ಕೃಷಿಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಜನವರಿ26 ಗಣರಾಜೋತ್ಸವ ದಿನದಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ತೀರ್ಮಾನಿಸಿದ್ದರು. ಇದಕ್ಕೆ ದೆಹಲಿಯ ಪೊಲೀಸರು ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದ್ದರು. ಇದೀಗ ಸಾವಿರಾರು ರೈತರು ದೆಹಲಿಯ ಗಡಿಭಾಗಗಳಲ್ಲಿ ನೆರೆದಿದ್ದಾರೆ.
ಬೃಹತ್ ಟ್ರ್ಯಾಕ್ಟರ್ ಮೆರವಣಿಗೆಯ ಮುಂಚಿತವಾಗಿ ಭಾರೀ ಪೊಲೀಸ್ ಉಪಸ್ಥಿತಿಯ ಮಧ್ಯೆಯೂ ಬೆಳಗ್ಗೆ ಕಾಲ್ನಡಿಗೆಯಲ್ಲಿ ದೆಹಲಿ ಮತ್ತು ಹರಿಯಾಣವನ್ನು ವಿಭಜಿಸುವ ಸಿಂಘು ಗಡಿಯಲ್ಲಿ ಮತ್ತು ದೆಹಲಿಯ ಪಶ್ಚಿಮ ಭಾಗದಲ್ಲಿರುವ ಟಿಕ್ರಿ ಗಡಿಯಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರ್ ಏರಿ ಧ್ವಜವನ್ನು ಹಿಡಿದು ಮೆರವಣಿಗೆ ಹೊರಟ್ಟಿದ್ದಾರೆ. ಇತ್ತ ಬೆಳಗ್ಗೆಯೇ ಗಡಿಭಾಗಗಳಿಗೆ ಆಗಮಿಸಿದ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ತಡೆಯಲು ಯತ್ನಿಸಿದ್ದರು ಬ್ಯಾರಿಕೇಡ್ಗಳನ್ನು ಹೊಡೆದುರುಳಿಸಿ ಮುನ್ನುಗಿದ್ದಾರೆ.
ಕಿಸಾನ್ ಪರೇಡ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಆದರೆ ಬೆಳಗ್ಗೆ 8 ಗಂಟೆ ಸುಮಾರಿಗೆ ಅಧಿಕ ಸಂಖ್ಯೆಯಲ್ಲಿ ರೈತರು ದೆಹಲಿಯ ಗಡಿಭಾಗಗಳಲ್ಲಿ ನೆರೆದಿದ್ದಾರೆ.
ಈ ಸಂಬಂಧ ಜನವರಿ24 ರಂದು ರೈತಮುಖಂಡರಿಗೆ ದೆಹಲಿಯ ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಸೂಚನೆ ನೀಡಿದ್ದರು. ನಮ್ಮ ಮೆರವಣಿಗೆಯೂ ಶಾಂತಿಯುತವಾಗಿರುತ್ತದೆ. ಮತ್ತು ನಾವು ನಿಗಧಿ ಪಡಿಸಿದ ಮಾರ್ಗಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ರೈತಮುಖಂಡರು ಕೂಡ ತಿಳಿಸಿದ್ದರು.
ಗಣರಾಜೋತ್ಸವದ ಮೆರವಣಿಗೆ ಆದ ನಂತರ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡದೆ ಮತ್ತು, ಗೊಂದಲವನ್ನು ಸೃಷ್ಟಿಸದೆ ಶಾಂತಿಯುತವಾಗಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಬೇಕೆಂದು ಎಂದು ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ಸೂಚನೆ ಕೊಟ್ಟಿದ್ದರು.