ಸಾವರ್ಕರ್ ಒಬ್ಬ ದೇಶದ್ರೋಹಿ. ಇಂತಹವನನ್ನು ನಮ್ಮ ನಾಯಕ ಎಂದು ಬಿಜೆಪಿ ಬಿಂಬಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಪೂರ್ವಜರು ಯಾರು? ಇವರ ನಾಯಕರು ಯಾರು? ಎಂದು ಇವರ ಮೂಲ ಹುಡುಕಿದರೆ ತಿಳಿಯುತ್ತದೆ ಎಂದು ಲೇವಡಿ ಮಾಡಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯನ್ನು ಕೊಂದ ಗೋಡ್ಸೆ ಬಿಜೆಪಿಗರ ನಾಯಕ. ಮಹಾತ್ಮ ಗಾಂಧೀಜಿಯವರನ್ನು ಕೊಲ್ಲಲು ಪ್ರೇರೇಪಣೆ ನೀಡಿದ ಸಾವರ್ಕರ್ ಇವರ ನಾಯಕ. ಬ್ರಿಟಿಷರ ಮೇಲೆ ದಾಳಿ ಮಾಡಿ ಬಾಂಬ್ ಎಸೆದು ಜೈಲುಪಾಲಾದ ಸಾವರ್ಕರ್ ಗೆ ಬ್ರಿಟಿಷ್ ಸರಕಾರ 50 ವರ್ಷ ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. ಶಿಕ್ಷೆಯನ್ನು ತಡೆಯಲಾಗದೆ ಕ್ಷಮಾಪಣೆ ಪತ್ರವನ್ನು ಬರೆದು ಹೊರ ಬಂದಿದ್ದ ವ್ಯಕ್ತಿ ಸಾವರ್ಕರ್ ಎಂದು ಅವರು ವಿವರಿಸಿದರು.
ನನ್ನನ್ನು ದಯವಿಟ್ಟು ಬಿಡುಗಡೆ ಮಾಡಿ ನಾನು ಇರುವ ತನಕ ಶಾಶ್ವತವಾಗಿ ನಿಮ್ಮ ಸೇವೆಯನ್ನು ಮಾಡಿ ನಿಮ್ಮ ಸೇವಕನಾಗಿರುತ್ತೇನೆ ಎಂದು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಹೊರಬಂದ ವ್ಯಕ್ತಿ ಸಾವರ್ಕರ್. ದೇಶದ ಹಿಂದೂ ಮುಸ್ಲಿಮರ ನಡುವೆ ಕಂದಕ ಸೃಷ್ಟಿ ಮಾಡಿದ ವ್ಯಕ್ತಿ ಸಾವರ್ಕರ್ ಎಂದು ಅವರು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮೆಲ್ಲ ನಾಯಕರು ಜೈಲಿಗೆ ಹೋದಾಗ ಬ್ರಿಟಿಷ್ ಪೋಲಿಸರು ಹೊಡೆತಕ್ಕೆ ಸಾಕಷ್ಟು ನಾಯಕರು ಹುತಾತ್ಮರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಬಾರದು ಬ್ರಿಟಿಷರಿಗೆ ಸಹಕಾರ ನೀಡಿ ಎಂದು ನಮ್ಮ ನಾಯಕರನ್ನು ದಿಕ್ಕು ತಪ್ಪಿಸುತ್ತಿದ್ದವರು ಇದೆ ಸಾವರ್ಕರ್ ಎಂದು ಯತೀಂದ್ರ ವಿವರಿಸಿದರು.