಜ್ಯದ ನೂತನ ಶಿಕ್ಷಣ ಮಂತ್ರಿಯಾದ ಪ್ರತಿಮಾ ಭೌಮಿಕ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವ ವೇಳೆ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ 25 ವರ್ಷಗಳ ಎಡಪಕ್ಷದ ಆಡಳಿತವನ್ನು ಕಿತ್ತೊಗೆದು ಬಿಪ್ಲಬ್ ಕುಮಾರ್ ದೇಬ್ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು. ಈ ಸರ್ಕಾರವನ್ನು ಟಿಎಂಸಿಯು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ, ಎಂದು ಅವರು ಹೇಳಿದ್ದಾರೆ.
“ಟಿಎಂಸಿ ನಾಯಕರು ಪಶ್ಚಿಮ ಬಂಗಾಳದಿಂದ ಬಂದು ಬಿಪ್ಲಬ್ ದೇಬ್ ಅವರ ಸರ್ಕಾರಕ್ಕೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲಾ ಪ.ಬಂ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆ. ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಅವರ ಮೇಲೆ, ತಾಲಿಬಾನ್ ಶೈಲಿಯಲ್ಲಿ ದಾಳಿ ನಡೆಸಿ,” ಎಂದು ಹೇಳಿದ್ದಾರೆ.
ಅವರು ಒಮ್ಮೆ ಏರ್ಪೋರ್ಟ್’ಗೆ ಬಂದಿಳಿದ ತಕ್ಷಣವೇ ಅವರ ಮೇಲೆ ದಾಳಿ ನಡೆಸಬೇಕು. ಬಿಪ್ಲಬ್ ಕುಮಾರ್ ದೇಬ್ ಅವರ ಸರ್ಕರವನ್ನು ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ರಕ್ಷಿಸಬೇಕಿದೆ, ಎಂದು ಹೇಳಿದ್ದಾರೆ.
ಇವರ ಭಾಷಣದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಟೀಕೆಗೆ ಒಳಗಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಎಂಸಿಯ ರಿತಬ್ರತಾ ಬ್ಯಾನರ್ಜಿ ಅವರು, ಸಂಪೂರ್ಣ ವಿಶ್ವವೇ ತಾಲೀಬಾನ್ ಮಾಡಿರುವ ಕುಕೃತ್ಯಗಳನ್ನು ಖಂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಂತಹ ಬಿಜೆಪಿ ಶಾಸಕರೊಬ್ಬರು ತಾಲೀಬಾನ್ ಶೈಲಿಯ ದಾಳಿಗೆ ಕರೆ ನೀಡಿದ್ದಾರೆ. ಇದು ತಾಲೀಬಾನ್’ಗೆ ನೀಡಿಉರವ ಬೆಂಬಲವಲ್ಲದೇ ಮತ್ತೇನು?, ಎಂದು ಪ್ರಶ್ನಿಸಿದ್ದಾರೆ.
ಅರುಣ್ ಭೌಮಿಕ್ ಅವರು ಈ ಭಾಷಣ ಮಾಡಿದ ಬೆನ್ನಲ್ಲೇ, ತ್ರಿಪುರಾದಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳು ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್’ನಿಂದ ಟಿಎಂಸಿಗೆ ಬಂದಿರುವ ಸುಬಲ್ ಭೌಮಿಕ್ ಅವರು ಹೇಳಿದ್ದಾರೆ. ತ್ರಿಪುರಾದಲ್ಲಿ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ದ ದಾಳಿ ನಡೆಸಿದ್ದು ಬಿಜೆಪಿ ಕಾರ್ಯಕರ್ತರೇ ಎಂದು ಟೀಕಿಸಿದ್ದಾರೆ.
ತ್ರಿಪುರಾ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಬೇಂದು ಭಟ್ಟಾಚಾರ್ಯ ಅವರು, ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ನಡೆಸಿದ ದಾಳಿಯ ಕುರಿತು ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ ಬಂದಂತಹ ಭಾವನೆಯಿಂದ ಈ ರೀತಿಯ ಮಾತುಗಳು ಬಂದಿವೆ. ಪಕ್ಷವು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರತಿಯೊಬ್ಬರ ವಿರುದ್ದ ಕ್ರಮ ಕೈಗೊಳ್ಳಲಿದೆ. ನಮಗೆ ಸಂವಿಧಾನದ ಮೇಲೆ ಸಂಪೂರ್ಣ ವಿಶ್ವಾಸವಿದೆ, ಎಂದು ಹೇಳಿದ್ದಾರೆ.
ಇತ್ತೀಚಿಗೆ ತಾಲಿಬಾನಿಗಳನ್ನು ಸ್ವಾತಂತ್ರ್ಯ ಯೋಧರು ಎಂಬರ್ಥದಲ್ಲಿ ಬಿಂಬಿಸಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದರೊಬ್ಬರ ವಿರುದ್ದ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು. ಸಂಭಲ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಶಫಿಕುರ್ ರೆಹಮಾನ್ ಬರ್ಕ್ ಅವರು ಈ ರೀತಿಯ ಹೇಳಿಕೆ ನೀಡಿದ್ದರು. ಇದರ ವಿರುದ್ದ ಸರ್ಕಾರವು ಶೀಘ್ರವಾಗಿ ಕ್ರಮ ಕೈಗೊಂಡು ಅವರ ವಿರುದ್ದ ದೇಶದ್ರೋಹದ ಪ್ರಕರಣವನ್ನು ದಾಖಲಿಸಿತ್ತು. ಈಗ ತ್ರಿಪುರಾದಲ್ಲಿ ತಮ್ಮದೇ ಪಕ್ಷವಿರುವುದರಿಂದ ಅರುಣ್ ಭೌಮಿಕ್ ಅವರ ವಿರುದ್ದ ಯಾವ ರೀತಿಯ ಕ್ರಮ ಕೈಗೊಳ್ಳುವುದು ಎಂದು ಕಾದುನೋಡಬೇಕಿದೆ.