
ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಹೌದು, ಮಂಡ್ಯದವರನ್ನು ನರಸತ್ತವರು, ಗಂಡಸರಾಗಿ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಜಿಲ್ಲೆಯ ರಾಜಕೀಯ ಮುಖಂಡರಿಗೂ ಶಿವರಾಮೇಗೌಡ ತಿವಿದಿದ್ದಾರೆ.

ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ರಾಮನಗರದಿಂದ ಕುಮಾರಸ್ವಾಮಿಯನ್ನ ಓಡಿಸಿದ್ದಾರೆ. ಆದರೆ ಮಂಡ್ಯದವರೆಲ್ಲಾ ನರಸತ್ತವರು ಎಂದು ಇಲ್ಲಿಗೆ ಬಂದಿದ್ದಾರೆ. ಜಿಲ್ಲೆಯ ಮುಖಂಡರು ಈಗಲಾದರೂ ಎಚ್ಚೆತ್ತುಕೊಳ್ಳಿ. ನಿಮ್ಮಲ್ಲೂ ಗಂಡಸಿದ್ದಾರೆ, ಹಾಸನದಿಂದ ಕರೆತಂದು ಮಂಡ್ಯದಲ್ಲಿ ಗಂಡಸರು ಮಾಡುವ ಅಗತ್ಯವಿಲ್ಲ, ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಮಂಡ್ಯ ಜಿಲ್ಲೆಯ ಜನತೆಗೆ ಕರೆ ಕೊಡ್ತೀನಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಯೋಗೇಶ್ವರ್ ರೀತಿ ನಾನು ಜಂಪಿಂಗ್ ಸ್ಟಾರ್. ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟುವ ಉದ್ದೇಶದಿಂದ ಪಕ್ಷ ಸೇರಿದ್ದೆ. ವಿಧಾನಸಭೆ ಸೋಲಿನ ಬಳಿಕ MP ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಆಯ್ತು. ಸಂಘಟನೆ ದೃಷ್ಠಿಯಿಂದ ಜೆಡಿಎಸ್‌ಗೆ ಮಂಡ್ಯ ಜಿಲ್ಲೆ ಬಿಟ್ಟು ಕೊಡದಂತೆ ವಿಜಯೇಂದ್ರ ಬಳಿ ಮನವಿ ಮಾಡಿದ್ದೇನು. ಯಾರಿಗೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ, ಪಾರ್ಟಿ ಕಟ್ಟುತ್ತೇನೆ ಎಂದು ವಿಜಯೇಂದ್ರ ಭರವಸೆ ಕೊಟ್ಟಿದ್ದರು. ಆದರೆ ಸಾರಾಸಗಟಾಗಿ ಬಿಜೆಪಿಯನ್ನ ಜೆಡಿಎಸ್‌ನವರು ಕತ್ತುಹಿಸುಕಿದರು. ಹೊಂದಾಣಿಕೆ ಬಳಿಕ ಬಿಜೆಪಿ ಪಕ್ಷದ ಉಸಿರುಗಟ್ಟಿಸಲಾಗಿದೆ ಎಂದು ದೂರಿದ್ದಾರೆ.









