ಬೆಂಗಳೂರು:ಏ.೦5: ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ಚುನಾವಣೆ ಗೆಲ್ಲುವುದಕ್ಕಾಗಿ ಬಳಕೆ ಮಾಡಿಕೊಳ್ಳಲಿದೆ ಅನ್ನೋದು ಎಲ್ಲಾ ವಿರೋಧ ಪಕ್ಷಗಳ ಆರೋಪ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರವೂ ಕೂಡ ಅದೇ ರೀತಿ ನಡೆದುಕೊಳ್ಳುತ್ತದೆ. ಎಂದೂ ಇಲ್ಲದ ದಾಳಿ ಚುನಾವಣೆ ಸಮಯದಲ್ಲಿ ನಡೆಯುತ್ತದೆ. ಚುನಾವಣಾ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ನಡೆಯುತ್ತದೆ ಅನ್ನೋದಾದ್ರೂ ಕೇವಲ ವಿರೋಧ ಪಕ್ಷದ ಶಾಸಕರು, ನಾಯಕರು, ಆಪ್ತರ ನಿವಾಸದ ಮೇಲೆ ದಾಳಿ ಆಗುವುದು ವಿರೋಧ ಪಕ್ಷಗಳ ಆರೋಪವನ್ನು ಸತ್ಯ ಎನ್ನುವಂತೆ ಮಾಡುತ್ತದೆ. ಇದೀಗ ರಾಜ್ಯದಲ್ಲಿ ಒಂದು ಸಾವಿರ ಮಂದಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗು ಕೇಂದ್ರ ತನಿಖಾ ದಳದ ಅಧಿಕಾರಿಗಳು ರಾಜ್ಯಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯನ್ನು ಕಾಂಗ್ರೆಸ್ ಬಹಿರಂಗ ಮಾಡಿದೆ. ಈ ಬಗ್ಗೆ ನವದೆಹಲಿಯಲ್ಲಿ ಕಾಂಗ್ರೆಸ್ ನಿನ್ನೆ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
ರಾಜ್ಯ ಉಸ್ತುವಾರಿ ಸುರ್ಜೇವಾಲ ನೇರ ಆರೋಪ..!

ದೆಹಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾತನಾಡಿದ್ದು, ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿಗಳ ಹೆಸರು  ಘೋಷಣೆ ಮಾಡಲು ಸಾಧ್ಯವಾಗ್ತಿಲ್ಲ. ಈ ಮೊದಲು ಏಪ್ರಿಲ್ 1 ರಂದು ಘೋಷಣೆ ಎಂದಿತ್ತು. ಆ ಬಳಿಕ ಮುಂದೂಡಿಕೆ ಆಗ್ತಾನೆ ಇದೆ. ಏಪ್ರಿಲ್ 10 ಆದರೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡೋದು ಕಷ್ಟವಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಲಾಗ್ತಿದೆ. ಇ.ಡಿ, ಐಟಿ, ಸಿಬಿಐ ಬಳಸಿಕೊಂಡು ಕರ್ನಾಟಕದಲ್ಲಿ ದಾಳಿಗೆ ಸಂಚು ರೂಪಿಸಿದೆ. ಬರೋಬ್ಬರಿ 100 ಕ್ಕೂ ಹೆಚ್ಚು ಅಧಿಕಾರಿಗಳನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮನ್ನು ನಿಯಂತ್ರಣ ಮಾಡಲು ನಿರ್ಧಾರ ಮಾಡಲಾಗಿದೆ. ಅಧಿಕಾರಿಗಳು ಈ ರೀತಿ ಅಕ್ರಮದಲ್ಲಿ ಭಾಗಿಯಾಗಬಾರದು, ಬಿಜೆಪಿಯ ಈ ರೀತಿ ಧಮ್ಕಿಗಳಿಗೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸೋಲಿನ ಭೀತಿಯಲ್ಲಿ ಬಿಜೆಪಿಯ ಕುತಂತ್ರ..!

ಕೇಂದ್ರ ಸರ್ಕಾರ ಕಾಂಗ್ರೆಸ್ಸಿಗರ ಮನೆ ಮೇಲೆ ದಾಳಿಗೆ ಸಿದ್ಧತೆ ಮಾಡಿಕೊಂಡಿದೆ, ನಮಗೆ ಖಚಿತ ಮೂಲಗಳಿಂದ ಸಿಕ್ಕಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿಗರನ್ನೂ ಗುರಿಯಾಗಿಸಿ ದಾಳಿಗೆ ಚಿಂತನೆ ನಡೆದಿದೆ. ಈಗಾಗಲೇ ನಮ್ಮ ಹಿತೈಷಿಗಳನ್ನು ಹೆದರಿಸುವ ಕೆಲಸ ಆಗಿದೆ. ನಮಗೆ ಸಹಾಯ ಮಾಡದಂತೆ ಬೆದರಿಕೆ ಹಾಕಿದ್ದಾರೆ. ನಾವು ಫೋನ್ ಮಾಡಿದರೂ ಯಾರೊಬ್ಬರೂ ಸ್ವೀಕಾರ ಮಾಡ್ತಿಲ್ಲ. ನಮಗೆ ಬೆಂಬಲ ಕೊಡುವ ಅಗತ್ಯವೇನಿಲ್ಲ. ಆದರೂ ಬೇರೆ ವಿಚಾರಕ್ಕೆ ಕರೆ ಮಾಡಿದರೂ ಸ್ವೀಕಾರ ಮಾಡ್ತಿಲ್ಲ. ಅಷ್ಟರ ಮಟ್ಟಿಗೆ ಹೆದರಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಈ ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದಿದ್ದಾರೆ. ಇನ್ನು ಸೋಲಿನ ಭಯದಿಂದ ಬಿಜೆಪಿ ಈ ರೀತಿ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ಇಡಿ, ಐಟಿ ಬಳಸುತ್ತಿದೆ. ಈ ರೀತಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಲು ಮುಂದಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್.
‘ಸರ್ವೇಗಳಲ್ಲಿ ಕಾಂಗ್ರೆಸ್ಗೆ ಬಹುಪರಾಕ್’ ಬಿಜೆಪಿಗೆ ಟೆನ್ಷನ್..!
ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದೆ. ಈಗಾಗಲೇ ಬಹುತೇಕ ಸರ್ವೇಗಳಲ್ಲಿ ಕಾಂಗ್ರೆಸ್ಗೆ ಬಹುಮತ ಬರಲಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ರಣದೀಪ್ ಸುರ್ಜೇವಾಲ ಹೇಳಿದಂತೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಲು ತಯಾರಿ ನಡೆದಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ತಿದ್ದಾರೆ. ಮುಂದೆಯೂ ಹಲವಾರು ಶಾಸಕರು, ಪರಿಷತ್ ಸದಸ್ಯರು ಕಾಂಗ್ರೆಸ್ ಸೇರಲಿದ್ದಾರೆ. ಕರ್ನಾಟಕ ಬಿಜೆಪಿ ಮುಳುಗುತ್ತಿರುವ ಹಡಗು ಎಂದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಹಿಂದುತ್ವ ಅಜೆಂಡಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಹಾಯಕ್ಕೆ ಬರಲ್ಲ. ಕೊನೆಯದಾಗಿ ಹಣಬಲ ಬಳಸಲು ಬಿಜೆಪಿ ತಯಾರಿ ಮಾಡಿದ್ದು, ಹಣಬಲದಿಂದಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕರ್ನಾಟಕದ ಜನತೆ ಈಗಾಗಲೇ ಕಾಂಗ್ರೆಸ್ ಗೆಲ್ಲಿಸಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಭಷ್ಟ ಸರ್ಕಾರವನ್ನು ತೊಲಗಿಸಲು ನಿರ್ಧಾರ ಆಗಿದೆ. ಕರ್ನಾಟಕ ಜನತೆ ಈ ರೀತಿಯ ಭಷ್ಟ ಸರ್ಕಾರವನ್ನು ನೋಡಿರಲಿಲ್ಲ. ಜನತೆ ಕಳೆದ ಬಾರಿಯ ತಪ್ಪನ್ನು ಈ ಬಾರಿ ಸರಿ ಮಾಡಿಕೊಳ್ತಾರೆ, ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡ್ತಿದ್ದಾರೆ ಎಂದಿದ್ದಾರೆ.
‘ನಾವು ಬಿಜೆಪಿ ತಂತ್ರಗಾರಿಕೆಗೆ ಬೆದರಲ್ಲ, ಹೋರಾಡ್ತೇವೆ’

ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಈಗಾಗಲೇ ಹಲವಾರು ಜನರು ನಮಗೆ ಹೇಳ್ತಿದ್ದಾರೆ. ಈ ಮಾಹಿತಿ ಬಿಜೆಪಿ ನಾಯಕರನ್ನು ಭಯಭೀತಗೊಳ್ಳುವಂತೆ ಮಾಡಿದೆ. ನಮಗೆ ಖಚಿತ ಮಾಹಿತಿ ಇದೆ, CBI, ED, IT ಯನ್ನು ಕೇಂದ್ರ ಸರ್ಕಾರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಳಸ್ತಿದೆ. ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ. 1000ಕ್ಕೂ ಹೆಚ್ಚು ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ. ಇದು ಅಧಿಕಾರ ದುರ್ಬಳಕೆಗೆ ನಿಶ್ಚಿತ ಸಾಕ್ಷಿಯಾಗಿದೆ. ಈ ರೀತಿಯ ನಡವಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಹೆದರಲ್ಲ, ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಘರ್ಜಿಸಿದ್ದಾರೆ. ಬಿಜೆಪಿ ಈ ವಾಗ್ದಾಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕೃಷ್ಣಮಣಿ
			
                                
                                
                                
