ಕೆಲವೇ ದಿನಗಳ ಅಂತರದಲ್ಲಿ ಬರೋಬ್ಬರಿ ಒಂಬತ್ತು ಜನರನ್ನು ಕೊಂದ ಹುಲಿಯನ್ನು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ.
ಹೈದರಾಬಾದ್ ಮತ್ತು ಪಾಟ್ನಾದಿಂದ ಕರೆಸಲಾದ ಅರಣ್ಯ ಸಿಬ್ಬಂದಿಗಳ ತಂಡವು ಬಗಾಹಾದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನರ ಹತ್ಯೆ ಮಾಡುತ್ತಿದ್ದ ಹುಲಿಯನ್ನು ಹೊಡೆದುರುಳಿಸಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಪ್ರಭಾತ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
“ಹುಲಿಯನ್ನು ಬೋನಿನಲ್ಲಿ ಹಿಡಿಯಲು ಅರಣ್ಯ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಹುಲಿ ಜನವಸತಿ ಪ್ರದೇಶದಲ್ಲಿ ವಾಸಿಸಲು ಒಗ್ಗಿಕೊಂಡಿರುವುದು ಕಂಡುಬಂದಾಗ ಹತ್ಯೆಗೆ ಆದೇಶ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಹುಲಿ ಒಂಬತ್ತು ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಬಗಾಹಿ ಗ್ರಾಮದ 36 ವರ್ಷದ ಸಂಜಯ್ ಮಹತೋ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅದಕ್ಕೂ ಮುನ್ನ ಸಿಗಡಿ ಗ್ರಾಮದ 12 ವರ್ಷದ ಬಗಾದಿ ಕುಮಾರಿಯನ್ನು ಹುಲಿ ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರಲ್ಲಿ ಭಾರಿ ಆತಂಕ ಮನೆ ಮಾಡಿತ್ತು.
ಹುಲಿಯ ಮೃತದೇಹವನ್ನು ವಿಧಿವಿಧಾನಗಳ ಪ್ರಕಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಜಿಲ್ಲಾ ಅರಣ್ಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ, ಬಾಲಿವುಡ್ ನಟ ರಣದೀಪ್ ಹೂಡಾ, ಅಧಿಕಾರಿಗಳು ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹುಲಿಯನ್ನು ಗುಂಡಿಕ್ಕಿದ ನಂತರ ಜನರು ಅದನ್ನು ಎಳೆದಾಡಿದ್ದಾರೆ, ಚಿಕಿತ್ಸೆ ನೀಡಲು ಮುಂದಾಗಿಲ್ಲ ಎಂದು ಟೀಕಿಸಿದ್ದಾರೆ. ಗಾಯಗೊಂಡ ಹುಲಿಯನ್ನು ಜನರು ತುಳಿದು, ಎಳೆದಾಡುತ್ತಿರುವ ಘಟನೆಯ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ರಾಷ್ಟ್ರಪ್ರಾಣಿಯನ್ನು ನಡೆಸುಕೊಳ್ಳಬೇಕಾದ ರೀತಿ ಇದಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿಗದಿಪಡಿಸಿದ ಪ್ರೋಟೋಕಾಲ್‌ಗೆ ವಿರುದ್ಧವಾಗಿ ಹುಲಿಯನ್ನು ಬೇಟೆಯಾಡಲು ಬಿಹಾರ ಅರಣ್ಯ ಇಲಾಖೆಯು ಖಾಸಗಿ ಬೇಟೆಗಾರನನ್ನು ನಿಯೋಜಿಸಿದೆ ಎಂದು ಅವರು ಆರೋಪಿಸಿದ್ದಾರೆ.