ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಿಜೆಪಿಗೆ ಏನಾದರೂ ಒಂದು ಭಾವನಾತ್ಮಕ ಸಂಗತಿ ಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. 2014ರಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯಲ್ಲಿ ದೇಶದ ಜನರು ಬಿಗಿದಪ್ಪಿದ್ದರು. ಆ ಬಳಿಕ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈ ಹಿಡಿದಿದ್ದು ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಮೇಲೆ ನಡೆದ ಭೀಕರ ದಾಳಿಯಲ್ಲಿ 40 ಮಂದಿ ವೀರ ಸೇನಾನಿಗಳು ಸಾವನ್ನಪ್ಪಿದ್ರು. ಆ ಬಳಿಕ ಭಾರತ ಪಾಕಿಸ್ತಾನದ ಮೇಲೆ ಏರ್ಸ್ಟ್ರೈಕ್ ಮಾಡಿತ್ತು. ಉಗ್ರರನ್ನು ಸದೆ ಬಡಿದಿದ್ದೇವೆ ಎಂದು ಚುನಾವಣೆ ವೇಳೆ ಅಬ್ಬರದ ಪ್ರಚಾರ ಮಾಡಿತ್ತು. ಆದರೆ ಒಂದೇ ಒಂದು ಹೆಣದ ಫೋಟೋ ಕೂಡ ಬಿಡುಗಡೆ ಆಗಲಿಲ್ಲ. ವಿಶ್ವದ ಮಾಧ್ಯಮಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದರೂ ಉಗ್ರರ ಹತ್ಯೆ ಬಗ್ಗೆ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಈ ಎಲ್ಲಾ ಘಟನೆಗಳು ಕೇಂದ್ರ ಸರ್ಕಾರದ ಮೂಗಿನ ನೇರಕ್ಕೆ ನಡೆದಿದ್ದು, ಚುನಾವಣೆ ಉದ್ದೇಶಕ್ಕೆ ಎಂದು ಕೆಲವರು ಆರೋಪವನ್ನೂ ಮಾಡಿದರು.
ಮತ್ತೆ ಅದೇ ರೀತಿಯ ಭಾವನಾತ್ಮಕ ವಿಚಾರದಲ್ಲೇ ಚುನಾವಣೆ ಆಗುತ್ತಾ..?
2024ರಲ್ಲಿ ಭಾರತೀಯ ಜನತಾ ಪಾರ್ಟಿ ಯಾವ ವಿಚಾರದ ಮೇಲೆ ಚುನಾವಣೆ ನಡೆಸಲಿದೆ ಎನ್ನುವ ಬಗ್ಗೆ ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಸದ್ಯಕ್ಕಂತೂ ಯಾವುದೇ ವಿಚಾರಗಳು ಇಲ್ಲ. ಅಭಿವೃದ್ಧಿ ಮೇಲೆಯೇ ಚುನಾವಣೆ ನಡೆಸಿದರೆ ಬಿಜೆಪಿಗೆ ಹಿನ್ನಡೆ ಆದರೂ ಅಚ್ಚರಿಯಿಲ್ಲ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುವುದಕ್ಕೆ 2024ರ ಜನವರಿಯಲ್ಲಿ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸಾವಿರ ಸಾವಿರ ಸಂಖ್ಯೆಯಲ್ಲಿ ರಾಮಭಕ್ತರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ಸಿಕ್ಕಿದೆ. ಆದರೆ ಈ ಕಾರ್ಯಕ್ರಮಕ್ಕೆ ಜನರನ್ನು ಬಸ್ ಹಾಗು ಟ್ರಕ್ಗಳಲ್ಲಿ ಹಿಂದೂಗಳನ್ನು ಕರೆ ತರುವುದಕ್ಕೂ ಚಿಂತನೆ ನಡೆಯುತ್ತಿದೆ. ಆದರೆ ಉದ್ಘಾಟನೆ ಬಳಿಕ ತಮ್ಮ ಊರುಗಳಿಗೆ ಹಿಂತಿರುಗುವಾಗ ಗೋಧ್ರಾ ರೀತಿಯ ದುರ್ಘಟನೆ ನಡೆಸುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭವಿಷ್ಯ ನುಡಿದಿದ್ದಾರೆ.
ಗುಜರಾತ್ನಲ್ಲಿ ಗೋಧ್ರಾ ಹತ್ಯಾಕಾಂಢ ಏನಾಗಿತ್ತು ಗೊತ್ತಾ..?
2002ರ ಫೆಬ್ರವರಿ 27 ರಂದು ಸಬರಮತಿ ರೈಲಿಗೆ ಗೋಧ್ರಾದಲ್ಲಿ ಬೆಂಕಿ ಹಚ್ಚಲಾಗಿತ್ತು. ಕರಸೇವಕರಿದ್ದ ರೈಲಿಗೆ ಉದ್ದೇಶಪೂರ್ವಕವಾಗಿ ಎಸ್-6 ಬೋಗಿಗೆ ಕಿರಾತಕರು ಬೆಂಕಿ ಇಟ್ಟಿದ್ದರು. ಈ ದುರಂತದಲ್ಲಿ ಅಯೋಧ್ಯೆಯಿಂದ ಆಗಮಿಸುತ್ತಿದ್ದ 58 ಕರ ಸೇವಕರು ಜೀವಂತವಾಗಿ ಸುಟ್ಟು ಭಸ್ಮವಾಗಿದ್ದರು. ಇದರಲ್ಲಿ 25 ಮಹಿಳೆಯರು, 15 ಮಕ್ಕಳೂ ಸೇರಿದ್ದರು. ಬೆಂಕಿಯ ಜ್ವಾಲೆಗೆ 49 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅಬ್ದುಲ್ ಸತ್ತಾರ್, ಇಬ್ರಾಹಿಂ ಗಡ್ಡಿ ಸೇರಿ 31 ಜನ ಅಪರಾಧಿಗಳು ಎಂದು ತೀರ್ಮಾನಿಸಿ, 31 ಜನರಲ್ಲಿ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅಕ್ಟೋಬರ್ 2017ರಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದೀಗ ಅಯೋಧ್ಯೆಗೆ ತೆರಳುವ ಭಕ್ತರ ಮೇಲೆ ಮತ್ತೆ ಈ ರೀತಿಯ ದಾಳಿ ನಡೆಸಲಾಗುತ್ತದೆ ಎನ್ನುವ ಮಾತು ಚರ್ಚೆಗೆ ಗ್ರಾಸವಾಗಿದೆ. ಆದರೆ ಗೋಧ್ರಾ ಹತ್ಯಾಕಾಂಡದ ಬಳಿಕ ಚುನಾವಣೆಗೆ ಹೋಗಿದ್ದ ನರೇಂದ್ರ ಮೋದಿ ಭರ್ಜರಿ ಜಯದೊಂದಿಗೆ 2ನೇ ಬಾರಿ ಸಿಎಂ ಆಗಿ ಅಧಿಕಾರಕ್ಕೆ ಏರಿದ್ದರು.
ನರೇಂದ್ರ ಮೋದಿ ಮೇಲೆ ಕಚ್ಚು ಚುಕ್ಕೆ ಇಟ್ಟಿದ್ದ ಗೋಧ್ರಾ ದುರಂತ..!
ಗೋಧ್ರಾ ಹತ್ಯಾಕಾಂಡ ನಡೆಯುವ ವೇಳೆ ಗುಜರಾತ್ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದರು. ಈ ದುರ್ಘಟನೆ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗು ಅಂದಿನ ಗುಜರಾತ್ ರಾಜ್ಯದ ಗೃಹ ಸಚಿವರಾಗಿದ್ದ ಅಮಿತ್ ಷಾ ಕೈವಾಡ ಇದೆ ಎಂದೇ ಸುದ್ದಿಯಾಗಿತ್ತು. ಅತಿ ದೊಡ್ಡ ದುರಂತ ಇಡೀ ವಿಶ್ವದಲ್ಲಿ ಮೋದಿ ಹೆಸರಿಗೆ ಕಪ್ಪು ಚುಕ್ಕೆಯನ್ನು ಇಟ್ಟಿತ್ತು. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ನರೇಂದ್ರ ಮೋದಿ ಅವರ ವೀಸಾವನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇತ್ತೀಚಿಗೆ ಪ್ರಧಾನಿ ಆಗಿ ಅಧಿಕಾರಕ್ಕೆ ಏರಿದ ಬಳಿಕವಷ್ಟೇ ರಾಜತಾಂತ್ರಿಕವಾಗಿ ನಿರ್ಬಂಧ ತೆರವು ಮಾಡಿದ್ದು. ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ ಈ ರೀತಿ ಉದ್ದೇಶ ಪೂರ್ಕವ ದುರಂತಗಳನ್ನು ಸೃಷ್ಟಿ ಮಾಡುತ್ತಾ..? ಅನ್ನೋ ಅನುಮಾನ ಮೂಡುವಂತೆ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಮಾತ್ರ ಠಾಕ್ರೆ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, ರಾಮಭಕ್ತರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದಿದೆ.
ಕೃಷ್ಣಮಣಿ