ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ ಆರಂಭವಾಗಿದ್ದು, ರಾಜ್ಯ ರಾಜಧಾನಿಗೆ ಮೋದಿ ಬಂದಿಳಿದಿದ್ಧಾರೆ. ಇದರ ಬೆನ್ನಲ್ಲೇ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ, ಆಕ್ಸಿಜನ್ ಕೊಡೋಕೆ ಆಗದವರು ಯೋಗ ಮಾಡೋಕೆ ಬಂದಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಸೋಮವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ವೇಳೆ ಆಕ್ಸಿಜನ್ ಕೊಟ್ರಾ? ಹೈಕೋರ್ಟ್ ಹೇಳಿದ ಮೇಲೆ ಆಕ್ಸಿಜನ್ ಕೊಟ್ರ? ಹೈಕೋರ್ಟ್ ಹೇಳಿದ್ರೂ ಆಕ್ಸಿಜನ್ ಕೊಟ್ಟಿರಲಿಲ್ಲ. ಸುಪ್ರೀಂಕೋರ್ಟ್ ಚಾಟಿಬೀಸಿದ ಮೇಲೆ ಕೊಟ್ರು. ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸತ್ರು. ಚಾಮರಾಜನಗರದಲ್ಲಿ 36 ಜನ ಸಾವನಪ್ಪಿದ್ರು. ರಾಜ್ಯದ ಬೇರೆಡೆಯೂ ಆಕ್ಸಿಜನ್ ಇಲ್ಲದೆ ಸತ್ರು. ಇದಕ್ಕೆಲ್ಲ ಯಾರು ಕಾರಣ? ಆಕ್ಸಿಜನ್ ಕೊಡೋಕೆಆಗದವರು ಈಗ ಯೋಗ ಮಾಡೋಕೆ ಬಂದಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬ್ಯಾಂಕ್ ಗಳ ವಿಲೀನ ಮಾಡುವ ಮೂಲಕ ಮೋದಿ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು.

ಮೈಸೂರು ಬ್ಯಾಂಕ್ ಅನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪನೆ ಮಾಡಿದ್ದರು. ಇವಾಗ ಮೈಸೂರು ಬ್ಯಾಂಕ್ ಇದ್ಯಾ? ಅವರ ಹೆಸರನ್ನು ಅಳಿಸಿ ಹಾಕಿದ್ದಾರೆ. ಕರಾವಳಿಯ ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್ ಸೇರಿದಂತೆ ರಾಜ್ಯದಲ್ಲಿ ನಾಲ್ಕು ಬ್ಯಾಂಕ್ ಗಳನ್ನು ಬೇರೆ ಬ್ಯಾಂಕ್ ಗಳ ಜೊತೆ ವಿಲೀನಮಾಡಲಾಗಿದೆ. ಈ ಬ್ಯಾಂಕ್ ಗಳು 317 ಲಕ್ಷ ಕೋಟಿ ಆಸ್ತಿ, 75,000 ಕ್ಕೂ ಹೆಚ್ಚು ಸಿಬ್ಬಂದಿ ಬಲ ಹೊಂದಿದೆ. ಈ ನಾಲ್ಕು ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುತ್ತಿತ್ತು. ಇದೀಗ ವಿಲೀನದಿಂದಾಗಿ ಕನ್ನಡಿಗರಿಗೆ ಕೆಲಸ ಸಿಗುತ್ತಿದ್ಯಾ? ಇದು ಮೋಸ ಅಲ್ವಾ ? ಎಂದು ಪ್ರಶ್ನಿಸಿದರು. ಬ್ಯಾಂಕ್ ಗಳ ವಿಲೀನ ಕರ್ನಾಟಕ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಅವಮಾನ ಎಂದು ಆರೋಪಿಸಿದರು.
ಮೋದಿ ಅವರು ಪ್ರಧಾನಿಯಾದ ಮೇಲೆ ತೆರಿಗೆಯಲ್ಲಿ ನಮ್ಮ ಪಾಲು ಕಡಿಮೆಯಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಅಬಕಾರಿ ಸುಂಕ, ಜಿಎಸ್‌ಟಿ ಸೇರಿದಂತೆ ವಿವಿಧ ರೂಪದ ತೆರಿಗೆಗಳಲ್ಲಿ ಸಂಗ್ರಹವಾಗಿರೋದು 19 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಶೇ.42ರಷ್ಟನ್ನು ರಾಜ್ಯಕ್ಕೆ ಕೊಟ್ಟಿದ್ದರೆ 8 ಲಕ್ಷ ಕೋಟಿ ರೂ. ಹಂಚಿಕೆ ಆಗಬೇಕಿತ್ತು. ಇದೀಗ 2.14 ಲಕ್ಷ ಕೋಟಿ ಮಾತ್ರ ಕೊಟ್ಟಿದ್ದಾರೆ. ಇನ್ನೂ 11.ಲಕ್ಷ ಕೋಟಿ ಉಳಿದಿದ್ದು ಒಂದು ಸಾವಿರ ಕೋಟಿ ಬಿಡುಗಡೆ ಮಾಡಿ ಅದನ್ನೇ ಜಾಹಿರಾತಿನಲ್ಲಿ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದರೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿದ್ದು, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ನಮ್ಮ ಸಾಧನೆ. ಅದನ್ನೂ ತಮ್ಮದೆಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.
ಕೇಂದ್ರದ ಹಣಕಾಸು ಸಚಿವರು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು. 14ನೇ ಹಣಕಾಸು ಆಯೋಗದಿಂದ 15 ನೇ ಹಣಕಾಸು ಆಯೋಗದ ನಡುವೆ 1.07% ನಮ್ಮ ಪಾಲು ಕಡಿಮೆಯಾಯಿತು. ಇದು ಆದದ್ದು ನರೇಂದ್ರ ಮೋದಿ ಅವರ ಕಾಲದಲ್ಲಿ. ಹಾಗಾಗಿ 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ನಿರ್ಮಾಲ ಸೀತಾರಾಮನ್ ಅವರು ಇದನ್ನು ತಿರಸ್ಕಾರ ಮಾಡಿದ್ದರಿಂದ ನಮ್ಮ ರಾಜ್ಯಕ್ಕೆ ಸಿಗಲಿಲ್ಲ. ಇದಕ್ಕೆ ಯಾರು ಕಾರಣ? ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವಲ್ಲವೇ?
ಇಷ್ಟೆಲ್ಲ ಅನ್ಯಾಯ ಮಾಡಿ ಈಗ ಮೈಸೂರಿಗೆ ಬಂದು ಯೋಗ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗುತ್ತಿಗೆ ಕೆಲಸಗಳಲ್ಲಿ 40% ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ರು, ಅದಕ್ಕೆ ಮೋದಿ ಅವರು ಏನು ಕ್ರಮ ತೆಗೆದುಕೊಂಡಿದ್ದಾರೆ? ಈಗ ಮೋದಿ ಅವರು ಕರ್ನಾಟಕದ ಜನರಿಗೆ ಉತ್ತರ ಹೇಳಬೇಕು. ಪತ್ರ ಬರೆದಿದ್ದು 7/6/2021 ರಲ್ಲಿ, ಇದಾಗಿ ಒಂದು ವರ್ಷ ಆಗಿದೆ. ನಾನು ಚೌಕಿದಾರ್, ನಾ ಖಾವೂಂಗಾ, ನಾ ಖಾನೆದೂಂಗ ಎನ್ನುವ ಮೋದಿ ಅವರು ಯಾಕೆ ಈ ವರೆಗೆ ಕ್ರಮ ಕೈಗೊಂಡಿಲ್ಲ? ಇದಕ್ಕೆಲ್ಲ ರಾಜ್ಯದ ಜನರಿಗೆ ಉತ್ತರ ಕೊಡಬೇಕೋ ಬೇಡವೋ? ಎಂದು ಪ್ರಶ್ನಿಸಿದ್ದಾರೆ.
ಸಬ್ ಅರ್ಬನ್ ರೈಲು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅನಂತ ಕುಮಾರ್ ಅವರು ಕೇಂದ್ರ ಸಚಿವರಾಗಿದ್ದರು, ಅಂದಿನಿಂದಲೂ ಹೇಳಿಕೊಂಡು ಬರ್ತಿದ್ದಾರೆ. ಆದರೆ ಕೆಲಸ ಆರಂಭ ಆಗಿಲ್ಲ, ಈಗ ಮಾಡ್ತಿದ್ದೀವಿ ಎಂದು ಹೇಳ್ತಿದ್ದಾರೆ. ಮೋದಿ ಅವರಿಂದ ಕರ್ನಾಟಕದ ಜನರಿಗೆ ಅನ್ಯಾಯ, ಅಗೌರವ ಆಗಿದೆ. ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ಲೂಟಿ ಮಾಡುತ್ತಿದೆ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದಕ್ಕೆಲ್ಲ ಮೋದಿ ಅವರು ಪರವಾನಗಿ ಕೊಟ್ಟವರಂತೆ ಸುಮ್ಮನಿದ್ರೆ ಹೇಗೆ? ಉತ್ತರ ಕೊಡಬೇಕಲ್ವಾ?
ಪ್ರಧಾನಿಗಳು ನಮ್ಮ ರಾಜ್ಯಕ್ಕೆ ಬರಬಾರದು ಎಂದು ನಾನು ಹೇಳಲ್ಲ, ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದಷ್ಟೇ ನಾನು ಕೇಳುತ್ತಿರೋದು. ಆಡಳಿತ ಪಕ್ಷವನ್ನು ಪ್ರಶ್ನಿಸೋದು ನಮ್ಮ ಕರ್ತವ್ಯ. ಉತ್ತರ ಕೋಡೋದು ಬಿಡೋದು ಅವರಿಗೆ ಬಿಟ್ಟಿದ್ದು.
ಅಗ್ನಿಪಥ್ ಯೋಜನೆಯಡಿ ಯುವಕರನ್ನು ಕೇವಲ 4 ವರ್ಷಕ್ಕೆ ಸೈನ್ಯಕ್ಕೆ ನೇಮಕ ಮಾಡಿಕೊಳ್ತೀವಿ ಎಂದು ಸರ್ಕಾರ ಹೇಳುತ್ತಿದೆ. 4 ವರ್ಷ ಕೆಲಸ ಮಾಡಿದ ಮೇಲೆ ಅವರಿಗೆ ಪಿಂಚಣಿ ಸಿಗಲ್ಲ, ಆಮೇಲೆ ನಮ್ಮ ಭವಿಷ್ಯವೇನು ಎಂದು ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. ಸೈನ್ಯ ಸೇರಲು ಯುವಕರು 10ನೇ ತರಗತಿ ಪಾಸ್ ಆಗಿರಬೇಕು ಎಂದು ಇದೆ, ಸೈನ್ಯದಲ್ಲಿ 4 ವರ್ಷ ಕೆಲಸ ಮಾಡಬಹುದು, ಅದು ಮುಗಿದ ಮೇಲೆ ಅವರನ್ನು ಕೆಲಸದಿಂದ ತೆಗೆಯಲಾಗುತ್ತೆ. ಆಗ ಅವರು ಶಿಕ್ಷಣವನ್ನು ಮುಂದುವರೆಸಲು ಆಗಿರಲ್ಲ, ಪಿಂಚಣಿಯೂ ಸಿಗಲ್ಲ. ಇದು ಬಹಳ ಅವೈಜ್ಞಾನಿಕವಾಗಿದೆ ಹಾಗಾಗಿ ಯುವ ಜನರು ಈ ಯೋಜನೆ ಬೇಡ ಎಂದು ಹೇಳ್ತಿದ್ದಾರೆ. ಆದರೆ ಸರ್ಕಾರ ನಾವು ಇದನ್ನು ಮಾಡಿಯೇ ಮಾಡ್ತೀವಿ ಎಂದು ಹಠ ಹಿಡಿದು ಕೂತಿದ್ದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಯುವಕರ ಮುಖ್ಯ ಬೇಡಿಕೆ ನಾಲ್ಕು ವರ್ಷದ ನಂತರ ನಾವು ನಿರುದ್ಯೋಗಿ ಆಗುತ್ತೇವೆ, ನಮಗೆ ಪಿಂಚಣಿ ಕೂಡ ಸಿಗಲ್ಲ ಎಂಬುದು. ನನ್ನ ಪ್ರಕಾರ ಇದು ನ್ಯಾಯಯುತ ಬೇಡಿಕೆ. ಯೋಜನೆ ಕೈಬಿಡಬೇಕು, ಸರ್ಕಾರ ಯಾಕೆ ಹಠ ಹಿಡಿದು ಕೂತಿರುವುದು? ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಆರಂಭವಾದ ನಂತರದಿಂದ ಮೀಸಲಾತಿ ಎಲ್ಲಿ ಸಿಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಜನರಿಗೂ ಮೀಸಲಾತಿ ಕೊಡಲು ಆರಂಭವಾದ ಮೇಲೆ ಮೀಸಲಾತಿಯ ಅರ್ಥವೇ ಹೊರಟು ಹೋಗಿದೆ. ನಿರುದ್ಯೋಗವನ್ನು ಹೆಚ್ಚು ಮಾಡುವುದು ಸರ್ಕಾರದ ಉದ್ದೇಶ ಅನ್ನಿಸುತ್ತೆ.
ಅಗ್ನಿಪಥ್ ವಿರುದ್ಧದ ಯುವಕರ ಹೋರಾಟ ನ್ಯಾಯಯುತವಾಗಿದೆ ಎಂದು ನಾವು ಬೆಂಬಲ ನೀಡಿದ್ದೇವೆ, ಆದರೆ ಈ ಹೋರಾಟವನ್ನು ಹಿಂಸಾತ್ಮಕವಾಗಿ ನಡೆಸಬಾರದು. ಶಾಂತಿಯಿಂದ ಹೋರಾಟ ಮಾಡಬೇಕು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಅಂಬೇಡ್ಕರ್ ಅವರ 125ನೇ ಜಯಂತಿ ಆಚರಣೆ ಸಂದರ್ಭದಲ್ಲಿ ನಮ್ಮ ಸರ್ಕಾರ ಮಂಜೂರು ಮಾಡಿದ್ದು, ಜಾಗ, ಅನುದಾನ ನೀಡಿದ್ದು ನಾನು. ಬೆಂಗಳೂರು – ಮೈಸೂರು ಹೆದ್ದಾರಿಯನ್ನು ತಾನೇ ಮಾಡಿಸಿದ್ದು ಎಂದು ಪ್ರತಾಪ್ ಸಿಂಹ ಬಹಳ ಸಲ ಹೇಳಿದ್ದಾರೆ. ವಾಸ್ತವವೆಂದರೆ ನಾನು ಮುಖ್ಯಮಂತ್ರಿಯಾಗಿದ್ದೆ, ಮಹದೇವಪ್ಪನವರು ಸಚಿವರಾಗಿದ್ದರು, ಆಗ ಕೇಂದ್ರದಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ಭೂಸಾರಿಗೆ ಸಚಿವರಾಗಿದ್ದರು. ರಾಜ್ಯ ಹೆದ್ದಾರಿಯಾಗಿದ್ದ ಮೈಸೂರು – ಬೆಂಗಳೂರು ಹೆದ್ದಾರಿಯನ್ನು 10 ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದನೆ ಮಾಡಿಕೊಟ್ಟವರು ಆಸ್ಕರ್ ಫರ್ನಾಂಡೀಸ್. ಯೋಜನೆ ಅನುಮೋದನೆಯೇ ಆಗದಿದ್ದರೆ ಈ ಸರ್ಕಾರ ಕೆಲಸ ಮಾಡುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಡಾಕ್ಟರ್ ಆಫ್ ಸೈನ್ಸ್ ಓದಿದ್ದರು. ಇದಕ್ಕಾಗಿ ಅವರ 125ನೇ ಹುಟ್ಟು ಹಬ್ಬದ ಸ್ಮರಣಾರ್ಥ ನಮ್ಮ ಸರ್ಕಾರ ಕರ್ನಾಟಕದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆ ಮಾಡಿದ್ದು. ನರೇಂದ್ರ ಮೋದಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದೇನೆ, ಅವುಗಳಿಗೆ ಉತ್ತರ ಕೊಡುತ್ತಾರೆ ಎಂಬ ಆಶಾ ಭಾವನೆ ಇದೆ. ನೋಡೋಣ ಎಂದು ಸವಾಲು ಹಾಕಿದ್ದಾರೆ.






