ಮೈಸೂರು: ತಿಹಾರ್ ಜೈಲಿಗೆ ಹೋಗಿ ಬಂದವರು ಈಗ ಲೋಕಾಯುಕ್ತ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ ಲೋಕಾಯುಕ್ತ ದಾಳಿ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮನೆಯಲ್ಲಿ ಎಷ್ಟು ಬಂಡಲ್ ಹಣ ಇತ್ತು ಎಷ್ಟು ಅಕ್ರಮ ದಾಖಲೆ ಇತ್ತು ಎಂಬುದನ್ನು ಜನರು ನೋಡಿದ್ದಾರೆ. ಡಿಕೆಶಿ ಈಗ ಬೇಲ್ ನಲ್ಲಿದ್ದಾರೆ, ಯಾವಾಗ ಜೈಲಿಗೆ ಹೋಗ್ತಾರೆ ಗೊತ್ತಿಲ್ಲ. ಇಂತಹವರು ಲೋಕಾಯುಕ್ತ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದಾಳಿ ಬಗ್ಗೆ ಸ್ಪಷ್ಟವಾದ ತನಿಖೆ ಆಗಬೇಕು, ಯಾರೇ ತಪ್ಪು ಮಾಡಿದ್ರೂ ತಪ್ಪೇ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಲೋಕಾಯುಕ್ತ ನಡೆಸಿದ ಈ ದಾಳಿಯಿಂದ ಬಿಜೆಪಿಗೇನು ಮುಜುಗರವಿಲ್ಲ. ಸಾವಿರಾರು ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ದ ಡಿಕೆಶಿಗೆ ಮುಜುಗರ ಇಲ್ಲ, ನಮಗೇಕೆ ಮುಜುಗರವಾಗುತ್ತದೆ, ಸಿಕ್ಕಿರುವ ಹಣದ ಬಗ್ಗೆ ನಮಗೆ ABCD ಗೊತ್ತಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸೋಮಣ್ಣ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದು, ಬೇರೆ ಪ್ರಶ್ನೆ ಕೇಳಪ್ಪ, ಸಾಕು ಅದನ್ನ ಬಿಡಪ್ಪ, ಬಿಜೆಪಿ ಬಹು ದೊಡ್ಡ ಪಕ್ಷ. ಒಂದು ವಿಚಾರವನ್ನು ಇಷ್ಟು ದೊಡ್ಡದು ಮಾಡುವುದು ಬೇಡ ಅವರಿಗೆ ಅನಾರೋಗ್ಯವಿದ್ದದ್ದು ಸತ್ಯ, ಬೇರೆ ಕಾರ್ಯಕ್ರಮಗಳಿದ್ದದ್ದು ಸತ್ಯ. ಸಚಿವ ಸೋಮಣ್ಣ ಅವರಿಗೆ ಯಾವುದೇ ಅಸಮಾಧಾನವೂ ಇಲ್ಲ ಎಂದು ತಿಳಿಸಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಸಚಿವ ವಿ ಸೋಮಣ್ಣ ಗೈರಾದ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಪ್ರತಿಕ್ರಿಯಿಸಿ, ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಸೋಮಣ್ಣನವರು ಬಂದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ಎಲ್ಲರಿಗೂ ಸಾಕಷ್ಟು ಜವಾಬ್ದಾರಿಗಳನ್ನು ಕೊಟ್ಟಿದೆ. ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ, ನಾನು ಅಲ್ಲಿ ಇರಬೇಕಿತ್ತು ಆದರೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದೇನೆ ಎಂದರು.