ದರ್ಶನ್ ಫ್ಯಾನ್ಸ್ ವಿರುದ್ಧ ಸಿಟ್ಟಾಗಿರುವ ನಟಿ ರಮ್ಯಾ ( Ramya) ದೂರು ಕೊಡಲು ಮುಂದಾಗಿದ್ದಾರೆ. ರೇಣುಕಾಸ್ವಾಮಿ (Renukaswamy) ಕುಟುಂಬದ ಪರ ರಮ್ಯಾ ನಿಂತಿರುವುದು ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ವಿವಾದ ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ನಡುವೆ ದರ್ಶನ್ ಅಭಿಮಾನಿಗಳಿಗಾಗಿಯೇ ತೆರೆಯಲಾಗಿರುವ ಅಫಿಶಿಯಲ್ ಫ್ಯಾನ್ಸ್ ಪೇಜ್ ʻಡಿ ಕಂಪನಿʼ (Official Fan Page DCompany) ನಲ್ಲಿ ರಿಯಾಕ್ಟ್ ಮಾಡದಂತೆ ಮನವಿ ಮಾಡಲಾಗಿದೆ.

ಡಿ-ಸೆಲಬ್ರೆಟಿಸ್‌ಗಳಿಗಾಗಿಯೇ ತೆರೆಯಲಾದ ಅಫಿಶಿಯಲ್ ಫ್ಯಾನ್ಸ್ ಪೇಜ್‌ನಲ್ಲಿ, ಡಿ ಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ವಿವಾದಕ್ಕೆ ಕಿವಿಗೊಡಬೇಡಿ. ಯಾವುದಕ್ಕೂ ರಿಯಾಕ್ಟ್, ಮೆಸೇಜ್ ಮಾಡಬೇಡಿ. ಪ್ರಚಾರಕ್ಕಾಗಲಿ, ಹುನ್ನಾರ ಮಾಡಲಿ, ಯಾರು ತಲೆ ಕೆಡಸಿಕೊಳ್ಳಬೇಡಿ. ದರ್ಶನ್ ಫ್ಯಾನ್ಸ್ ಯಾರೆಂದು ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿ. ಅವಮಾನಗಳು ಇನ್ನಷ್ಟು ಕೆಲಸ ಮಾಡಲು ಮೆಟ್ಟಿಲು ಆಗಲಿ ಎಂದು ಡಿ ಕಂಪನಿ ಅಭಿಮಾನಿಗಳಿಗೆ ಮನವಿ ಮಾಡಿದೆ. ಅಲ್ಲದೇ ʻಕಾಲಯ ತಸ್ಮೈ ನಮಃʼ ಎಂದು ಬರೆದು ಡೆವಿಲ್ ಸಿನಿಮಾದ ಪೋಸ್ಟರ್ ಹಂಚಿಕೊಂಡಿದೆ.

ವಿವಾದಕ್ಕೆ ಕಾರಣವೇನು?
ರೇಣುಕಾಸ್ವಾಮಿ ಕುಟುಂಬದ ಪರವಾಗಿ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮಸೇಜ್ ಕಳುಹಿಸುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮಸೇಜ್‌ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಮ್ಯಾ.

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಆ ಎಲ್ಲಾ ಸ್ಕ್ರೀನ್ ಶಾಟ್ ಅನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಾಮಂಡಲರಾಗಿದ್ದಾರೆ. ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕ ಚಿಕ್ಕ ಮಕ್ಕಳ ಬಗ್ಗೆ ಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಕಮೆಂಟ್ ಅಕೌಂಟ್‌ಗಳನ್ನು ಬಹಿರಂಗ ಪಡಿಸಿದ ರಮ್ಯಾ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಹಾಗೂ ಡಿಬಾಸ್ ಫ್ಯಾನ್ಸ್ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀದ್ವೇಷಿ ಮನೋಭಾವದವರು. ಇಂಥವರಿಂದಲೇ ಹೆಣ್ಣು ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಅಂತ ಡಿ ಬಾಸ್ ಫ್ಯಾನ್ಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ ರಮ್ಯಾ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಾಮೆಂಟ್‌ಗಳು ಸಾಕ್ಷಿ. ನಿಮ್ಮ ಮಸೇಜ್‌ಗಳಿಂದ ನಿಮ್ಮ ಯೋಗ್ಯತೆ ಇಷ್ಟರಲ್ಲೇ ಗೊತ್ತಾಗುತ್ತೆ’ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.