ಬೆಂಗಳೂರು: ಏ.07: ಕಾಂಗ್ರೆಸ್-ಜೆಡಿಎಸ್ ಹೆಚ್ಚು ಕಡಿಮೆ ಟಿಕೆಟ್ ಘೋಷಣೆ ಮಾಡಿ ಆಗಿದೆ. ಇನ್ನುಳಿದ ಕೆಲವು ಕ್ಷೇತ್ರಗಳ ಪಟ್ಟಿ ಫೈನಲ್ ಮಾಡಲು ಮುಂದಾಗಿವೆ. ಈ ನಡುವೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ದೆಹಲಿಗೆ ಶಿಫ್ಟ್ ಆಗಿದೆ. 224 ಕ್ಷೇತ್ರಗಳಿಗೆ ತಲಾ 3 ಹೆಸರನ್ನು ಕಳುಹಿಸಿದ್ದು, 2 ದಿನ ದೆಹಲಿಯಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಸಂಸದೀಯ ಸದಸ್ಯರು ಭಾಗಿಯಾಗಲಿದ್ದಾರೆ. CM ಬಸವರಾಜ್ ಬೊಮ್ಮಾಯಿ, ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸೂಕ್ ಮಾಂಡವೀಯ, ಅಣ್ಣಾಮಲೈ, BL ಸಂತೋಷ್, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೂಡ ಭಾಗಿಯಾಗಲಿದ್ದಾರೆ.
ರಾಷ್ಟ್ರ ರಾಜಧಾನಿಗೆ ಆಕಾಂಕ್ಷಿಗಳು ದಂಡಯಾತ್ರೆ..!
BJP ಟಿಕೆಟ್ ಪಡೆಯಲು ಆಕಾಂಕ್ಷಿತರು ದೆಹಲಿಗೆ ದಂಡಯಾತ್ರೆ ಮಾಡಿದ್ದಾರೆ. ದೆಹಲಿಯಲ್ಲೇ ಇದ್ದುಕೊಂಡು ಟಿಕೆಟ್ ಪಡೆಯಲು ಕಸರತ್ತು ಶುರು ಮಾಡಿದ್ದಾರೆ. ರಾಜ್ಯ ನಾಯಕರು ಹಾಗು ಕೇಂದ್ರ ನಾಯಕರ ಮೇಲೆ ಒತ್ತಡ ಹಾಕಲು ಕಸರತ್ತು ಮಾಡುತ್ತಿದ್ದಾರೆ. ಹಾಲಿ ಶಾಸಕರು, ಮಾಜಿ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಕೂಡ ದೆಹಲಿಗೆ ಹೊರಟಿದ್ದು, ಕೊನೆ ಕ್ಷಣದಲ್ಲಿ ಟಿಕೆಟ್ ಮಿಸ್ ಆಗುವ ಸಾಧ್ಯತೆ ಹೆಚ್ಚಿರುವ ಕಾರಣ ದೆಹಲಿಯಲ್ಲೇ ಇದ್ದುಕೊಂಡು ಟಿಕೆಟ್ ಪಡೆಯಲು ತಂತ್ರಗಾರಿಕೆ ಮಾಡಲು ಮುಂದಾಗಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ದೆಹಲಿ ದಂಡಯಾತ್ರೆಗಾಗಿ ಕ್ಷೇತ್ರದ ಪ್ರಚಾರವನ್ನೂ ತೊರೆದು ಹೊರಟಿದ್ದಾರೆ. ಈಗಾಗಲೇ ಒಂದು ಕ್ಷೇತ್ರಕ್ಕೆ ಮೂವರ ಹೆಸರನ್ನು ಶಿಫಾರಸು ಮಾಡಿದ್ದು, ಒಂದೇ ಕ್ಷೇತ್ರದ ಮೂವರು ದಿಲ್ಲಿಗೆ ಹೊರಟು ನಿಂತಿದ್ದಾರೆ.
ಜಾತಿ, ಸಾಮರ್ಥ್ಯ, ಗೆಲ್ಲುವ ಅಭ್ಯರ್ಥಿಗಳ ಲೆಕ್ಕಾಚಾರ..
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದ್ದು, ಸರ್ವೆಗಳ ಆಧಾರದ ಮೇಲೆ ಅಭ್ಯರ್ಥಿಗಳ ಟಿಕೆಟ್ ಭವಿಷ್ಯ ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ. ರಾಜ್ಯ ಹಾಗೂ ಕೇಂದ್ರ ನಾಯಕರು ಹಲವಾರು ಸರ್ವೆಗಳನ್ನು ಮಾಡಿಸಿದ್ದು, ಆ ಸರ್ವೆಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಭ್ಯರ್ಥಿ ವರ್ಚಸ್ಸು, ಜಾತಿ, ಸಾಮರ್ಥ್ಯ, ಎದುರಾಳಿ ಅಭ್ಯರ್ಥಿ ಪರಿಗಣನೆ ಮಾಡಲಾಗುತ್ತದೆ ಎನ್ನಲಾಗಿದೆ. ಇನ್ನು ಗುಜರಾತ್ ಹಾಗು ಉತ್ತರ ಪ್ರದೇಶ ಮಾದರಿಯನ್ನು ಆಧರಿಸಿಯೂ ಟಿಕೆಟ್ ಹಂಚಿಕೆ ಮಾಡಲು ಮುಂದಾಗಿದ್ದು, ಹೊಸಬರಿಗೆ ಟಿಕೆಟ್ ಕೊಡಲು ನಿರ್ಧಾರ ಮಾಡಲಾಗಿದೆ. ಮೊದಲ ಹಂತದಲ್ಲಿ ಕಾಂಗ್ರೆಸ್ ಪಕ್ಷದ ರೀತಿಯಲ್ಲೇ 124 ಕ್ಷೇತ್ರ ಗಳಿಗೆ ಟಿಕೆಟ್ ಪ್ರಕಟ ಮಾಡಲಿದ್ದು, ಏಪ್ರಿಲ್ 9 ಅಥವಾ 10ರಂದು ಮೊದಲ ಪಟ್ಟಿ ಬಿಡುಗಡೆಗೆ ಸಿದ್ದತೆ ಮಾಡಲಾಗ್ತಿದೆ.
ಜೆಡಿಎಸ್, ಕಾಂಗ್ರೆಸ್ ಘೋಷಣೆ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್..!
ಜೆಡಿಎಸ್, ಕಾಂಗ್ರೆಸ್ನಿಂದ ಘೋಷಣೆ ಆಗಿರುವ ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಘೋಷಣೆ ಮಾಡುವ ಮೂಲಕ ಬಿಜೆಪಿ ರಾಜಕೀಯ ತಂತ್ರಗಾರಿಕೆ ಮಾಡಲು ಮುಂದಾಗಿದೆ. ಬಿಜೆಪಿ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡಿದರೆ ಬಂಡಾಯ ಎದ್ದು ಬೇರೆ ಪಕ್ಷಗಳಿಗೆ ವಲಸೆ ಹೋಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಹಾಗು ಜೆಡಿಎಸ್ ಟಿಕೆಟ್ ಘೋಷಣೆ ಮಾಡಿದ ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಣೆ ಮಾಡುವುದು, ಆ ಬಳಿಕ ಕಾಂಗ್ರೆಸ್ ಹಾಗು ಜೆಡಿಎಸ್ ಉಳಿದ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ನೋಡಿಕೊಂಡು ಆ ನಂತರ ಟಿಕೆಟ್ ಘೋಷಣೆ ಮಾಡುವ ನಿರ್ಧಾರ ಮಾಡಲಾಗಿದೆ. ಈಗಾಗಲೇ ಬಿ.ಎಸ್ ಯಡಿಯೂರಪ್ಪ ಮನೆಗೆ ಆಕಾಂಕ್ಷಿಗಳು ಬಂದು ಭೇಟಿ ನೀಡುತ್ತಿದ್ದು, ತಮ್ಮ ಮಕ್ಕಳಿಗೆ, ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನವೇ ಬಿಜೆಪಿಯಲ್ಲಿ ಆಕ್ರೋಶದ ಕಟ್ಟೆ ಹೊಡೆಯುವ ಲಕ್ಷಣ ಕಾಣಿಸುತ್ತಿದ್ದು, ಟಿಕೆಟ್ ಘೋಷಣೆ ಆದ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳೂ ಇದೆ ಎನ್ನಬಹುದು.
ಕೃಷ್ಣಮಣಿ