ರಾಜಕೀಯ ಪಕ್ಷಗಳ ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುವುದು ಮತದಾರನ ಹಕ್ಕು
ಭಾಗ-2
ನಾ ದಿವಾಕರ
ಇನ್ನೂ ಒಂದು ಹೆಜ್ಜೆ ಮುಂದುವರೆದು ನಷ್ಟದಲ್ಲಿರುವ ಕಂಪನಿಗಳೂ ದೇಣಿಗೆ ನೀಡಲು ಅವಕಾಶ ಕಲ್ಪಿಸಲಾಯಿತು. ತತ್ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಪ್ರಬಲವಾಗಿರುವ ಕಾರ್ಪೋರೇಟ್ ಉದ್ದಿಮೆಗಳಿಗೆ ರಾಜಕೀಯ ದೇಣಿಗೆ ನೀಡುವ ಸಲುವಾಗಿಯೇ ಶೆಲ್ ಕಂಪನಿಗಳನ್ನು ಸೃಷ್ಟಿಸಲು ಅನುಕೂಲ ಮಾಡಿಕೊಟ್ಟಂತಾಯಿತು.
ಯಾವುದೇ ದೇಶದಲ್ಲಾದರೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ/ನಿರ್ವಹಿಸುವ ಸೆಂಟ್ರಲ್ ಬ್ಯಾಂಕ್‌ಗಳು ಮಾತ್ರ ಕರೆನ್ಸಿ ನೋಟುಗಳು ಮತ್ತು ಬಾಂಡ್‌ಗಳನ್ನು ವಿತರಿಸುವ ಅಧಿಕಾರ ಹೊಂದಿರುತ್ತವೆ. ಚುನಾವಣಾ ಬಾಂಡ್ ಯೋಜನೆಯ ಸಲುವಾಗಿ ಕೇಂದ್ರ ಸರ್ಕಾರ ಆರ್‌ಬಿಐ ಕಾಯ್ದೆಯ ಸೆಕ್ಷನ್ 31ಕ್ಕೆ ತಿದ್ದುಪಡಿ ಮಾಡಿ ಸೆಕ್ಷನ್ 31(3) ಉಪನಿಯಮವನ್ನು ಅಳವಡಿಸುವ ಮೂಲಕ ಕೇಂದ್ರ ಸರ್ಕಾರವು ಯಾವುದೇ ಷೆಡ್ಯೂಲ್ ಬ್ಯಾಂಕುಗಳಿಗೆ ಚುನಾವಣಾ ಬಾಂಡ್‌ಗಳನ್ನು ವಿತರಿಸುವ/ನಗದೀಕರಿಸುವ ಅಧಿಕಾರ ನೀಡಬಹುದು ಎಂದು ಘೋಷಿಸಿತ್ತು. ತನ್ಮೂಲಕ ಕೇಂದ್ರ ಸರ್ಕಾರದ ಆದೇಶದಂತೆ ಬ್ಯಾಂಕುಗಳು ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಸಾಧ್ಯವಾಗಿತ್ತು. ಆದರೆ ಸರ್ಕಾರದ ಸುಪರ್ದಿಯಲ್ಲೇ ಕಾರ್ಯನಿರ್ವಹಿಸುವ, ಸರ್ಕಾರದ ಎಲ್ಲ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ಗೆ ಕೇಂದ್ರ ಸರ್ಕಾರ ಬಾಂಡ್ ವಿತರಣೆಯ ಅಧಿಕಾರವನ್ನು ಅಧಿಕೃತವಾಗಿ ದಯಪಾಲಿಸಿತ್ತು.
ಚುನಾವಣಾ ಬಾಂಡ್ ಯೋಜನೆಯನ್ನು ಬಲವಾಗಿ ಸಮರ್ಥಿಸಿದ್ದ ಕೇಂದ್ರ ಸರ್ಕಾರ ಈ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಉದ್ದಿಮೆಯು ತಮ್ಮ ಇಚ್ಚೆಯನುಸಾರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ಸುಲಭವಾಗುವುದಷ್ಟೆ ಅಲ್ಲದೆ ನ್ಯಾಯಯುತವಾದ ಬ್ಯಾಂಕಿಂಗ್ ಮಾರ್ಗದ ಮೂಲಕ ನೀಡಬಹುದು, ಇದರಿಂದ ನಗದು ರೂಪದಲ್ಲಿ ನೀಡುವ ಅನಿಯಂತ್ರಿತ ದೇಣಿಗೆಗಳನ್ನು ತಪ್ಪಿಸಬಹುದು ಎಂದು ಹೇಳಿತ್ತು. ದೇಣಿಗೆ ನೀಡುವ ವ್ಯಕ್ತಿ ಅಥವಾ ಉದ್ದಿಮೆಯ ಗೋಪ್ಯತೆಯನ್ನು ಕಾಪಾಡುವ ಮೂಲಕ ದೇಣಿಗೆದಾರರು ಅಕ್ರಮ ಮಾರ್ಗ ಅನುಸರಿಸದೆ ರಾಜಕೀಯ ದೇಣಿಗೆ ನೀಡಲು ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸಿತ್ತು. ಬ್ಯಾಂಕಿಂಗ್ ವಾಹಿನಿಗಳನ್ನು ಬಳಸುವುದರಿಂದ ಚುನಾವಣಾ ನಿಧಿ ಸಂಗ್ರಹಣೆಯಲ್ಲಿ ಕಪ್ಪುಹಣವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ವಾದಿಸಿದ್ದ ಕೇಂದ್ರ ಸರ್ಕಾರ ಗೋಪ್ಯತೆಯನ್ನು ಕಾಪಾಡುವುದರಿಂದ ರಾಜಕೀಯ ಪಕ್ಷಗಳು ದೇಣಿಗೆ ನೀಡದವರ ವಿರುದ್ಧ ಪ್ರತೀಕಾರ ಅಥವಾ ಒತ್ತಡದ ಕ್ರಮಗಳನ್ನು ಅನುಸರಿಸಲಾಗುವುದಿಲ್ಲ ಎಂದು ಸರ್ಕಾರ ತನ್ನ ಸಮರ್ಥನೆಯಲ್ಲಿ ಹೇಳಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರವು, ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯನ್ನು ತಿಳಿದುಕೊಳ್ಳುವುದು ಜನತೆಯ ಸಾಮಾನ್ಯ ಹಕ್ಕು ಎನ್ನುವುದನ್ನೂ ನಿರಾಕರಿಸಿತ್ತು.
ನ್ಯಾಯಾಂಗದ ರಕ್ಷಣೆಯಲ್ಲಿ ಪ್ರಜಾತಂತ್ರ
ಸರ್ಕಾರದ ಈ ಎಲ್ಲ ಪ್ರತಿಪಾದನೆ/ವಾದ ಸರಣಿಯನ್ನೂ ತಿರಸ್ಕರಿಸ್ಕರಿಸುವ ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯೇ ಮೂಲತಃ ಸಂವಿಧಾನದ ಅನುಚ್ಚೇದ 19(1)(A) ಗೆ ವ್ಯತಿರಿಕ್ತವಾಗಿದ್ದು ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ಮತ ಚಲಾಯಿಸುವ ಸಾಂವಿಧಾನಿಕ ಕರ್ತವ್ಯ ನಿಭಾಯಿಸುವ ಜನತೆ ಯಾವುದೇ ಮಾಹಿತಿಯನ್ನು ಪಡೆಯುವ ಹಕ್ಕು ಹೊಂದಿರುವುದನ್ನು ಕೋರ್ಟ್ ಪುನರುಚ್ಛರಿಸಿದೆ. ಮತದಾರರು ತಮ್ಮ ಮತ ಚಲಾವಣೆಯ ಔಚಿತ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುವವರ ಮಾಹಿತಿ ಪಡೆಯುವುದು ಅತ್ಯವಶ್ಯ ಎಂದು ಹೇಳಿರುವ ನ್ಯಾಯಾಲಯವು , ಚುನಾವಣಾ ಬಾಂಡ್ ಯೋಜನೆಯು ಮುಖ್ಯವಾಗಿ ಮತದಾರರ ಈ ಹಕ್ಕಿಗೆ ಚ್ಯುತಿ ಉಂಟುಮಾಡುತ್ತದೆ ಎಂದು ಆರೋಪಿಸಿದೆ. ಕಪ್ಪುಹಣದ ನಿಯಂತ್ರಣವೇ ಮುಖ್ಯ ಉದ್ದೇಶವಾಗಿದ್ದಲ್ಲಿ ವಿದ್ಯುನ್ಮಾನ ಸಾಧನಗಳ ಮೂಲಕ ದೇಣಿಗೆ ನೀಡುವುದು ಅಥವಾ ಚುನಾಯಕ ಟ್ರಸ್ಟ್‌ಗಳ ಮೂಲಕ ರವಾನಿಸುವ ಇತರ ಉಪಕ್ರಮಗಳ ಬಗ್ಗೆ ಸರ್ಕಾರ ಯೋಚಿಸಬಹುದಿತ್ತು ಎಂದು ಕೋರ್ಟ್ ಹೇಳಿದೆ. ಜನಪ್ರಾತಿನಿಧ್ಯ ಕಾಯ್ದೆ , 2017 ಹಣಕಾಸು ಕಾಯ್ದೆ, 2013ರ ಕಂಪನಿ ಕಾಯ್ದೆ ಇವುಗಳಿಗೆ ಮಾಡಿರುವ ತಿದ್ದುಪಡಿಗಳು ಸಂವಿಧಾನ ಅನುಚ್ಚೇದ 19 ಮತ್ತು 14ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿರುವ ನ್ಯಾಯಪೀಠ , ಸಂವಿಧಾನದಲ್ಲಿ ಒದಗಿಸಿರುವ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಈ ಅನುಚ್ಚೇದಗಳನ್ನು ಯಾವುದೇ ರೀತಿಯಲ್ಲೂ ಉಲ್ಲಂಘಿಸಲಾಗುವುದಿಲ್ಲ ಎಂದು ಹೇಳಿದೆ.
Association for Democratic Rights̈ (ADR) ಸಂಸ್ಥೆ ಒದಗಿಸಿರುವ ದತ್ತಾಂಶಗಳ ಅನುಸಾರ 2018ರಲ್ಲಿ ಚುನಾವಣಾ ಬಾಂಡ್ ಯೋಜನೆ ಜಾರಿಯಾದ ನಂತರ 16,518 ಕೋಟಿ ರೂಗಳ ಪೈಕಿ ಬಿಜೆಪಿ ಅತಿ ದೊಡ್ಡ ಫಲಾನುಭವಿಯಾಗಿದ್ದು ಶೇ. 55ರಷ್ಟು (6,565 ಕೋಟಿ) ಪಡೆದಿದೆ. 2013-14ರಲ್ಲಿ ದೇಶದ ಅತಿ ಹೆಚ್ಚು ಸಂಪದ್ಭರಿತ ಪಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿದ ಬಿjeಪಿ ಆ ವರ್ಷದಲ್ಲಿ ಒಟ್ಟು 673.8 ಕೋಟಿ ರೂ ಆದಾಯ ದಾಖಲಿಸಿತ್ತು. ಅಂದಿನಿಂದಲೂ ಬಿಜೆಪಿಯ ಆದಾಯ ಏರುಗತಿಯಲ್ಲೇ ಇದೆ. 2018-19ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಆದಾಯ 1,027 ಕೋಟಿ ರೂಗಳಿಂದ 2,410 ಕೋಟಿ ರೂಗಳಿಗೆ ಏರಿತ್ತು. ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಆದಾಯ 199 ಕೋಟಿ ರೂಗಳಿಂದ 918 ಕೋಟಿ ರೂಗಳಿಗೆ ಏರಿಕೆಯಾಗಿತ್ತು. 2022-23ರಲ್ಲಿ ಬಿಜೆಪಿಯ ಒಟ್ಟು ಆದಾಯ, 1,300 ಕೋಟಿ ರೂ ಬಾಂಡ್‌ಗಳನ್ನೂ ಸೇರಿದಂತೆ, 2,360 ಕೋಟಿ ರೂಗಳಷ್ಟಾಗಿತ್ತು. ಅರ್ಧಕ್ಕಿಂತಲೂ ಹೆಚ್ಚು ದೇಣಿಗೆ ಕಾರ್ಪೋರೇಟ್ ಉದ್ದಿಮೆಗಳಿಂದಲೇ ಬರುತ್ತದೆ ಎಂದು ADR ವರದಿಯಲ್ಲಿ ಹೇಳಲಾಗಿದೆ.
ಈ ಅಸಮತೋಲನದ ಮತ್ತು ಅಪಾರದರ್ಶಕ ವ್ಯವಹಾರಗಳ ಹಿನ್ನೆಲೆಯಲ್ಲೇ ಇದೇ ಮಾರ್ಚ್ 6 ಒಳಗೆ ಎಸ್‌ಬಿಐ ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಲಾದ ಮೊತ್ತದ ಸಂಪೂರ್ಣ ವಿವರಗಳನ್ನು, ದೇಣಿಗೆದಾರರ ಹಾಗೂ ದೇಣಿಗೆ ಪಡೆದ ಪಕ್ಷಗಳ ವಿವರಗಳನ್ನೊಳಗೊಂಡಂತೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ಈ ದಾಖಲೆಗಳನ್ನು ಒದಗಿಸಲು ಜೂನ್ 2024ರವರೆಗೆ ಸಮಯಾವಕಾಶ ನೀಡುವಂತೆ ಎಸ್‌ಬಿಐ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದು ಅಚ್ಚರಿದಾಯಕ ನಡೆಯಾಗಿದೆ. ಎಸ್‌ಬಿಐ ತನ್ನ ಅರ್ಜಿಯಲ್ಲಿ ಒದಗಿಸಿರುವ ಕಾರಣಗಳು ಕುತೂಹಲಕಾರಿಯಾಗಿದ್ದು, ಒಪ್ಪುವಂತಹುದಲ್ಲ ಎಂದು ಆರ್ಥಿಕ ತಜ್ಞರು, ನ್ಯಾಯವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಕೋರ್ಟ್ ಆದೇಶದಲ್ಲಿ ಆರು ಅಂಶಗಳನ್ನು ಸ್ಪಷ್ಟವಾಗಿ ಕೋರಿದೆ. ಬಾಂಡ್‌ಗಳನ್ನು ಖರೀದಿಸಿರುವವರು ಯಾರು, ಅವುಗಳ ಮೊತ್ತ ಮತ್ತು ದಿನಾಂಕ, ಯಾವ ಪಕ್ಷಗಳು ಬಾಂಡ್‌ಗಳನ್ನು ಪಡೆದಿವೆ, ಅವುಗಳನ್ನು ಯಾವಾಗ ನಗದೀಕರಿಸಲಾಗಿದೆ ಮತ್ತು ನಗದೀಕರಿಸಲಾದ ಮೊತ್ತ ಎಷ್ಟು ಈ ವಿವರಗಳನ್ನಷ್ಟೇ ನ್ಯಾಯಾಲಯಕ್ಕೆ ಒದಗಿಸಬೇಕಿದೆ.
ಡಿಜಿಟಲ್ ಬ್ಯಾಂಕಿಂಗ್‌ನ ಮಾಹಿತಿ ಕೋಶ
ಈ ಎಲ್ಲ ಮಾಹಿತಿ ದತ್ತಾಂಶಗಳನ್ನು ಹೊರತೆಗೆಯಲು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಹೊಂದಿರುವ ಎಸ್‌ಬಿಐಗೆ ಹೆಚ್ಚೆಂದರೆ ಎರಡು ವಾರಗಳ ಸಮಯ ಬೇಕಾಗಬಹುದು ಎಂದು ತಜ್ಞರು ಹೇಳುತ್ತಾರೆ. ಮೇಲಾಗಿ 2019ರಲ್ಲಿ ಚುನಾವಣಾ ಬಾಂಡ್ ಯೋಜನೆಯ ನಿರ್ವಹಣೆಯ ಬಗ್ಗೆ ಸ್ಪಷ್ಟ ನಿಯಮಾವಳಿಗಳನ್ನು ನೀಡಿದ್ದ ಸುಪ್ರೀಂಕೋರ್ಟ್ , ನ್ಯಾಯಾಲಯವು ಯಾವುದೇ ಸಂದರ್ಭದಲ್ಲಿ ಕೇಳಿದರೂ ಕೂಡಲೇ ಮಾಹಿತಿ ದತ್ತಾಂಶವನ್ನು ಒದಗಿಸುವ ರೀತಿಯಲ್ಲಿ ಬ್ಯಾಂಕ್ ತನ್ನ ಲೆಕ್ಕಪತ್ರಗಳನ್ನು ನಿರ್ವಹಿಸುವಂತೆ ಆದೇಶಿಸಿತ್ತು. ಚುನಾವಣಾ ಬಾಂಡ್ ಯೋಜನೆ ಜಾರಿಗೊಳಿಸಿದಾಗ ಅಧಿಕಾರದಲ್ಲಿದ್ದ ಕೇಂದ್ರ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರ ಅಭಿಪ್ರಾಯದಲ್ಲಿ ಎಸ್‌ಬಿಐ ಕೋರ್ಟ್ ಕೋರಿರುವ ವಿವರಗಳನ್ನು ಒಂದೇ ದಿನದಲ್ಲಿ ಕ್ರೋಢೀಕರಿಸಿ ಸಲ್ಲಿಸಬಹುದಾಗಿದೆ. ಡಿಜಿಟಲ್ ವ್ಯವಸ್ಥೆಯಲ್ಲಿ ಇದು ಅಸಾಧ್ಯವಲ್ಲ ಎನ್ನುವುದು ಸಾಮಾನ್ಯ ಜ್ಞಾನಕ್ಕೂ ನಿಲುಕುವ ಸತ್ಯ.
ಈ ಹಿನ್ನೆಲೆಯಲ್ಲಿ ನೋಡಿದಾಗ ಎಸ್‌ಬಿಐ ಜೂನ್ 30ರವರೆಗೆ ಸಮಯಾವಕಾಶ ಕೋರಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆರೋಪಿಸಿರುವ ADR ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಚುನಾವಣಾ ಬಾಂಡ್‌ಗಳ 22 ಸಾವಿರ ದಾಖಲೆಗಳನ್ನು ಒದಗಿಸಲು ಈಗಾಗಲೇ ಸುಪ್ರೀಂಕೋರ್ಟ್ ಮೂರು ವಾರಗಳ ಅವಕಾಶ ನೀಡಿದ್ದು ಮಾರ್ಚ್ 6ರ ಒಳಗೆ ಒದಗಿಸುವಂತೆ ಆದೇಶಿಸಿತ್ತು. ಆದರೆ ಎಸ್‌ಬಿಐ ಅಧಿಕಾರಿಗಳು ಇನ್ನೂ ಮೂರು ತಿಂಗಳ ಕಾಲಾವಕಾಶ ಕೋರಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೇ 2024ರ ಒಳಗೆ ಚುನಾವಣೆಗಳು ನಡೆಯುವುದರಿಂದ, ಚುನಾವಣೆಗಳಿಗೆ ಮುನ್ನ ಈ ಮಾಹಿತಿ ಹೊರಬರದಂತೆ ತಡೆಯುವುದು ಸರ್ಕಾರದ ಉದ್ದೇಶವಾಗಿರಬಹುದು ಎಂದು ADR ಆರೋಪಿಸಿದೆ.
ಪ್ರತಿದಿನ 44 ದಶಲಕ್ಷ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಗೆ 22 ಸಾವಿರ ವಹಿವಾಟುಗಳ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಒದಗಿಸುವ ಸಾಮರ್ಥ್ಯ ಇರುತ್ತದೆ ಎಂದು ಪ್ರತಿಪಾದಿಸುವ ಆರ್ಥಿಕ ತಜ್ಞರು, ಸಾಮಾಜಿಕ ಕಾರ್ಯಕರ್ತರು ಬ್ಯಾಂಕಿನ ವಿಳಂಬ ನೀತಿಯ ಔಚಿತ್ಯವನ್ನೇ ಪ್ರಶ್ನಿಸುತ್ತಿದ್ದಾರೆ. ಎಸ್‌ಬಿಐ ಸಲ್ಲಿಸಿರುವ ಅರ್ಜಿ ಹಾಗೂ ADR ಎಸ್‌ಬಿಐ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆಯ ಅರ್ಜಿಯನ್ನು ಮಾರ್ಚ್ 11ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ನ್ಯಾಯಪೀಠ ವಿಚಾರಣೆಗೊಳಪಡಿಸಲಿದೆ. ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ತಿರಸ್ಕರಿಸಿದ ಪೀಠವೇ ಈ ಮೇಲ್ಮನವಿಗಳನ್ನೂ ಪರಾಮರ್ಶೆಗೊಳಪಡಿಸಲಿದ್ದು, ಕೋರ್ಟ್ ತೀರ್ಪನ್ನು ಕಾದು ನೋಡಬೇಕಿದೆ.
ಇದು ಉತ್ತರದಾಯಿತ್ವದ ಪ್ರಶ್ನೆ
ತಿನ್ನುವುದೂ ಇಲ್ಲ ತಿನ್ನಲು ಬಿಡುವುದೂ ಇಲ್ಲ ಎಂಬ ಉದಾತ್ತ ಘೋಷಣೆಯೊಂದಿಗೆ ಆಳ್ವಿಕೆ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಬಾಂಡ್ ಎಂಬ ಯೋಜನೆಯ ಮೂಲಕ ಅಪಾರದರ್ಶಕ ಆಡಳಿತಕ್ಕೆ ಒಂದು ಶಾಸನಬದ್ಧ ಭೂಮಿಕೆಯನ್ನು ಒದಗಿಸಿರುವುದು ವಿಪರ್ಯಾಸ. ಕೋಟ್ಯಧಿಪತಿಗಳಿಂದಲೇ ತುಂಬಿರುವ ಶಾಸನ ಸಭೆಗಳು ಚುನಾವಣಾ ರಾಜಕಾರಣದಲ್ಲಿ ಅವ್ಯಾಹತವಾಗಿ ಹರಿಯುವ ಕಾರ್ಪೋರೇಟ್ ಬಂಡವಾಳದ ಫಲಾನುಭವಿಗಳಿಗೆ ಆಸರೆಯಾಗಿರುವುದು ವರ್ತಮಾನ ಭಾರತದ ದೊಡ್ಡ ದುರಂತ. ಕಾರ್ಪೋರೇಟ್ ದೇಣಿಗೆಯ ಅತಿದೊಡ್ಡ ಫಲಾನುಭವಿಯಾಗಿ ಬಿಜೆಪಿ ಸಹಜವಾಗಿಯೇ ಚುನಾವಣೆಗಳ ನಿರ್ವಹಣೆಯಲ್ಲಿ ಮೇಲುಗೈ ಸಾಧಿಸುತ್ತದೆ. ದೇಣಿಗೆ ನೀಡುವ ಬೃಹತ್ ಉದ್ದಿಮೆದಾರರು ಮಾರುಕಟ್ಟೆ ಆರ್ಥಿಕತೆಯನ್ನು ಸಂರಕ್ಷಿಸುವ ಆರ್ಥಿಕ ನೀತಿಗಳನ್ನೂ ಪ್ರಭಾವಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ. 2019ರ ವಾರ್ಷಿಕ ಬಜೆಟ್‌ನಲ್ಲಿ ಕಾರ್ಪೋರೇಟ್ ತೆರಿಗೆ ದರವನ್ನು ಶೇ 30 ರಿಂದ ಶೇ 22ಕ್ಕೆ ಇಳಿಸಿರುವುದು ಒಂದು ನಿದರ್ಶನವಷ್ಟೇ.
ಸಾಂವಿಧಾನಿಕ ನೈತಿಕತೆ-ಉತ್ತರದಾಯಿತ್ವ ಬಹುಪಾಲು ಇಲ್ಲವಾಗಿರುವ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಇರುವ ಮತ್ತೊಂದು ಮಾರ್ಗ ಎಂದರೆ ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಮತ್ತು ಪ್ರಾಮಾಣಿಕ ನಿರ್ವಹಣೆ. ಈ ಎರಡೂ ಉನ್ನತಾದರ್ಶಗಳನ್ನು ಅಧಿಕಾರಾರೂಢ ಪಕ್ಷಗಳು ಅನುಸರಿಸುತ್ತಿವೆಯೇ ಎಂದು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ. ಚುನಾವಣಾ ಬಾಂಡ್ ಯೋಜನೆ ಈ ಹಕ್ಕುಗಳನ್ನು ನಿರಾಕರಿಸುವ ಒಂದು ಯೋಜನೆಯಾಗಿದ್ದು, ಸಹಜವಾಗಿಯೇ ಸುಪ್ರೀಂಕೋರ್ಟ್‌ನಿಂದ ಅಸಾಂವಿಧಾನಿಕ ಎಂದು ಬಣ್ಣಿಸಲ್ಪಟ್ಟಿದೆ. ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನ್ಯಾಯಾಂಗದ ಮಹತ್ವದ ಪಾತ್ರವನ್ನು ಮತ್ತಷ್ಟು ಸ್ಪಷ್ಟಪಡಿಸುವ ಸುಪ್ರೀಂಕೋರ್ಟ್‌ನ ಈ ತೀರ್ಪು, ಪ್ರಜಾಸತ್ತಾತ್ಮಕ ಮೌಲ್ಯಗಳು ನಿರಂತರವಾಗಿ ಕುಸಿಯುತ್ತಿರುವ ಹೊತ್ತಿನಲ್ಲಿ ಒಂದು ಆಶಾಕಿರಣದಂತೆ ಕಾಣುತ್ತದೆ. ಮಾರ್ಚ್ 11ರ ನಂತರ ಹೊರಬರುವ ತೀರ್ಪು ಜನಸಾಮಾನ್ಯರ ಈ ನಂಬಿಕೆ-ವಿಶ್ವಾಸವನ್ನು ಮತ್ತಷ್ಟು ದೃಢಪಡಿಸುತ್ತದೆ ಎಂದು ಆಶಿಸೋಣ.








