ಮಧ್ಯಪ್ರದೇಶದ ಲೋಕಸಭಾ ಕ್ಷೇತ್ರ ಕ್ಷೇತ್ರ ಬಾಹ್ರೈಚ್ ಸಂಸದ ಅಕ್ಷಯಬರ್ ಲಾಲ್ ಗೋಂಡ್ ಅವರು ರೈತ ನಾಯಕ ಟಿಕಾಯತ್ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ರಾಕೇಶ್ ಟಿಕಾಯತ್ ಒಬ್ಬ ಡಕಾಯಿತ ಎಂದು ಹೇಳಿರುವ ಅವರು, ರೈತ ಆಂದೋಲನವನ್ನು ‘ಸಿಖ್ಖಿಸ್ತಾನ್’ಗಾಗಿ ನಡೆಯುತ್ತಿರುವ ಪ್ರತಿಭಟನೆ ಎಂದು ಆರೋಪಿಸಿದ್ದಾರೆ.
ಸೆಪ್ಟೆಂಬರ್ 2020ರಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಜಾರಿಯಾಗಿತ್ತು. ಇದರ ವಿರುದ್ದನಡೆಯುತ್ತಿರುವ ಪ್ರತಿಭಟನೆ ರೈತರ ಪ್ರತಿಭಟನೆಯಲ್ಲ. ಇವರು ರಾಜಕೀಯ ಪಕ್ಷಗಳ ಬೆಂಬಲಿತರು. ಇವರಿಗೆ ಸಿಖ್ಖಿಸ್ತಾನ್ ಹಾಗು ಪಾಕಿಸ್ತಾನದಿಂದ ಪ್ರಚೋದಿಸಲಾಗುತ್ತಿದೆ, ಎಂದು ಅಕ್ಷಯವರ್ ಹೇಳಿದ್ದಾರೆ.
“ಟಿಕಾಯತ್ ಒಬ್ಬ ಡಕಾಯಿತ. ಇದು ನಿಜವಾದ ರೈತರ ಪ್ರತಿಭಟನೆಯಾಗಿದಿದ್ದರೆ, ದೇಶದಲ್ಲಿ ಹಾಲು, ತರಕಾರಿ, ಆಹಾರ ಧಾನ್ಯ ಹಾಗೂ ಹಣ್ಣುಗಳ ಕೊರತೆ ಎದುರಾಗುತ್ತಿತ್ತು. ಇವರು ನಿಜವಾದ ರೈತರಲ್ಲ. ಇವರಿಗೆ ವಿದೇಶಿ ಮೂಲಗಳಿಂದ ಹಣ ಸಂದಾಯವಾಗುತ್ತಿದೆ. ಪ್ರಮುಖವಾಗಿ ಕೆನಡಾದಿಂದ ಹಣ ಬರುತ್ತಿದೆ. ಆತಂಕವಾದಿಗಳಿಂದ ಹಣ ಹರಿದು ಬರುತ್ತಿದೆ. ಇದರ ಕುರಿತಾಗಿ ತನಿಖೆ ನಡೆಯುತ್ತಿದೆ,” ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದ ಬಳಿಕ ಬಹುತೇಕ ಉತ್ತರ ಭಾರತದ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಬಟನೆಗೆ ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆಯಿಂದ ಬೆಂಬಲ ಲಭಿಸಿದೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ಎಂ ಎಸ್ ಪಿಗೆ ಕಾನೂನಿನ ಮಾನ್ಯತೆ ನೀಡುವಂತೆ ಪ್ರತಿಭಟನಾನಿರತರು ಬೇಡಿಕೆಯಿಟ್ಟಿದ್ದಾರೆ.
ರೈತ ಪ್ರತಿಭಟನೆಯ ಕುರಿತು ಕರ್ನಾಟಕದ ವಿಧಾನಸಭೆ ಅಧಿವೇಶನದಲ್ಲಿಯೂ ತೀವ್ರವಾದ ಚರ್ಚೆ ನಡೆದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೊಂದು ಕಾಂಗ್ರೆಸ್ ಪ್ರಾಯೋಜಿತ ಹೊರಾಟ. ವಿದೇಶಿ ಏಜೆಂಟರ ಮೂಲಕ ನಡೆಸಲಾಗುತ್ತಿರುವ ಆಂದೋಲನ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್, ಸರ್ಕಾರದ ಆರೋಪಕ್ಕೆ ಪೂರಕವಾದ ಸಾಕ್ಷ್ಯಾಧಾರಗಳಿದ್ದರೆ ಕೂಡಲೇ ಇದಕ್ಕೆ ಸಂಬಂಧಿಸಿದವರನ್ನು ಬಂಧಿಸಬೇಕು. ಇಲ್ಲದಿದ್ದರೆ, ಇದು ರೈತರಿಗೆ ಮಾಡುತ್ತಿರುವ ಅಪಮಾನ ಎಂದು ಹೇಳಿದ್ದಾರೆ.
ಸಿಎಂ ಸದನದಲ್ಲಿ ನೀಡಿರುವ ಹೇಳಿಕೆಯಿಂದ ಕುಪಿತರಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ನೀಡಿರುವ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು ಎಂದು ಜರೆದಿದ್ದಾರೆ.