ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ಹಿಂದೆ ದಲಿತರಿಗೆ ನೀಡಿದ 21 ಎಕರೆ ಜಮೀನನ್ನು ಸರ್ಕಾರ ಅಯೋಧ್ಯೆಯ ರಾಮಾಯಣ ವಿದ್ಯಾಪೀಠ ಟ್ರಸ್ಟ್ಗೆ ವರ್ಗಾಯಿಸಿರುವುದು ಅಕ್ರಮ ಎಂದು ಅಯೋಧ್ಯೆಯ ARO ನ್ಯಾಯಾಲಯ ಆದೇಶ ನೀಡಿದೆ ಮತ್ತು ಒತ್ತುವರಿಯಿಂದ ಮುಕ್ತಗೊಳಿಸಿ ಸರ್ಕಾರಕ್ಕೆ ವಾಪಸ್ ನೀಡಬೇಕು ಎಂದು ಆದೇಶಿಸಿದೆ.
ಅದಾಗ್ಯೂ ಟ್ರಸ್ಟ್ ವಿರುದ್ದ ಯಾವುದೇ ನಕಲಿ ದಾಖಲೆಗಳು ಸೃಷ್ಟಿಸಿದ ಆರೋಪಗಳು ಕೇಳಿ ಬರದ ಹಿನ್ನೆಲೆಯಲ್ಲಿ ಟ್ರಸ್ಟ್ ವಿರುದ್ದ ಯಾವುದೇ ಕ್ರಮ ಕೋರ್ಟ್ ಕೈಕೊಂಡಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಶಾಸಕರು, ಅಧಿಕಾರಿ ವರ್ಗ ಮತ್ತು ಕಂದಾಯ ಅಧಿಕಾರಿಗಳು ಅಯೋಧ್ಯೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವೇಗವಾಗಿ ಬೆಳೆಯುತ್ತಿರುವುದರಿಂದ ಭೂಮಿಯನ್ನು ಖರೀದಿಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ವ್ಯಾಪಕವಾಗಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತನಿಖೆಗೆ ಆದೇಶಿಸಿದ್ದರು ಮತ್ತು ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆದೇಶಿಸಿದ್ದರು. ಈ ಹಗರಣದಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳ ಹೆಸರು ನಿಕಟವಾಗಿ ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರ ತೀವ್ರ ಮುಜುಗರಕ್ಕೆ ಈಡಾಗಿತ್ತು.
ದಲಿತರಿಗೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿರ್ಭಂಧಿಸಿರುವ ಕಾನೂನು ಜಾರಿಯಲ್ಲಿದ್ದ ಕಾರಣ MRVT ಟ್ರಸ್ಟ್ನಲ್ಲಿ ಉದ್ಯೋಗಿಯಾಗಿದ್ದ ರೊಂಘಾಯ್ ಎಂಬ ದಲಿತ ವ್ಯಕ್ತಿಯನ್ನು ಈ ಕೆಲಸಕ್ಕೆ ಉಪಯೋಗಿಸಿಕೊಳ್ಳಲಾಗಿದೆ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
2019ರಲ್ಲಿ MRVT ದಲಿತರ ಜಮೀನುಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾಗ ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ಬಗ್ಗೆ ದಲಿತರೊಬ್ಬರು ತಮ್ಮ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ದೂರನ್ನು ನೀಡಿದ್ದರು. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ತನಿಖೆಯನ್ನು ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.
ಅಕ್ಟೋಬರ್ 2020ರಲ್ಲಿ ಅಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಗಿದ್ದ ಅನುಜ್ ಕುಮಾರ್ ಝಾ ದಲಿತರಿಗೆ ಸೇರಿದ ಭೂಮಿಯನ್ನು ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿದಕ್ಕಾಗಿ MRVT ಸಂಸ್ಥೆ ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಸಮಿತಿ ನೀಡಿದ್ದ ಶಿಸ್ತು ಕ್ರಮದ ವರದಿಯನ್ನು ಉಲ್ಲೇಖಿಸಿ ತೀರ್ಪನ್ನು ನೀಡಿತ್ತು.