ಲೋಕಸಭೆ ವಿರೋಧ ಪಕ್ಷದ ನಾಯಕ ಇಷ್ಟ ಆಗೋದು ಯಾಕೆ..?
2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳಲ್ಲಿ ಗೆಲುವು ಕಾಣಲು ಸಾಧ್ಯವಾಗಿಲ್ಲ. ಆದರೆ 99 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅಧಿಕೃತ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಪಡೆಯಲು ಶಕ್ತವಾಗಿತ್ತು. ಲೋಕಸಭಾ ಮೊದಲ ಅಧಿವೇಶನದಲ್ಲೇ ಬಿಜೆಪಿ ಹಾಗು ನರೇಂದ್ರ ಮೋದಿಗೆ ಕೌಂಟರ್ ಕೊಟ್ಟು ಸುಸ್ತು ಮಾಡಿದ್ದ ರಾಹುಲ್ ಗಾಂಧಿ, ಇದೀಗ ಮತ್ತೆ ಅಧಿವೇಶನದಲ್ಲಿ ಗುಡುಗಲು ಸಜ್ಜಾಗುತ್ತಿದ್ದಾರೆ. ಜನರ ಕಷ್ಟಗಳನ್ನು ಆಲಿಸುತ್ತ ಜನರ ಜೊತೆಗೆ ಬೆರೆಯುತ್ತಿದ್ದಾರೆ. ರಾಹುಲ್ ಗಾಂಧಿಯಲ್ಲಿ ಆಗಿರುವ ಬದಲಾವಣೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ.
ರಾಹುಲ್ ಗಾಂಧಿ ಸುಮಾರು 5ನೇ ತಲೆಮಾರು ನಾಯಕರು ಈ ದೇಶದ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಹುಟ್ಟುತ್ತಲೇ ಸಿಲ್ವರ್ ಸ್ಫೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದರೂ ಯಾವುದೇ ಬಿಗುಮಾನವಿಲ್ಲದೆ, ಜನಸಾಮಾನ್ಯರ ಜೊತೆಗೆ ಪುಟ್ಟ ಮಗುವಿನ ರೀತಿಯಲ್ಲಿ ಬರೆಯುತ್ತಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಎಲ್ಲರೊಳಗೆ ಒಂದಾಗಿ ಹೆಜ್ಜೆ ಹಾಕುತ್ತಾ ಇಡೀ ದೇಶವನ್ನು ಸುತ್ತಿದ್ದ ರಾಹುಲ್ ಗಾಂಧಿ, ಈ ಬಾರಿ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆ ಮುಗಿದು ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ವಿಶ್ರಾಂತಿ ಮೊರೆ ಹೋಗದ ರಾಹುಲ್ ಮತ್ತೆ ಜನಸಾಮಾನ್ಯನ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನ್‌ಪುರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಚಪ್ಪಲಿ ಹೊಲೆಯುವ ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸುಮಾರು ಅರ್ಧ ಗಂಟೆಗಳ ಕಾಲ ಚಮ್ಮಾರದ ಉದ್ಯೋಗ ಹಾಗು ವ್ಯವಹಾರದ ಲಾಭ ನಷ್ಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಚರ್ಮೋದ್ಯಮದಲ್ಲಿ ಆಗುತ್ತಿರುವ ಸಮಸ್ಯೆಗಳು ಹಾಗು ಬಗೆಹರಿಸಬೇಕಾದ ಸಂಗತಿಗಳ ಬಗ್ಗೆ ತಳ ಮಟ್ಟದ ಕಾರ್ಮಿಕನನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಸರ್ಕಾರದ ಮಟ್ಟದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಚಮ್ಮಾರ ರಾಮ್, ರಾಹುಲ್ ಗಾಂಧಿ ನಮ್ಮ ಅಂಗಡಿಗೆ ಭೇಟಿ ನೀಡಿದ್ದು, ತುಂಬಾ ಸಂತೋಷ ಉಂಟು ಮಾಡಿತು. ಸಮಸ್ಯೆಗಳ ಬಗ್ಗೆ ಕೇಳಿದ್ರು, ಬಗೆಹರಿಸುವ ಭರವಸೆಯನ್ನೂ ನೀಡಿದ್ರು ಎಂದಿದ್ದಾರೆ.
ನರೇಂದ್ರ ಮೋದಿ ಕೂಡ ಆಗಾಗ ಜನರನ್ನು ಭೇಟಿ ಮಾಡುತ್ತಾರೆ. ಅಥವಾ ಜನರು ಇಲ್ಲದಿದ್ದರೂ ಜನರನ್ನು ಭೇಟಿ ಮಾಡಿದಂತೆ ಅಭಿನಯ ಮಾಡುತ್ತಾರೆ. ಆದರೆ ರಾಹುಲ್ ಗಾಂಧಿಯ ಭೇಟಿ ಹಿಂದೆ ಯಾವುದೇ ನಾಟಕೀಯ ಬೆಳವಣಿಗೆ ಇದೆ ಎಂದೆನಿಸುವುದಿಲ್ಲ. ಮುಗ್ದ ಮನಸ್ಸಿನ ವ್ಯಕ್ತಿ ಏನಾದರೂ ಒಂದು ಕೆಲಸ ಮಾಡಿದಾಗ ಹೇಗೆ ಕಾಣುತ್ತದೆಯೋ ಅದೇ ರೀತಿಯಲ್ಲಿ ಎನಿಸುತ್ತದೆ. ರಾಹುಲ್ ಗಾಂಧಿ ತನಗೆ ಗೊತ್ತಿಲ್ಲದ ವಿಚಾರಗಳನ್ನು ತುಂಬಾ ಅಚ್ಚರಿಯಿಂದ ಆಲಿಸುವ ರೀತಿ ನೋಡುಗರಿಗೆ ಇಷ್ಟವಾಗುತ್ತದೆ. ಯಾರು ಏನಂದುಕೊಳ್ತಾರೆ ಎನ್ನುವುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ರಾಹುಲ್ ಗಾಂಧಿ ಕೇಳಿ ತಿಳಿದುಕೊಳ್ಳುವುದು, ಜನಸಾಮಾನ್ಯರು, ಬಡವರನ್ನು ಕಂಡಾಗ ಕಾಳಜಿ ವಹಿಸುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಜನಸಾಮಾನ್ಯರ ಕಷ್ಟ ಅರಿತವರು ದೇಶದ ಚುಕ್ಕಾಣಿ ಹಿಡಿದರೆ ದೇಶಕ್ಕೆ ಅನುಕೂಲ ಅಲ್ಲವೇ..?
ಕೃಷ್ಣಮಣಿ