ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಸ್ಪಂದಿಸದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ಪ್ರತಿಭಟಿಸಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾನ ಮರ್ಯಾದೆ ಇಲ್ಲದ ಈ ಸರ್ಕಾರ ಜನರೇ ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಹಿಂದೆ ಎತ್ತಿನ ಗಾಡಿ, ಸೈಕಲ್ ಜಾಥಾ ನಡೆಸಿದ್ದ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ ನಡೆಸಿದೆ.
ಜನವಿರೋಧಿ ನೀತಿ ಮೂಲಕ ಜನರ ಬದುಕು ದುಸ್ಥಿತಿಗೆ ನೂಕುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಮುಖಂಡರು ಘೋಷಣೆ ಕೂಗಿ ಜಾತ ಮಾಡಿದ್ದಾರೆ. ಸರಕಾರ ಎಷ್ಟೇ ಭಂಡತನ ಪ್ರದರ್ಶಿಸಿದರೂ ಕಾಂಗ್ರೆಸ್ ತನ್ನ ಜನಪರ ಹೋರಾಟ ಮುಂದುವರೆಸುತ್ತದೆ ಎಂಬ ಸಂದೇಶ ರವಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತಿತರ ನಾಯಕರು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಕಚೇರಿಯಿಂದ ಟಾಂಗಾ ಮೂಲಕ ವಿಧಾನಸೌಧಕ್ಕೆ ತೆರಳಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಸರ್ಕಾರಗಳು ಜನರನ್ನು ಪಿಕ್ ಪಾಕೆಟ್ ಮಾಡುತ್ತಿವೆ. ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಜನರ ನೋವು, ಭಾವನೆ ಅರ್ಥವಾಗುತ್ತಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಹೋರಾಟವಲ್ಲ. ಇದು ಜನರ ಹೋರಾಟ, ಎಲ್ಲಾ ವರ್ಗದ ಜನರ ನೋವಿನ ಪ್ರತಿಧ್ವನಿ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಅಕ್ಟೋಬರ್ ತಿಂಗಳಲ್ಲಿ ಪ್ರತಿ ಪಂಚಾಯ್ತಿ ಹಾಗೂ ವಾರ್ಡ್ ನಲ್ಲೂ ನಮ್ಮ ಕಾರ್ಯಕರ್ತರು ಬೆಲೆ ಏರಿಕೆ ವಿಚಾರದಲ್ಲಿ ಜನರ ಧ್ವನಿಯಾಗಲು ಕಾರ್ಯಕ್ರಮ ರೂಪಿಸಲಾಗಿದೆ. ಮಾನ ಮರ್ಯಾದೆ ಇಲ್ಲದ ಈ ಸರ್ಕಾರ ಜನರೇ ತೆಗೆಯಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಲಕ್ಷಾಂತರ ಮಂದಿ ಸತ್ತಿರುವುದನ್ನು ನೋಡಿದ್ದೇವೆ. ಯಾರಿಗೂ ಈ ಸರ್ಕಾರ ಸಹಾಯ ಮಾಡಿಲ್ಲ. 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದರೂ ಒಬ್ಬರಿಗೂ ಸಹಾಯವಾಗಿಲ್ಲ. ಚಾಲಕರು, ಸವಿತಾ ಸಮಾಜದವರು ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರು, ರೈತರು ಸೇರಿದಂತೆ ಯಾರಿಗೂ ಸಹಾಯ ಮಾಡಿಲ್ಲ. ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಕೆಲಸ ಸಿಗುವಂತೆ ಮಾಡಬೇಕು. ಸರಕಾರ ತೆರಿಗೆ ಹಾಕಿ ಜನರನ್ನು ಹಿಂಡುತ್ತಿದ್ದು, ಅವರ ರಕ್ಷಣೆಗೆ ಹೋರಾಟ ಮಾಡುತ್ತೇವೆ. ಜನ ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಾವು ಈ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ದಿನೇ ದಿನೆ ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ನಿರಂತರವಾಗಿ ಸಮರ ಸಾರುತ್ತಲೇ ಬಂದಿದೆ. ಈ ಹಿಂದೆ ಸೈಕಲ್ ಜಾಥಾ ನಡೆಸಿ, ನಂತರ ರಾಜ್ಯಾದ್ಯಂತ 5000 ಪೆಟ್ರೋಲ್ ಬಂಕ್ ಗಳ ಮುಂದೆ ಐದು ದಿನಗಳ ಕಾಲ ‘100 ನಾಟೌಟ್’ ಪ್ರತಿಭಟನೆ ಮಾಡಿತ್ತು. ಈ ಬಾರಿ ಮುಂಗಾರು ಅಧಿವೇಶನ ಆರಂಭವಾದ ನಂತರ 10 ದಿನಗಳ ಅಂತರದಲ್ಲಿ ಸೈಕಲ್ ಜಾಥಾ, ಎತ್ತಿನಗಾಡಿ ಯಾತ್ರೆ ಮಾಡಿದ್ದ ಕಾಂಗ್ರೆಸ್ ನಾಯಕರು ಇಂದು ಟಾಂಗಾ ಜಾಥಾ ಮೂಲಕ ಪ್ರತಿಭಟನೆ ಮಾಡಿದ್ದಾರೆ.