ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿಸಿದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಅವರನ್ನು ಮಂಗಳವಾರ (ಆಗಸ್ಟ್ 8) ಅಧಿವೇಶದಿಂದ ಅಮಾನತು ಮಾಡಲಾಗಿದೆ.
ಬೆಳಿಗ್ಗೆ ಆರಂಭವಾದ ಸಂಸತ್ತು ಮುಂಗಾರು ಅಧಿವೇಶನದ ರಾಜ್ಯಸಭೆಯ ಕಲಾಪ ಪ್ರತಿಪಕ್ಷಗಳ ಗದ್ದಲಕ್ಕೆ ಕಾರಣವಾಯಿತು. ಈ ವೇಳೆ ಟಿಎಂಸಿಯ ಒಬ್ರಿಯಾನ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸಭಾಪತಿ ಜಗದೀಪ್ ಧನ್ಕರ್ ಪ್ರಕಟಿಸಿದರು.
ಕಲಾಪ ಆರಂಭವಾದಗಿನಿಂದ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ಡೆರೆಕ್ ಒಬ್ರಿಯಾನ್ ಅವರು ಮಾತನಾಡಲು ಅಡ್ಡಿಪಡಿಸುತ್ತಿದ್ದರು. ಇದರಿಂದ ನಿರಂತರವಾಗಿ ಸದನದ ಕಲಾಪಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಭಾಪತಿ ಜಗದೀಪ್ ಧನ್ಕರ್, ಅವಿಧೇಯತೆ ಮತ್ತು ಸದನದಲ್ಲಿ ನಿರಂತರವಾಗಿ ಗದ್ದಲ ಸೃಷ್ಟಿಸಿದ ಕಾರಣಕ್ಕೆ ಒಬ್ರಿಯಾನ್ ಅವರನ್ನು ಅಮಾನತುಗೊಳಿಸಿದರು.
ಒಬ್ರಿಯಾನ್ ಅವರು ದೆಹಲಿ ಸೇವೆಗಳ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದರು.
ರಾಜ್ಯಸಭೆಯಲ್ಲಿ ಗದ್ದಲದ ನಡುವೆ ಸಭಾಪತಿ ಧನ್ಕರ್ ಅವರು ಡೆರೆಕ್ ಒಬ್ರಿಯಾನ್ ಅವರಿಗೆ ಸದನದಿಂದ ಹೊರಹೋಗಬೇಕು ಎಂದು ಆದೇಶಿಸಿದರು. ಬಳಿಕ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.
ಲೋಕಸಭೆಯಲ್ಲಿ ಸೋಮವಾರ ಬಹಿಷ್ಕರಿಸಲಾದ ಕಲಾಪದ ಭಾಗವನ್ನು ಪುನಃ ದಾಖಲಿಸಬೇಕು ಎಂದು ಅಗ್ರಹಿಸಿ ಮಂಗಳವಾರ ಪಟ್ಟು ಹಿಡಿದವು. ನಿಯಮ 267ರ ಅಡಿ ಮಣಿಪುರ ವಿಚಾರ ಚರ್ಚೆ ನಡಸಬೇಕು ಎಂದು ಘೋಷಣೆ ಕೂಗಿದವು. ಹೀಗಾಗಿ ಸಭಾಧ್ಯಕ್ಷ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿದರು.
ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಮಧ್ಯಾಹ್ನ ಸಮಯ ನಿಗದಿಯಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಭಾರೀ ಜಟಾಪಟಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.
ಮಧ್ಯಾಹ್ನದ ವೇಳೆ ಪ್ರಧಾನಿ ಮೋದಿ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರ ಗಲಭೆ ವಿಚಾರ ಚರ್ಚಿಸಲಿದ್ದಾರೆ.
ಅವಿಶ್ವಾಸ ನಿರ್ಣಯ ಚರ್ಚೆ ಹಿನ್ನೆಲೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಸಂಸತ್ತಿಗೆ ರಾಹುಲ್ ಗಾಂಧಿ ಆಗಮನ | ಕಾಂಗ್ರೆಸ್, ಪ್ರತಿಪಕ್ಷಗಳ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಅವರು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಆಗಸ್ಟ್ 10 ರಂದು ಉತ್ತರಿಸಲಿದ್ದಾರೆ.
ಬೆಳಿಗ್ಗೆ ಡೆರೆಕ್ ಒಬ್ರಿಯಾನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ಬಂದು ಮಣಿಪುರದ ಬಗ್ಗೆ ಉತ್ತರಿಸಲಿ” ಎಂದು ಬರೆದುಕೊಂಡಿದ್ದರು.