ಬೆಂಗಳೂರು : ರಾಜ್ಯ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ (Karnataka) ಆಗಮಿಸಿ ಬರ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ (DCM Parameshwara) ತಿಳಿಸಿದ್ದಾರೆ.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿ ಬರ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಒಂದು ತಂಡ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೊಂದು ತಂಡ ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ಭಾಗದಲ್ಲಿ ಮೂರನೇ ತಂಡ ಅಧ್ಯಯನ ನಡೆಸಲಿದೆ ಎಂದು ಹೇಳಿದ್ದಾರೆ.
ಕೇಂದ್ರದ ತಂಡಗಳು ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ತಮ್ಮ ವರದಿಯನ್ನು ಸಲ್ಲಿಸಲಿವೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ್ದು, ಅದರ ಆಧಾರದ ಮೇಲೆಯೇ ಕೇಂದ್ರದ ತಂಡಗಳು ಪರಿಶೀಲನೆ ನಡೆಸಲಿವೆ.
ರಾಜ್ಯದಲ್ಲಿ ಬರ ಎಂದು ಘೋಷಿಸಲಾಗಿರುವ ಎಲ್ಲ ತಾಲೂಕುಗಳ ಬಗ್ಗೆಯೂ ಕೇಂದ್ರದ ತಂಡಗಳು ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಕೆಲವು ತಾಲೂಕುಗಳಿಗೆ ತಂಡಗಳು ಖುದ್ದಾಗಿ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಿವೆ. ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಹಾಗೂ ಕೇಂದ್ರದ ತಂಡಗಳು ಸ್ಥಳದಲ್ಲೇ ನಡೆಸುವ ಪರಿಶೀಲನೆಯಲ್ಲಿನ ವಾಸ್ತವಾಂಶಗಳ ನಡುವೆ ಯಾವುದೇ ವ್ಯತ್ಯಾಸವಿದೆಯೇ ಎಂಬುದನ್ನೂ ಅವರು ಪರಿಶೀಲಿಸಲಿದ್ದಾರೆ ಎಂದರು.

ಕೇಂದ್ರದ ತಂಡಗಳಿಗೆ ತಮ್ಮದೇ ಆದ ಮಾರ್ಗಸೂಚಿಗಳಿವೆ. ರಾಜ್ಯ ಸರ್ಕಾರವೂ ಬರ ತಾಲೂಕುಗಳನ್ನು ಘೋಷಿಸುವ ಸಂದರ್ಭದಲ್ಲಿ ಇದೇ ಮಾರ್ಗಸೂಚಿಗಳನ್ನು ಅನುಸರಿಸಿದೆ.ಮಾರ್ಗಸೂಚಿಗಳಲ್ಲಿರುವ ಮಾನದಂಡಗಳನ್ನು ಆಧರಿಸಿಯೇ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ. ಮಾರ್ಗಸೂಚಿಗಳ ವ್ಯಾಪ್ತಿಗೆ ಬರದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿಲ್ಲ. ಹೀಗಾಗಿ ಕೇಂದ್ರದ ತಂಡಗಳು ಪರಿಶೀಲನೆ ನಡೆಸಿದಾಗ ರಾಜ್ಯ ಸರ್ಕಾರದ ವರದಿ ಹಾಗೂ ಅವರ ಪರಿಶೀಲನೆಯ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇಲ್ಲ ಎಂದರು.
ಸದ್ಯ ಇನ್ನಷ್ಟು ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯವಾಗಲಿದ್ದು, ಅದರ ನಂತರ ಅಕ್ಟೋಬರ್ ಮೊದಲ ವಾರದಲ್ಲೇ ಅಂತಿಮ ಮೆಮೊರಾಂಡಂ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಜ್ಯದ ನಷ್ಟ ಹಾಗೂ ಅಗತ್ಯವಿರುವ ಪರಿಹಾರದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಕೇಂದ್ರದ ಮುಂದೆ ಮಂಡಿಸಲಾಗುವುದು.

ಬರ ಯಾವುದೇ ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಪ್ರಕೃತಿ ವಿಕೋಪಕ್ಕೆ ಪಕ್ಷದ ಬೇಧವಿಲ್ಲ. ಕೇಂದ್ರ ಸರ್ಕಾರದ ಮುಂದೆ ಎಲ್ಲರೂ ಒಟ್ಟಾಗಿ ರಾಜ್ಯದ ಪರವಾಗಿ ಮನವಿ ಸಲ್ಲಿಸಿದರೆ ಹೆಚ್ಚಿನ ನೆರವು ಪಡೆಯಲು ಅನುಕೂಲವಾಗಲಿದೆ ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಹೇಳಿದ್ದಾರೆ.
ಬಿಜೆಪಿ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅವರು ನಮ್ಮೊಂದಿಗೆ ಬಂದರೆ ಕೇಂದ್ರ ಸರ್ಕಾರವನ್ನು ಮನವರಿಕೆ ಮಾಡಿಕೊಡಲು ಇನ್ನಷ್ಟು ಸಹಕಾರಿಯಾಗುತ್ತದೆ ಎಂಬುದು ರಾಜ್ಯ ಸರ್ಕಾರದ ಉದ್ದೇಶ. ಆದರೆ, ಅವರು ಬರದಿದ್ದರೂ ಆಡಳಿತ ಪಕ್ಷವಾಗಿ ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ಗಮನಕ್ಕೆ ವಿಷಯವನ್ನು ತರುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ.
ಬರ ಯಾವುದೇ ಪಕ್ಷದ ಸಮಸ್ಯೆಯಲ್ಲ. ಇದು ಕರ್ನಾಟಕದ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ. ಆದ್ದರಿಂದ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಕೇಂದ್ರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿಯವರೂ ನಮ್ಮೊಂದಿಗೆ ಬರಬೇಕು.
ಕೇಂದ್ರ ಸರ್ಕಾರ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ, ಕಳೆದ ವರ್ಷ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೀತಿಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟವರು ಅಂತಹ ಅವಕಾಶವನ್ನು ನೀಡಬಾರದು ಎಂಬುದು ನನ್ನ ಮನವಿ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಅವುಗಳಿಗೆ ಹೆಚ್ಚಿನ ಹಣ ಅಗತ್ಯವಾಗುತ್ತದೆ ಎಂಬುದು ಸರ್ಕಾರಕ್ಕೆ ಮೊದಲಿನಿಂದಲೂ ತಿಳಿದಿತ್ತು ಎಂದರು.
ಪ್ರಣಾಳಿಕೆ ಸಿದ್ಧಪಡಿಸುವಾಗಲೇ ಯೋಜನೆಗಳಿಗೆ ಎಷ್ಟು ಹಣ ಬೇಕಾಗಬಹುದು ಎಂಬುದರ ಕುರಿತು ಅಂದಾಜು ಮಾಡಲಾಗಿತ್ತು. ಆರಂಭದಲ್ಲಿ ಸುಮಾರು ₹40ರಿಂದ ₹45 ಸಾವಿರ ಕೋಟಿ ವೆಚ್ಚವಾಗಬಹುದು ಎಂಬ ಅಂದಾಜಿತ್ತು. ನಂತರ ವಾಸ್ತವಿಕ ವೆಚ್ಚ ಸುಮಾರು ₹50 ಸಾವಿರ ಕೋಟಿಗೂ ಹೆಚ್ಚಾಗಿದೆ. ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿಯೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹಣಕಾಸಿನ ಮೇಲೆ ಒತ್ತಡ ಇರುವುದನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಸರ್ಕಾರ ಈ ಹಣಕಾಸಿನ ಬದ್ಧತೆಯನ್ನು ನಿರ್ವಹಿಸಿಕೊಂಡು ಬಂದಿದೆ. ಮುಂದಿನ ಎರಡು ವರ್ಷಗಳಲ್ಲೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದರು.
ಮುಖ್ಯಮಂತ್ರಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದು, ಪಕ್ಷದ ನಾಯಕರನ್ನು ಭೇಟಿಯಾಗುವುದರ ಜೊತೆಗೆ ಕೇಂದ್ರದ ಕೆಲವು ಸಚಿವರನ್ನೂ ಭೇಟಿಯಾಗಲಿದ್ದಾರೆ.
ಬರ ಪರಿಹಾರ ಹಾಗೂ ವಿಪತ್ತು ನಿರ್ವಹಣೆಯ ವಿಚಾರವಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇದರ ಜೊತೆಗೆ ನೀರಾವರಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಗತ್ಯಗಳನ್ನು ವಿವರಿಸುವ ಸಾಧ್ಯತೆಯಿದೆ.
ಪಿಂಚಣಿ ಫಲಾನುಭವಿಗಳ ಮರು ಸೇರ್ಪಡೆ
ಈ ಹಿಂದೆ ₹32 ಸಾವಿರ ಇದ್ದ ಆದಾಯದ ಮೇಲಿನ ಮಿತಿಯನ್ನು ಈಗ ₹1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಹಿಂದೆ ಸುಮಾರು 23 ಲಕ್ಷ ಜನರ ಪಿಂಚಣಿ ರದ್ದಾಗಿತ್ತು. ಈಗ ಆದಾಯದ ಮಿತಿಯನ್ನು ಹೆಚ್ಚಿಸಿರುವುದರಿಂದ ಅರ್ಹ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ದೊರೆಯಲಿದೆ. ಅದೇ ಸಂದರ್ಭದಲ್ಲಿ ಸೂಕ್ತ ಪ್ರಮಾಣಪತ್ರ ಸಲ್ಲಿಸದವರು ಹಾಗೂ ವಯೋಮಿತಿ ಪೂರೈಸದವರ ಅರ್ಜಿಗಳನ್ನು ಪರಿಶೀಲಿಸಿ ಅನರ್ಹರನ್ನು ಹೊರಗಿಡುವ ಮೂಲಕ ವ್ಯವಸ್ಥೆಯಲ್ಲಿ ಶುದ್ಧೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿನೀರಾವರಿ ಅಳವಡಿಸಲು ಅರ್ಜಿ ಆಹ್ವಾನ | PM Krishi Sinchayee Yojana






