ಬೆಂಗಳೂರಲ್ಲಿ ತರಕಾರಿ ಹಣ್ಣು ಸೊಪ್ಪುಗಳ ಬೆಲೆ ಗಗನಕ್ಕೇರಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ರೈತರು ಕಂಗಾಲಾಗಿ ಹೋಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹಠಾತ್ತನೇ ಹೆಚ್ಚಳವಾಗಿದೆ. ಟ್ಯೊಮಾಟೋ ಶತಕ ದಾಟಿದೆ, ಈರುಳ್ಳಿ ಶತಕದ ಸನಿಹ ಬಂದು ನಿಂತಿದೆ. ಮೆಟ್ರೋ ಮಂದಿ ತರಕಾರಿ ಬೆಲೆ ಏರಿಕೆಯಿಂದ ಹೌಹಾರಿ ಹೋಗಿದ್ದಾರೆ.
ರಣ ಮಳೆ.. ಹೈರಾಣದ ರೈತ.. ತರಕಾರಿಗೆ ಹೆಚ್ಚಿದ ರೇಟು.!!
ರಾಜ್ಯದಲ್ಲಿ ನಿರಂತರವಾಗಿ ಎರಡು ವಾರಗಳಿಂದ ಮಳೆ ಸುರಿಯುತ್ತಿದೆ. ಇದರಿಂದಾಗಿ ರೈತರು ಹೈರಾಣಾಗಿ ಹೋಗಿದ್ದಾರೆ. ಮಳೆಯ ಆರ್ಭಟಕ್ಕೆ ಬೆಳೆ ನಾಶವಾಗಿ ಹೋಗುತ್ತಿದೆ. ಅನ್ನದಾತನ ಶ್ರಮ ಮಳೆ ನೀರು ಪಾಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಹಣ್ಣು ಸೊಪ್ಪುಗಳ ಬೆಲೆ ಏಕಾಏಕಿಯಾಗಿ ಏರಿಕೆಯಾಗಿದೆ. ಕಳೆದ 15 ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ ಮಾರುಕಟ್ಟೆಗೆ ತರಕಾರಿಯೇ ಬರುತ್ತಿಲ್ಲ. ಬರುವ ಸ್ವಲ್ಪ ತರಕಾರಿಗೆ ಬೇಡಿಕೆ ಹೆಚ್ಚಾದ ಪರಿಣಾಮ ಬೆಲೆ ಸಹ ಏರಿಕೆಯಾಗಿದೆ. ಕೆಲವೊಮ್ಮೆ ಮಾರುಕಟ್ಟೆಗೆ ತಡವಾಗಿ ಬಂದ್ರೆ ತರಕಾರಿ ಸಹ ಸಿಗುತ್ತಿಲ್ಲ. ಸಿಕ್ಕಷ್ಟು ತರಕಾರಿ ಮಾರಾಟ ಮಾಡಲು ಮಳೆ ಅವಕಾಶ ನೀಡುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಗಗನಕ್ಕೇರಿದ ಸೊಪ್ಪು & ತರಕಾರಿ ದರ !
ಟೊಮ್ಯಾಟೊ : 80 – 120
ಈರುಳ್ಳಿ : 40 – 60
ಕ್ಯಾರೆಟ್ : 60
ಆಲೂಗಡ್ಡೆ : 30 – 50
ಸೋರೆಕಾಯಿ : 40 – 60
ಮೆಣಸಿನಕಾಯಿ : 100 – 130
ಮೂಲಂಗಿ : 50
ಎಲೆಕೋಸು : 35
ಪಾಲಕ್ ಸೊಪ್ಪು : 100
ದಂಟು ಸೊಪ್ಪು : 72
ಸಬ್ಬಕ್ಕಿ : 50
ಕೋತಂಬರಿ ಸೊಪ್ಪು : 55
ಹಣ್ಣು ದುಬಾರಿ !
ದಾಳಿಂಬೆ : 238
ಸೇಬು : 140
ಮೋಸಂಬಿ : 60
ಕಪ್ಪು ದ್ರಾಕ್ಷಿ : 50
ಏಲಕ್ಕಿ ಬಾಳೆ : 60
ಏಕಾಏಕಿ ತರಕಾರಿ ಬೆಲೆ ಏರಿಕಿಗೆ ಕಾರಣವೇನು.!?
ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಮಾರುಕಟ್ಟೆಗಳಿಗೆ ಸಮರ್ಪಕ ರೀತಿಯಲ್ಲಿ ಹಣ್ಣು, ತರಕಾರಿಯ ಪೂರೈಕೆಯಾಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಮಳೆಯ ಚಳಿಯಲ್ಲಿ ಬೆಲೆ ಏರಿಕೆ ಗ್ರಾಹಕರ ಜೇಬನ್ನು ಸುಡುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ದರ ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರಿದ್ರೆ ತರಕಾರಿ ಮತ್ತು ಹಣ್ಣುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.ಅಕಾಲಿಕ ಮಳೆಯಿಂದಾಗಿ ಬೆಳೆದಿರುವ ತರಕಾರಿ ನೀರಿನಲ್ಲಿ ಕೊಳೆಯುವಂತಾಗಿದೆ. ಮತ್ತೊಂದು ಕಡೆ ತರಕಾರಿ ಕಟಾವು ಮಾಡಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುತ್ತಿದೆ.
ಒಟ್ಟಾರೆ ಮಳೆ ಜನರ ಜೇಬಿಗೂ ಕತ್ತರಿ ಹಾಕುತ್ತಿದೆ. ಇಷ್ಟೂ ದಿನ ತೈಲ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆ ಏರಿಕೆ ತಲೆ ನೋವಲ್ಲಿದ್ದ ಜನರಿಗೆ ಇದೀಗ ತರಕಾರಿ ಬೆಲೆಯೂ ಜೀವ ಹಿಂಡುತ್ತಿದೆ. ಸದ್ಯ ಹಾಪ್ಕಾಮ್ಸ್ ನಲ್ಲಿ ಸೇರಿದಂತೆ ಚಿಲ್ಲರೆ ವ್ಯಾಪಾರಸ್ಥರು ಬೆಲೆ ಏರೆಕೆ ಮಾಡಿದ್ದಾರೆ. ಇದು ಜನರ ಜೇಬಿಗೆ ಕತ್ತರಿಯಾಗಿ ಪರಿಣಮಿಸಿದೆ.