ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಗಿಗೊಂಡ ಲಾಕ್ಡೌನ್: ಸರಕಾರದ ಸಚಿವರ ನಡುವೆ ಪರ-ವಿರೋಧದ ಸಮರ

ನಿಧಾನವಾಗಿಯಾದರೂ ಕೋವಿಡ್ 19 ನ ಎರಡನೇ ಅಲೆಯ ಆರ್ಭಟ ದೇಶದ ನಾನಾ ಕಡೆ ಕ್ಷೀಣವಾಗಲಾರಂಭಿಸಿದೆ. ಕೆಲವು ರಾಜ್ಯಗಳು ಲಾಕ್ ಡೌನ್ ಮುಂದುವರಿಸದಿರಲು ನಿರ್ಧರಿಸಿವೆ. ಆದರೆ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಇನ್ನಷ್ಟು ಬಿಗಿಯಾಗಲಾರಂಭಿಸಿದೆ.

ಕೋವಿಡ್ ಸಾಂಕ್ರಾಮಕದ ನಿಯಂತ್ರಣಕ್ಕಾಗಿ ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಧಾರವಾಡ, ಕೊಪ್ಪಳ, ಮಂಡ್ಯ, ಹಾಸನ, ರಾಯಚೂರು, ಮಡಿಕೇರಿ, ಹಾವೇರಿ, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಬಾಗಲಕೋಟೆ, ವಿಜಯಪುರ, ಬೀದರ್ ಸೇರಿದಂತೆ ರಾಜ್ಯದ ಹಲವು ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೋಮವಾರದಿಂದ ನಾಲ್ಕು ಅಥವಾ ಏಳು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ.

“ಈಗಾಗಲೇ ಸಾಕಷ್ಟು ಮಂಜಾಗ್ರತೆ ವಹಿಸಿದರೂ, ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಸರಕಾರ, ಜಿಲ್ಲಾಡಳಿತ ಎಷ್ಟೇ ಹೇಳಿದರೂ, ಲಾಕ್‍ಡೌನ್ ಹೇರಿದ್ದರೂ ಜನರ ಓಡಾಟ ಬದಲಾಗಿಲ್ಲ. ಜನತೆಗೆ ಕೈಮುಗಿದೆವು, ಕಾಲಿಗೆ ಬಿದ್ದೆವು. ಎಲ್ಲ ಬಗೆಯ ವಿನಂತಿಗೂ ಸೊಪ್ಪು ಹಾಕದೆ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಆದೇಶ ಉಲ್ಲಂಘಿಸಿ ಓಡಾಡುವವರ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ. ವಾಹನದಲ್ಲಿರುವವರನ್ನು ಬಂಧಿಸಲಾಗುತ್ತದೆ” ಎಂದು ಶಿವಮೊಗ್ಗದ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸಚಿವ ಈಶ್ವರಪ್ಪ ಅವರ ಹೇಳಿಕೆಯು ಸರಕಾರ ಅಸಹಾಯಕತೆಯನ್ನು ಬಿಂಬಿಸುತ್ತಿದೆ ಎಂಬ ಟೀಕೆಗಳೂ ಕೇಳಿಬರುತ್ತಿದೆ.

46 ದಿನಗಳಲ್ಲಿಯೇ ಕನಿಷ್ಠ ಪ್ರಕರಣಗಳು ಪತ್ತೆ:

ದೇಶದಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ 1,65, 553 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 46 ದಿನಗಳಲ್ಲೇ ಕನಿಷ್ಠವಾಗಿದೆ. ಸಹಜವಾಗಿಯೇ ಕೋವಿಡ್ ನಿಯಂತ್ರಣದಲ್ಲಿ ಪ್ರಗತಿ ಸಾಧಿಸಿರುವ ಹಲವು ರಾಜ್ಯಗಳು ಲಾಕ್ ಡೌನ್ ಸಡಿಲಿಸಲು ನಿರ್ಧರಿಸಿವೆ. ದಿಲ್ಲಿ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳು ಈಗಾಗಲೇ ಲಾಕ್ ಡೌನ್‍ನಿಂದ ವಿನಾಯಿತಿಯನ್ನು ಘೋಷಿಸಿವೆ.

ಆದರೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಒಡಿಶಾ, ಹರ್ಯಾಣ ಮುಂತಾದ ರಾಜ್ಯಗಳು ಲಾಕ್‍ಡೌನ್ ಕ್ರಮಗಳನ್ನು ಮುಂದುವರಿಸಲು ಒಲವು ತೋರಿಸುತ್ತಿವೆ.

ವೈಫಲ್ಯ ಮುಚ್ಚಲು ರಾಜ್ಯ ಸರಕಾರದ ಹೆಣಗಾಟ?:

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 20,378 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 382 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. 3.42 ಲಕ್ಷ ಸಕ್ರಿಯ ಪ್ರಕರಣಗಳಿವೆ. “ಲಾಕ್ ಡೌನ್ ಕುರಿತು ಈಗಲೇ ನಿರ್ಧಾರ ಮಾಡಲಾಗದು, ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುವೆವು” ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಅಂದರೆ, ಕೊರೋನಾ ನಿಯಂತ್ರಣ ಮಾಡುತ್ತೇವೆ ಎಂಬ ದೃಢ ನಿರ್ಧಾರದ ಬದಲು, ಸೋಂಕು ಹೇಗೆ ಹರಡುತ್ತಿದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳುತ್ತಿರುವುದು, ಕೋವಿಡ್ ನಿಯಂತ್ರಣದಲ್ಲಿ   ವೈಫಲ್ಯಗಳನ್ನು ಮುಚ್ಚಿಹಾಕಲು ರಾಜ್ಯ ಸರಕಾರ ಯತ್ನಿಸುತ್ತಿದೆಯೇ ಎಂಬ ಅನುಮಾನಗಳನ್ನು ಜನರಲ್ಲಿ ಹುಟ್ಟುಹಾಕಿದೆ.

ಲಾಕ್ ಡೌನ್ ನಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ. ನಿತ್ಯ ದುಡಿದು ಬದುಕುವ ಬಡವರ, ಕೂಲಿ ಕಾರ್ಮಿಕರ ಆರ್ಥಿಕ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ಇನ್ನೊಂದೆಡೆ ವಾರವಿಡೀ ಕಠಿಣ ಲಾಕ್‍ಡೌನ್ ಮಾಡಿದ್ದರೂ, ವಾರಾಂತ್ಯದಲ್ಲಿ ನಿರ್ಬಂಧ ತೆರವಾದಾಗ ಜನ ಮಾಸ್ಕ್ ಧರಿಸುವುದಾಗಲಿ, ದೈಹಿಕ ಅಂತರವಾಗಲಿ ಪಾಲಿಸದೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದು ಗುಂಪುಗೂಡುತ್ತಿರುವುದು ಲಾಕ್ ಡೌನ್ ಮಾಡಿದ್ದೇ ವ್ಯರ್ಥ ಎಂಬ ಸನ್ನಿವೇಶ ಸೃಷ್ಟಿಸುತ್ತಿದ್ದಾರೆ. ಇಷ್ಟು ದಿನಗಳಾದರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಲು ರಾಜ್ಯ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಲಾಕ್ ಡೌನ್ ವಿಸ್ತರಣೆ ಶೇ.36ರಷ್ಟು ಮಾತ್ರ ಪರಿಣಾಮಕಾರಿ:

ರಾಜ್ಯದಲ್ಲಿ ಮೇ 10ರಿಂದ 24 ರವರೆಗೆ ಲಾಕ್ ಡೌನ್ ಮಾಡಿದ್ದು ಶೇ.80ರಷ್ಟು ಪರಿಣಾಮಕಾರಿಯಾಗಿದ್ದರೆ, ಆನಂತರದ ವಿಸ್ತರಣೆ ಶೇ.36ರಷ್ಟು ಪರಿಣಾಮಕಾರಿ ಎಂದು ಐಐಎಸ್ಸಿಯ ಕಂಪ್ಯೂಟೇಶನ್ ಅಂಡ್ ಡೇಟಾ ಸೈನ್ಸಸ್ ವಿಭಾಗದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಾಕ್ ಡೌನ್ ವಿಸ್ತರಣೆಯಾದ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ತುಂಬ ಇಳಿಮುಖವಾಗಬೇಕಿತ್ತು. ಆದರೆ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಸಕ್ರಿಯ ಪ್ರಕರಣಗಳ ಪ್ರಮಾಣ ಹೆಚ್ಚು ಕಡಿಮೆ ಹಿಂದಿನಂತೆಯೇ ಇದೆ ಎಂದು ತಜ್ಞರು ಹೇಳಿರುವುದು, ರಾಜ್ಯ ಸರಕಾರ ಲಾಕ್‍ಡೌನ್ ಮಾಡಿಯೂ ಕೋವಿಡ್ 19 ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದಕ್ಕೆ ಸಾಕ್ಷಿ ಎಂಬ ಪ್ರತಿಪಕ್ಷಗಳ ದೂರನ್ನು ಪುಷ್ಟೀಕರಿಸುತ್ತಿದೆ.

ಲಾಕ್ ಡೌನ್ ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಗಳಿಲ್ಲವೇ?

ಬೇರೆ ಬೇರೆ ರಾಜ್ಯಗಳು ಲಾಕ್ ಡೌನ್ ಜತೆಗೆ ನಿಯಮ ಸಡಿಲಿಸಿ ವ್ಯಾಪಾರ, ವಹಿವಾಟಿಗೆ ಅವಕಾಶ ಕೊಟ್ಟಿವೆ. ಹರ್ಯಾಣದ ಸರಕಾರವು ಜೂನ್ 7 ರವರೆಗೆ ಲಾಕ್ ಡೌನ್ ಘೋಷಿಸಿದ್ದರೂ, ಸಮ-ಬೆಸ (Odd- Even) ಪದ್ಧತಿಯಡಿ ಅಂಗಡಿಗಳನ್ನು, ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿದೆ. ಈ ನಿಯಮದಡಿ ಅಂಗಡಿಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತದೆ. ಮಂದಿ ವಾರಾಂತ್ಯದ ಮಾರುಕಟ್ಟೆಗೆ ಮುಗಿ ಬೀಳುವುದನ್ನು ತಪ್ಪಿಸಲು ಇಂಥ ಕ್ರಮವನ್ನು ಅಲ್ಲಿನ ಸರಕಾರವು ಕೈಗೊಂಡಿದೆ.

ತೆಲಂಗಾಣದಂಥ ಕೆಲವು ರಾಜ್ಯಗಳು ಬೆಳಗ್ಗೆ ಆರರಿಂದ ಮಧ್ಯಾಹ್ನ 1ರವರೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಮಧ್ಯಾಹ್ನ 2ರಿಂದ ಬೆಳಗ್ಗೆ 6 ರವರೆಗೆ ಕಠಿಣವಾಗಿ ಲಾಕ್ ಡೌನ್ ಜಾರಿಯಲ್ಲಿಟ್ಟಿವೆ. ಬೇರೆ ರಾಜ್ಯಗಳ ಒಳ್ಳೆಯ ಪಾಠಗಳನ್ನು ನಮ್ಮ ಸರಕಾರವೂ ಪಾಲಿಸಿದರೆ ಜನರಿಗೆ ಅನುಕೂಲವಾಗಲಿದೆ.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ:

ರಾಜ್ಯದಲ್ಲಿ ಸದ್ಯ ಸಭೆ-ಸಮಾರಂಭಗಳು ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ಮದುವೆ, ಮುಂಜಿಯಂಥ ಶುಭ ಕಾರ್ಯಗಳು ಕೂಡ ನಿಂತು ಹೋಗಿವೆ. ಹೂವು, ಹಣ್ಣು, ತರಕಾರಿ ಮಾರಾಟ ದೊಡ್ಡ ಮಟ್ಟದಲ್ಲಿ ಆಗುತ್ತಿಲ್ಲ. ವ್ಯಾಪಾರಿಗಳು ರೈತರ ಬಳಿ ಹೋಗುತ್ತಿಲ್ಲ. ರೈತರು ಬೆಳೆದ ಹೂವು, ಹಣ್ಣು, ತರಕಾರಿಗಳು ಹೊಲದಲ್ಲೇ ಉಳಿದು, ಕೊಳೆತು ಗೊಬ್ಬರವಾಗುತ್ತಿದೆ. ಕಳೆದ ಲಾಕ್ ಡೌನ್ ವೇಳೆಯೂ ಇದೇ ಪರಿಸ್ಥಿತಿ ಇತ್ತು . ಈ ಬಾರಿಯೂ ಇದು ಪುನರಾವರ್ತನೆಯಾಗಿದೆ.

ಹಿಂಗಾರಿನಲ್ಲಿ ಬೆಳೆ ಬೆಳದ ರೈತನ ಸ್ಥಿತಿ ತುಂಬ ಕೆಟ್ಟದಾಗಿದೆ. ಈ ವರ್ಷ ಬೆಳೆ ಚೆನ್ನಾಗಿ ಬಂದಿದ್ದರೂ ಕೊಳ್ಳೋರಿಲ್ಲದೆ ಬೆಳೆಯೇ ಅನಾಥವಾಗುವ ಸ್ಥಿತಿ ನಿರ್ಮಾಣವಾಗಿದೆ. ಎಷ್ಟು ಬೇಗ ಲಾಕ್ ಡೌನ್ ನಿಂದ ರಾಜ್ಯಕ್ಕೆ ಮುಕ್ತಿ ದೊರೆಯುವುದೋ ಎಂದು ಅನ್ನದಾತ ಕಾಯುತ್ತಿದ್ದಾನೆ. ಆದರೆ ದಿನಗಳು ಉರುಳಿದಂತೆ ಆತ ಬೆಳೆದ ವಸ್ತುಗಳು ಕೊಳೆಯುವುದರಿಂದ ನಷ್ಟ ಹೆಚ್ಚಾಗುತ್ತಿದೆ. ಕೆಲವು ರೈತರಿಗೆ ಬೆಳೆದ ಹಣವಿರಲಿ, ಕಟಾವು ಮಾಡಿದ ಖರ್ಚೂ ಕೈಗೆ ಗಿಟ್ಟುತ್ತಿಲ್ಲ. ಸರಕಾರ ಹೆಕ್ಟೇರ್ ಗೆ 10 ಸಾವಿರ ರೂ. ಘೋಷಿಸಿದ್ದರೂ ಬೆಳೆ ಬೆಳೆಯಲು ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಿರುವ ರೈತನಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಿರಲಿ, ಬೆಳೆದ ಖರ್ಚೂ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ.

ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸಚಿವರಲ್ಲೇ ಭಿನ್ನರಾಗ:

ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ರಾಜ್ಯ ಸರಕಾರದ ಸಚಿವರು ಭಿನ್ನ ಹೇಳಿಕೆಗಳನ್ನು ನೀಡಿ ಜನರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ದಿನಗೂಲಿ ನೌಕರರು ಲಾಕ್ ಡೌನ್ ನಿಂದ ಅತಂತ್ರರಾಗಿದ್ದು, ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಲಾಕ್ ಡೌನ್ ಮುಂದುವರಿಸುವುದು ಬೇಡ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಸಚಿವ ಎಂ.ಟಿ.ಬಿ.ನಾಗರಾಜ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಜೂನ್ 7 ರ ನಂತರ ಅನ್ ಲಾಕ್ ಆಗುವ ಬಗ್ಗೆ ಏಕಾಏಕಿ ನಿರ್ಧಾರ ಕೈಗೊಳ್ಳಲಾಗದು ಎಂದು ಹೇಳಿದ್ದಾರೆ. ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಳ್ಳದೇ, ತಾಂತ್ರಿಕ ತೊಂದರೆಗಳನ್ನು ತಿಳಿದುಕೊಳ್ಳದೆ, ಸಮಿತಿ ಸಲಹೆಗಳನ್ನು ಕೇಳಿಸಿಕೊಳ್ಳದೆ ಹೇಳಿಕೆ ನೀಡುವುದು ಅಪ್ರಸ್ತುತ ಎಂದು ಅವರು ತಮ್ಮದೇ ಸರಕಾರದ ಸಚಿವರ ಸಲಹೆಗಳನ್ನು ತಳ್ಳಿಹಾಕಿದ್ದಾರೆ.

ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಬೇಕೇ ಬೇಡವೇ ಎನ್ನುವ ಬಗ್ಗೆ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯವರು ಈಗಾಗಲೇ ವರದಿ ಸಿದ್ಧಪಡಿಸಿದ್ದಾರೆ. ಹಿರಿಯ ಸಚಿವರ ಜತೆ ಈ ವರದಿಯನ್ನು ಇಟ್ಟುಕೊಂಡು ಸಿಎಂ ಸಭೆ ನಡೆಸಲಿದ್ದಾರೆ. ಸಚಿವರು, ತಜ್ಞರ ಸಭೆ ನಡೆಸಿ ಅಭಿಪ್ರಾಯವನ್ನೂ ಸಂಗ್ರಹಿಸಲಿದ್ದಾರೆ. ಜೂನ್ 4 ಇಲ್ಲವೇ 5 ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.

ಲಾಕ್ ಡೌನ್ ನಿಂದ ರಾಜ್ಯದ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿರುವುದರಿಂದ ಖಜಾನೆಗೆ ಭಾರಿ ಹೊಡೆತ ಬಿದ್ದಿದೆ. ಆದ್ದರಿಂದ ಆರ್ಥಿಕ ಚಟುವಟಿಕೆ ಆರಂಭಿಸುವುದು ಸೂಕ್ತ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಸಿಎಂಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕೋವಿಡ್ ನಿಯಂತ್ರಣದಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಲಾಕ್ ಡೌನ್ ಅಸ್ತ್ರವನ್ನು ಮುಂದುವರಿಸುವರೋ ಇಲ್ಲವೋ ಎಂಬುದು ಈ ವಾರದ ಅಂತ್ಯದೊಳಗೆ ತಿಳಿದುಬರಲಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...