ನವದೆಹಲಿ: ಇಂದು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜನ್ಮದಿನ. 35ನೇ ಹುಟ್ಟಹಬ್ಬ ಆಚರಿಸುತ್ತಿರುವ ವಿರಾಟ್, ವಿಶ್ವದ ಅಗ್ರಗಣ್ಯ ಕ್ರಿಕೆಟ್ ತಾರೆಗಳಲ್ಲಿ ಒಬ್ಬರು.
ತಮ್ಮ ಬ್ಯಾಟ್ ಮೂಲಕವೇ ಎದುರಾಳಿಗಳನ್ನು ನಡುಗಿಸುವ, ರನ್ಗಳ ಸುರಿಮಳೆ ಹರಿಸುವ ಇವರು ‘ರನ್ ಮಷಿನ್’ ಎಂದೇ ಖ್ಯಾತರು. ಅಪಾರ ಸಂಖ್ಯೆಯ ಅಭಿಮಾನಿಗಳು ಇವರ ಬೆನ್ನಿಗಿದ್ದಾರೆ. ಸದಾ ಅದ್ಭುತ ಬ್ಯಾಟಿಂಗ್ನಿಂದ ಟೀಮ್ ಇಂಡಿಯಾಗೆ ನೆರವಾಗುವ ಕೊಹ್ಲಿ, ‘ಚೇಸ್ ಮಾಸ್ಟರ್’ ಎಂದು ಪ್ರಸಿದ್ಧಿ ಗಳಿಸಿದ್ದಾರೆ. ಅಮೋಘ ಕೌಶಲದ ಮೂಲಕ ಭಾರತ ತಂಡದ ಬ್ಯಾಟಿಂಗ್ ಬಲವಾಗಿರುವ ಕೊಹ್ಲಿ, ದಾಖಲೆಗಳ ಸರದಾರ.
ವಿರಾಟ್ ಕೊಹ್ಲಿ ಕ್ರೀಸಿಗೆ ಬಂದರೆಂದರೆ ಸಾಕು ಅಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರುತ್ತದೆ. ವಿರಾಟ್ ಎಂಬ ಹೆಸರು ಮೈದಾನದಲ್ಲೆಲ್ಲಾ ಮಾರ್ದನಿಸುತ್ತದೆ. ಅಭಿಮಾನಿಗಳ ಇಂಥ ಉತ್ಸಾಹಕ್ಕೆ ಎದುರಾಳಿ ತಂಡ ಪ್ರಾರಂಭದಲ್ಲೇ ತನ್ನ ಆತ್ಮವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ. ಪ್ರತಿ ಪಂದ್ಯಗಳಲ್ಲಿ ಅಗ್ರೆಸ್ಸಿವ್ ಆಗಿ ಆಡುವ ವಿರಾಟ್, ಎದುರಾಳಿ ತಂಡದ ಜಂಘಾಬಲ ಉಡುಗಿಸಬಲ್ಲರು. ಮೈದಾನಕ್ಕಿಳಿದರೆ ಕೊಹ್ಲಿಯನ್ನು ಕಟ್ಟಿ ಹಾಕುವವರಿಲ್ಲ. ಬ್ಯಾಟಿಂಗ್, ಫೀಲ್ಡಿಂಗ್ನಲ್ಲೂ ಮ್ಯಾಜಿಕ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಇವರ ಸಾಧನೆಗಳ ಮಾತೇ ಹೆಚ್ಚು.
ದಾಖಲೆಗಳ ಸರದಾರ: ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರೆ ಒಂದಲ್ಲೊಂದು ದಾಖಲೆಯಾಗುತ್ತದೆ. ಇವರ ಹೆಸರು ಮುನ್ನಲೆಗೆ ಬಂದಿದ್ದು 2008ರಲ್ಲಿ ನಡೆದ U19 ವಿಶ್ವಕಪ್ನಲ್ಲಿ. ಅದೇ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಬಳಿಕ ಉತ್ತಮ ಪ್ರದರ್ಶನ ನೀಡುತ್ತಾ, ಏಕಾಂಗಿಯಾಗಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.