62 ವರ್ಷಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ , ಕೇವಲ 6 ವರ್ಷಗಳ ಅಧಿಕಾರ ಅನುಭವಿಸಿದ ದೇವೇಗೌಡರು , ಪ್ರಧಾನಿಯಾಗಿ ಇಳಿದ ಮರು ಚುನಾವಣೆಯಲ್ಲಿಯೇ , ಒಂದೂವರೆ ಲಕ್ಷಗಳ ಅಂತರದಿಂದ ತವರು ನೆಲ ಹಾಸನದಲ್ಲಿಯೇ ಸೋತರು . ಅದಕ್ಕೂ ಮೊದಲು , ತಮ್ಮ ಸ್ನೇಹಿತ ಮತ್ತು ಅನುಯಾಯಿಯಾಗಿದ್ದ ಪುಟ್ಟಸ್ವಾಮಿಗೌಡರ ವಿರುದ್ಧ ಹೊಳೆ ನರಸೀಪುರದಲ್ಲಿಯೂ ಸೋತಿದ್ದರು . ಹೆಗಡೆ ಜೊತೆಗಿನ ಜಗಳದಿಂದ ಜನತಾದಳದಿಂದ ಹೊರಬಂದು , ತಮ್ಮದೇ ಸಮಾಜವಾದಿ ಜನತಾ ಪಕ್ಷದಿಂದ ಎಂ ಪಿ ಚುನಾವಣೆಯಲ್ಲಿ , ಹನುಮೇಗೌಡರ ಸಹಾಯದಿಂದ ಕೇವಲ ಆರು ಸಾವಿರ ಮತಗಳ ಅಂತರದಿಂದ ಗೆದ್ದು , ಫೀನಿಕ್ಸ್ ಗೆ ಉಪಮೆಯಾಗಿದ್ದರು .

ಇವುಗಳೆಲ್ಲವೂ ಸುಲಭಸಾಧ್ಯವಾಗಿರಲಿಲ್ಲ . ಮಾಧ್ಯಮಗಳೆಂದೂ ಜೊತೆಗಿರಲಿಲ್ಲ . ಮೀಡಿಯಾ ಡಾರ್ಲಿಂಗ್ ಆಗಿ ಹೆಗಡೆ ಮೆರೆಯುತ್ತಿದ್ದರು . ಆಗಲೂ ಹಲವು ಒಕ್ಕಲಿಗ ಶಾಸಕರು ಕೆಲವರು ಹೆಗಡೆ ಜೊತೆಗಿದ್ದರು .
ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದರೆ , ಒಂದೇ ಭಾಗದಲ್ಲಿ ಕನ್ಸಾಲಿಡೇಟ್ ಆಗಿರುವ ಒಕ್ಕಲಿಗರು , ರಾಜಕೀಯವಾಗಿ ಮೇಲೇರಲು , ಯಾರೇ ಆಗಿದ್ದರೂ , ಒಕ್ಕಲಿಗರನ್ನೇ ಹಣಿದು ಬೆಳೆಯಬೇಕಿತ್ತು . ಹಾಸನದಲ್ಲಿ ದೇವೇ ಗೌಡ್ರು – ಶ್ರೀಕಂಠಯ್ಯ , ಮಂಡ್ಯದಲ್ಲಿ ಶಂಕರ ಗೌಡ್ರು – ಎಸ್ ಎಂ ಕೃಷ್ಣ – ಮಾದೇಗೌಡ್ರು , ಕೋಲಾರದಲ್ಲಿ ಭೈರೇ ಗೌಡ್ರು – ಬಚ್ಚೇ ಗೌಡ್ರು – ಚೌಡರೆಡ್ಡಿ ಕುಟುಂಬ ….

ಹೀಗೆ ಇವರಿವರೇ ಹೊಡೆದಾಡಿಕೊಳ್ಳಬೇಕಿತ್ತು ಮತ್ತು ಮುಂದೆಯೂ ಹಾಗೆಯೇ ಇರುತ್ತದೆ . ಪ್ರತೀ ಪಂಚಾಯ್ತಿ ಚುನಾವಣೆಗಳಲ್ಲಿ , ರಾಜಕೀಯ ಆಕಾಂಕ್ಷೆ ಹೊಂದಿರುವ ಯುವಕರು ದಳ ಮತ್ತು ಕಾಂಗ್ರೆಸ್ ನಡುವೆಯೇ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು . ಹಾಗಾಗಿ , ಒಕ್ಕಲಿಗರು ಒಂದೇ ಪಕ್ಷದ ಪರ ನಿಲ್ಲುವುದು ಸಾಧ್ಯವಿಲ್ಲದ ಮಾತು ಮತ್ತು ದೇವೇ ಗೌಡರ , ಕುಮಾರಸ್ವಾಮಿಯವರ ಪರ ಸಿಂಪತಿ ಇರುವ ಒಕ್ಕಲಿಗರೇ ಹೆಚ್ಚು ಎನ್ನುವುದು ವಾಸ್ತವ . ಹಾಗಾಗಿಯೇ , ಚುನಾವಣೆ ಏನೇ ಆದರೂ , ಒಕ್ಕಲಿಗರ ಅಘೋಷಿತ ನಾಯಕರು ದೇವೇಗೌಡರೊಬ್ಬರೇ ..
ಜಾತಿಯೇ ವಿಜೃಂಭಿಸುವ ಈ ಕಾಲಘಟ್ಟದಲ್ಲಿ , ರಾಜ್ಯದ ಎಲ್ಲಾ ಕಾಂಗ್ರೆಸ್ ಶಾಸಕರೂ ಸಿದ್ಧರಾಮಯ್ಯನವರನ್ನ ಓಲೈಸಲು ಪ್ರಮುಖ ಕಾರಣ ಕುರುಬ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ 5 ರಿಂದ 50000 ದವರೆಗೂ ಇರುವುದು . ಅದೇ ರೀತಿ ಜಮೀರ್ ಕೂಡಾ ಸಿದ್ಧರಾಮಯ್ಯನವರ ಹಾಗೆಯೇ . ರಾಜ್ಯ ರಾಜಕಾರಣವನ್ನ ಬುಗುರಿ ರೀತಿಯಲ್ಲಿ ಆಡಿಸಲು ಅವಕಾಶವಿರುವ , ಇವರಿಬ್ಬರ ಸಮುದಾಯಕ್ಕಿಂತ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿರುವ ದಲಿತರು , ತಮ್ಮದೇ ನಾಯಕತ್ವಕ್ಕೆ ಒತ್ತು ಕೊಡದಿರುವುದು ದುರಂತವಷ್ಟೇ .

ಅಭಿಮನ್ಯು ಇಂದಿಗೂ ಎಲ್ಲರಿಗೂ ಇಷ್ಟದವ . ಅರ್ಜುನನನ್ನ ” ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು …” ಎಂದು ಹೀಗಳೆಯುವವರೆಗೆ ಅರ್ಥ ಆಗಬೇಕಿರೋದು , ಅರ್ಜುನ ” ಪರಮಾತ್ಮನಿಗೆ ಪ್ರಿಯನಾದ ಪಾರ್ಥ ….” ಅನ್ನೋದು .

ಕೊನೇ ಮಾತು : ಅಭಿಮನ್ಯುವನ್ನ ಕೊಂದವರು ಕೌರವರೆಂದು ಎಲ್ಲರಿಗೂ ಗೊತ್ತು . ಮತ್ತು ಸಮಾಜದಲ್ಲಿ ಕೌರವರಿಗ್ಗೆ ಮತ್ತವರ ಸೋದರಮಾವ ಶಕುನಿಗೆ ಇರುವ ಸ್ಥಾನಮಾನಗಳೇನು ಅನ್ನೋದು ಎಲ್ಲರಿಗೂ ಗೊತ್ತು . ಅಂತಿಮ ವಿಜಯ ಸತ್ಯದ್ದೇ … ನ್ಯಾಯದ್ದೇ … ಮತ್ತು ಪಾಂಡವರದ್ದೇ …