-ರವಿ ಕೃಷ್ಣಾ ರೆಡ್ಡಿ
ಹಿರಿಯ ಮತ್ತು ಪ್ರಾಮಾಣಿಕ ರಾಜಕಾರಣಿ, ಮಾಜಿ ಶಾಸಕ/ಸಚಿವ/ಸಂಸದ ಜಿ. ಮಾದೇಗೌಡರು 94 ವರ್ಷಗಳ ಸಾರ್ಥಕ ಜೀವನ ನಡೆಸಿ ನೆನ್ನೆ ರಾತ್ರಿ ನಿಧನರಾದರು.
ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರ ಕುಟುಂಬದ ಭೂಅಕ್ರಮಗಳ ಬಗ್ಗೆ ಎಸ್.ಆರ್.ಹಿರೇಮಠರು ಹೋರಾಟ ಆರಂಭಿಸಿದ ಕಾರಣಕ್ಕೆ ಕಳೆದ ನಾಲ್ಕೈದು ವರ್ಷಗಳಲ್ಲಿ ಮಾದೇಗೌಡರನ್ನು ಮೂರ್ನಾಲ್ಕು ಸಲ ಭೇಟಿ ಆಗುವ ಸಂದರ್ಭ ಬಂದಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅವರಿಗೆ ಮರೆವು ಹೆಚ್ಚಾಗಿತ್ತು. ಆದರೆ ಹಳೆಯ ವಿಚಾರಗಳು ನೆನಪಿದ್ದವು. ಕಳೆದ ಸಲ ಭೇಟಿ ಆದಾಗ ಅವರು ತಾವು ಶಾಸಕ ಆದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ, ಆಗ, 1962ರಲ್ಲಿ, ಚುನಾವಣೆ ಪ್ರಚಾರಕ್ಕೆ ಎಂದು ಸುಮಾರು 15-16 ಸಾವಿರ ರೂಪಾಯಿ ದೇಣಿಗೆ ಸಂಗ್ರಹ ಆಗಿತ್ತಂತೆ. ಅದರಲ್ಲಿ ಸುಮಾರು 12 ಸಾವಿರ ಮಾತ್ರ ಖರ್ಚಾಗಿ, ಇನ್ನೂ ನಾಲ್ಕು ಸಾವಿರ ರೂಪಾಯಿ ಉಳಿದಿತ್ತಂತೆ. ಆ ಚುನಾವಣೆಯಲ್ಲಿ ಅವರು ಗೆದ್ದು ಶಾಸಕರಾದರು. ಆಗ ಆ ಉಳಿದ ದೇಣಿಗೆ ಹಣವನ್ನು ಏನು ಮಾಡಬೇಕು ಎನ್ನುವ ವಿಷಯ ಬಂದಾಗ, ಜೊತೆಗಿದ್ದವರೆಲ್ಲರೂ ‘ನಿಮಗೆ ಮಂಡ್ಯದಲ್ಲಿ ಮನೆ ಇಲ್ಲ, ಆ ಉಳಿದ ಹಣದಲ್ಲಿ ನಿವೇಶನ ಕೊಂಡುಕೊಂಡು ಮನೆ ಕಟ್ಟಿಕೊಳ್ಳಿ’ ಎಂದು ಒತ್ತಾಯಿಸಿದರಂತೆ. ಅದೇ ಜಾಗದ ಮನೆಯಲ್ಲಿಯೇ ನಾವು ಅವರನ್ನು ಹಲವು ಸಲ ಭೇಟಿ ಆಗಿದ್ದದ್ದು.

ಅಂತಹ ಮುಗ್ಧ ದಿನಗಳ ರಾಜಕಾರಣಿ ಮಾದೇಗೌಡರು. ಕಾವೇರಿ ನದಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗಾಗಿ ಬಡಿದಾಡಿದರು. ಮದ್ದೂರು ತಾಲ್ಲೂಕಿನ ಕಾಳಮುದ್ದನದೊಡ್ಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಟ್ಟರು. ಮಂಡ್ಯದಲ್ಲಿ ಗಾಂಧಿಭವನ ನಿರ್ಮಿಸಿ, ರಾಜಕಾರಣದಲ್ಲಿ ಆದರ್ಶ ಮತ್ತು ಮೌಲ್ಯಗಳು ಇರಬೇಕು ಎಂದು ಪ್ರತಿಪಾದಿಸಿದರು. ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ಆಗಬಾರದು ಎಂದು ಒತ್ತಾಯಿಸಿದ್ದರು. ಕಳೆದ ಎರಡು ದಶಕಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದು ರಾಜಕೀಯ ಮುತ್ಸದ್ದಿಯಾಗಿ ಗೌರವ ಮತ್ತು ಘನತೆಯನ್ನು ಹೆಚ್ಚಿಸಿಕೊಂಡಿದ್ದರು.

ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟು ಕಳೆದ 15-20 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹುಶಃ ಹದಿನೈದು ದಿನಗಳಿಂದ ಕೆ.ಎಂ.ದೊಡ್ಡಿಯ ಅವರದೇ ಹೆಸರಿನ ಆಸ್ಪತ್ರೆಯಲ್ಲಿ ಐಸಿಯು’ನಲ್ಲಿ ಇದ್ದರು. ಇದೇ ಮಂಗಳವಾರ ನಾನು ಮಂಡ್ಯಕ್ಕೆ ಹೋಗಿದ್ದಾಗ, ಕೆ.ಎಂ.ದೊಡ್ಡಿಯ ಆಸ್ಪತ್ರೆಗೂ ಭೇಟಿ ಕೊಟ್ಟು ಅವರನ್ನು ನೋಡಿಕೊಂಡು ಬಂದಿದ್ದೆ. KRS ಪಕ್ಷದ ಕಾರ್ಯಕ್ರಮವೊಂದರ ನಿಮಿತ್ತ ನೆನ್ನೆ ಸಂಜೆ ಏಳರ ಸಮಯದಲ್ಲಿ ಅದೇ ಆಸ್ಪತ್ರೆಯ ಮುಂದೆ ಸುಮಾರು ಒಂದು ಗಂಟೆ ಇದ್ದೆ. ನಾವು ಬಹುಶಃ ಅಲ್ಲಿಂದ ಹೊರಟ ಒಂದೂವರೆ ಗಂಟೆಗೆ ಅವರು ನಮ್ಮನ್ನು ಅಗಲಿದ್ದಾರೆ. ಕಾಕತಾಳೀಯ.
ಇಂದು ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆಂದು ಅವರ ಊರಿಗೆ ಕೊಂಡೊಯ್ಯುವಾಗ ಸಾರ್ವಜನಿಕರು ಗೌರವ ಸಲ್ಲಿಸಲೆಂದು ಆ ವಾಹನವನ್ನು ಸ್ವಲ್ಪ ಹೊತ್ತು ಮದ್ದೂರಿನಲ್ಲಿ ನಿಲ್ಲಿಸಿದ್ದರು. ಅಲ್ಲಿ ಹಾಜರಿದ್ದ ನಾನು ಮತ್ತು ನಮ್ಮ ಪಕ್ಷದ ಸದಸ್ಯರು ಹಿರಿಯರಾದ ಮಾದೇಗೌಡರಿಗೆ ಅಲ್ಲಿಯೇ ಅಂತಿಮನಮನ ಸಲ್ಲಿಸಿದೆವು.

ಮಂಡ್ಯದ ರಾಜಕಾರಣಿಗಳು ಒಂದು ಕಾಲದಲ್ಲಿ ಪ್ರಾಮಾಣಿಕರೂ, ಯೋಗ್ಯರೂ, ದಕ್ಷರೂ ಆಗಿದ್ದರು. ಇತ್ತೀಚಿನ ದಶಕಗಳಲ್ಲಿ ಎಲ್ಲಾ ಕಡೆಯಂತೆ ಇಲ್ಲಿಯೂ ಅದಕ್ಕೆ ಬರ. ಮಾದೇಗೌಡರ ಮತ್ತು ಸುಮಾರು ಎರಡು ತಿಂಗಳ ಹಿಂದೆ ತೀರಿಹೋದ ಮತ್ತೊಬ್ಬ ಸಜ್ಜನ ರಾಜಕಾರಣಿ ಕೆ.ಆರ್.ಪೇಟೆ ಕೃಷ್ಣರಂತಹವರ ನೆನಪಿನಲ್ಲಿ ಮಂಡ್ಯದ ಜನತೆ ಅಲ್ಲಿಯ ರಾಜಕೀಯವನ್ನು ಶುದ್ಧಗೊಳಿಸಲು ಮುಂದಾಗಬೇಕು. ಅದೇ ಅವರಿಗೆ ಸಲ್ಲಿಸಬಹುದಾದ ಪ್ರಾಮಾಣಿಕ ಶ್ರದ್ಧಾಂಜಲಿ.
ಓಂ ಶಾಂತಿ.
ಲೇಖಕರು- ರವಿ ಕೃಷ್ಣಾ ರೆಡ್ಡಿ, ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷರು








