ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರನ್ನು ಗುರುವಾರ, ಡಿಸೆಂಬರ್ 29 ರಂದು ಗುಜರಾತ್ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದಾರೆ. ಆ ಮೂಲಕ ಕೇವಲ ಒಂದು ತಿಂಗಳ ಅವಧಿಯಲ್ಲಿ ಗುಜರಾತ್ ಪೊಲೀಸರು ಸಾಕೇತ್ ಗೋಖಲೆಯನ್ನು ಮೂರನೇ ಬಾರಿ ವಶಕ್ಕೆ ಪಡೆದಿದ್ದಾರೆ. ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ದಿಲ್ಲಿಯಿಂದ ಬಂಧಿಸಿದ್ದು, ಅಹಮದಾಬಾದ್‌ಗೆ ಕರೆದೊಯ್ಯಲಾಗುತ್ತಿದೆ ಎಂದು ವರದಿಯಾಗಿದೆ.
ಅಸ್ಸಾಂ ರಾಜ್ಯದ ಚರ್ಚ್ ಗಳ ಬಗ್ಗೆ ನಿಗಾ ಇರಿಸಲು ಪೊಲೀಸ್ ಸ್ಪೆಷಲ್ ಬ್ರಾಂಚ್ ಎಸ್‌ಪಿ ಬರೆದಿರುವ ರಹಸ್ಯ ಪತ್ರದ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿ ವ್ಯಾಟಿಕನ್‌ನ ಪವಿತ್ರ ರಾಯಭಾರ ಕಚೇರಿಗೆ ಟಿಎಂಸಿ ಪತ್ರ ಬರೆದ ಬೆನ್ನಲ್ಲೇ ಈ ಬಂಧನ ನಡೆದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ನಡೆಯು “ಕ್ರೈಸ್ತರ ಮೇಲೆ ಸರ್ಕಾರಿ ಪ್ರಾಯೋಜಿತ ಕಿರುಕುಳ” ಎಂದು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಪತ್ರದಲ್ಲಿ ಹೇಳಿದ್ದರು.
ಈ ತಿಂಗಳ ಆರಂಭದಲ್ಲಿ, ಸೇತುವೆ ಕುಸಿತದ ನಂತರ ಪ್ರಧಾನಿ ನರೇಂದ್ರ ಮೋದಿಯವರ ಮೋರ್ಬಿ ಭೇಟಿಯ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರತಿಪಾದಿಸುವ ರೀತಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು.
ರಾಜಸ್ಥಾನ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಡಿಸೆಂಬರ್ 6 ರಂದು ರಾಜಸ್ಥಾನದ ಜೈಪುರದಿಂದ ಗುಜರಾತ್ ಪೊಲೀಸರು ಗೋಖಲೆ ಅವರನ್ನು ಬಂಧಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಅಲ್ಲಿಂದ ಅವರನ್ನು ಅಹಮದಾಬಾದ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಡಿಸೆಂಬರ್ 8 ರಂದು ನ್ಯಾಯಾಲಯದಿಂದ ಜಾಮೀನು ನೀಡಲಾಯಿತು, ಮತ್ತೊಂದು ಪ್ರಕರಣದಲ್ಲಿ ಗಂಟೆಗಳ ನಂತರ ಮತ್ತೆ ಬಂಧಿಸಲಾಯಿತು.
ನಂತರ ಡಿಸೆಂಬರ್ 9 ರಂದು ಎರಡನೇ ಪ್ರಕರಣದಲ್ಲಿ ಸಾಕೇತ್ ಗೋಖಲೆಗೆ ಜಾಮೀನು ನೀಡಲಾಯಿತು.
ಎರಡನೇ ಬಾರಿಗೆ ಗೋಖಲೆಯವರ ಬಂಧನದ ನಂತರ, ಐದು ಸದಸ್ಯರ TMC ಸಂಸದೀಯ ನಿಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಪಕ್ಷದ ವಕ್ತಾರರ ಬಂಧನದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಿತು.
“ನಮ್ಮ ರಾಷ್ಟ್ರೀಯ ವಕ್ತಾರರ ಕಿರುಕುಳ ಮತ್ತು ಚಿತ್ರಹಿಂಸೆ ಕುರಿತು ನಿಯೋಗವು ಸಿಇಸಿಯನ್ನು ಭೇಟಿ ಮಾಡಿತು. ಅವರನ್ನು ಅಹಮದಾಬಾದ್‌ನಲ್ಲಿ ಒಮ್ಮೆ ಬಂಧಿಸಲಾಯಿತು ಮತ್ತು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅವರ ವಿರುದ್ಧ ಮೊರ್ಬಿಯಲ್ಲೂ ಪ್ರಕರಣ ದಾಖಲಿಸಲಾಗಿದೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಅವರು ಟ್ವೀಟ್ ಮಾಡಿದ್ದಕ್ಕೆ ಸೆಕ್ಷನ್ 125 (ಜನತಾ ಪ್ರಾತಿನಿಧ್ಯ ಕಾಯ್ದೆ) ಅಡಿಯಲ್ಲಿ ಅವರ ವಿರುದ್ಧ ತಪ್ಪಾಗಿ ಆರೋಪ ಹೊರಿಸಲಾಗಿದೆ. ಹಾಗಾಗಿ, ಇದು ಕಿರುಕುಳದ ಪ್ರಕರಣವಾಗಿದೆ” ಎಂದು ಸಭೆಯ ನಂತರ ಟಿಎಂಸಿ ಸಂಸದ ಸೌಗತ ರೇ ಹೇಳಿದ್ದರು.











