ತಿರುಪತಿಯಲ್ಲಿ ಭೀಕರ ಕಾಲ್ತುಳಿತವಾಗಿದ್ದು, ಭಕ್ತರು ಸಾವನ್ನಪ್ಪಿದ್ದಾರೆ. ತಿರುಪತಿಯಲ್ಲಿ ಇಂದು ರಾತ್ರಿ ವೈಕುಂಠ ಏಕಾದಶಿ ಆಚರಣೆಗಾಗಿ ಸ್ಥಾಪಿಸಲಾಗಿದ್ದ ಟೋಕನ್ ಕೌಂಟರ್‌ಗಳಲ್ಲಿ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿದೆ.

ಸೇಲಂನ ಮಹಿಳೆ ಸೇರಿದಂತೆ ಹಲವಾರು ಭಕ್ತರು ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ನಾನು ದಿಗ್ಭ್ರಾಂತಗೊಂಡಿದ್ದೇನೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ ದುರಂತ ನಡೆದಿದೆ. ತಿರುಪತಿಯ ವಿಷ್ಣುನಿವಾಸಂ ಬಳಿ ದುರಂತ ಸಂಭವಿಸಿದೆ. ಅಲಿಪಿರಿ, ಶ್ರೀನಿವಾಸಂ, ಸತ್ಯನಾರಾಯಣಪುರಂ ಹಾಗೂ ಪದ್ಮಾವತಿಪುರಂನಲ್ಲಿ ಭಕ್ತರು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಕಾಲ್ತುಳಿತ ಉಂಟಾಗಿದೆ.

ಟೋಕನ್ ವಿತರಣಾ ಕೇಂದ್ರಗಳಲ್ಲಿ ಘಟನೆ ನಡೆದಿದ್ದು, ಜನವರಿ 10 ರಿಂದ 19ರವರೆಗೆ ನಡೆಯಲಿರುವ ವೈಕುಂಠ ದ್ವಾರ ದರ್ಶನಕ್ಕಾಗಿ ಸಾವಿರಾರು ಭಕ್ತರು ಟೋಕನ್‌ಗಳನ್ನು ಸಂಗ್ರಹಿಸಲು ಜಮಾಯಿಸಿದ್ದರು. ಕೌಂಟರ್‌ಗಳು ಬೆಳಗ್ಗೆ 5 ಗಂಟೆಗೆ ತೆರೆಯಬೇಕಾಗಿದ್ದರೂ, ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದರು. ಸಂಜೆಯ ವೇಳೆಗೆ ಭಾರೀ ಜನಸಂದಣಿ ಉಂಟಾಯಿತು.