
*ಲೇಖನ: ನೂರ ಅಹ್ಮದ್ ಮಕಾನದಾರ*
ಹೊನ್ನಾವರ: ಧಾರ್ಮಿಕ ಕ್ಷೇತ್ರಗಳು ಕೇವಲ ಧಾರ್ಮಿಕತೆಗೆ ಮಹತ್ವ ನೀಡಿದರೆ ಸಾಲದು. ಧಾರ್ಮಿಕತೆಯ ಜೊತೆಗೆ ಪರಿಸರದ ಕಾಳಜಿ ಹಾಗೂ ಸೇವಾ ಕೈಂಕರ್ಯಗಳನ್ನು ಕೈಗೊಂಡಾಗ ಮಾತ್ರ ಧಾರ್ಮಿಕ ಕ್ಷೇತ್ರಗಳಿಗೆ ಇನ್ನು ಹೆಚ್ಚಿನ ಮಹತ್ವ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪರಿಸರದ ಪ್ರಜ್ಞೆಯ ಮೂಲಕ ಸಾಮಾಜಿಕ ಕಾರ್ಯಕ್ಕೆ ಅಣಿಯಾಗಿ ದಶಕಕ್ಕೂ ಅಧಿಕ ವರ್ಷದಿಂದ ನೆಲ, ಜಲಕ್ಕಾಗಿ ಜಾಗೃತಿಗೆ ಮುಂದಾಗಿದೆ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿ.ಹೌದು, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಪೂಜ್ಯ ಶ್ರೀ ಮಾರುತಿ ಗುರೂಜಿ ಅವರ ಪರಿಸರ ಕಾಳಜಿ, ಸಾಮಾಜಿಕ ಚಿಂತನೆ, ಭವಿಷ್ಯದ ಬಗೆಗಿನ ಕಳಕಳಿಯಿಂದ ಜನರಲ್ಲಿ ಜಾಗೃತಿಗೆ ಮುಂದಾಗಿದ್ದಾರೆ. ಶ್ರೀ ಕ್ಷೇತ್ರದಿಂದ ಶರಾವತಿ ಕುಂಭ ಆರಂಭಿಸುವ ಮೂಲಕ ಸಾಮಾಜಿಕವಾಗಿ ಶ್ರೀ ಕ್ಷೇತ್ರವನ್ನು ಸಮರ್ಪಿಸುವ ಜೊತೆಗೆ ಮುಖ್ಯವಾಗಿ ಶರಾವತಿಯ ಸಂರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ.

*ಏನಿದು ಶರಾವತಿ ಕುಂಭ..?*ಪ್ರಸಿದ್ಧ ಜೋಗಜಲಪಾತದಿಂದಾಗಿ ಶರಾವತಿ ನದಿ ಜಗತ್ಪ್ರಸಿದ್ಧಿ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವನದಿ ಕೂಡ ಹೌದು. ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದಲ್ಲಿ ಜನಿಸಿದ ಶರಾವತಿ, ಸೈಹಾದ್ರಿಯ ಮೂಲಕ ಹರಿದು, ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ರಾಜ್ಯದ ಜಲವಿದ್ಯುತ್ ಉತ್ಪಾದನೆಯಲ್ಲಿ ಶೇ.35ರಷ್ಟು ಅಗ್ಗದಲ್ಲಿ ವಿದ್ಯುತ್ ಉತ್ಪಾದಿಸುವ ಶರಾವತಿ ನದಿ, ಈ ಭಾಗದಲ್ಲಿ ಲಕ್ಷಾಂತರ ಎಕರೆ ಭೂ ಪ್ರದೇಶಕ್ಕೂ ನೀರುಣಿಸುತ್ತಿದೆ.

12ಕ್ಕೂ ಹೆಚ್ಚು ಗ್ರಾಮಗಳಿಗೆ ಜೀವಜಲ ಒದಗಿಸುತ್ತಿದೆ. ಆದರೆ ಇಂದು ಶರವಾತಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಲ್ಮಶ ಹಾಗೂ ಶೌಚ ತ್ಯಾಜ್ಯದಿಂದ ಮಲೀನವಾಗುತ್ತಿದೆ. ಅತೀಕ್ರಮಣದಿಂದ ಕಿರಿದಾಗುತ್ತಿದೆ. ಮರಳು ಗಣಿಗಾರಿಕೆಗೆ ಸೊರಗುತ್ತಿದೆ. ಇಂತಹ ಹಲವು ಕಾರಣಗಳಿಂದ ಮೂಲ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರವಾಸಿಗರ ಪಾಲಿಗೆ ಶರಾವತಿ ಕಸಭರಿತವಾಗುತ್ತಿದ್ದಾಳೆ. 2ಆಣೆಕಟ್ಟುಗಳಲ್ಲಿ ಸಂಗ್ರಹವಾಗುವ ಮಳೆನೀರು, ವಿದ್ಯುತ್ ಉತ್ಪಾದಿಸಿ ಹೊರಬರುವುದೇ ಅಲ್ಪಪ್ರಮಾಣದಲ್ಲಿ. ಈ ಅಲ್ಪ ಪ್ರಮಾಣದ ನೀರು ಕೂಡ ಆಣೆಕಟ್ಟುಗಳಲ್ಲಿಯೇ ನಿಲ್ಲುತ್ತದೆ. ಪವಿತ್ರ ಶರಾವತಿ ಅಪವಿತ್ರಗೊಂಡು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎನ್ನುವುದು ಈ ಭಾಗದ ಪರಿಸರ ಪ್ರೇಮಿಗಳಲ್ಲಿ ಆತಂಕವಿತ್ತು.

ಈ ಬಗ್ಗೆ ಒಂದು ಚಿಂತನೆ ಮಾಡಿ, ನದಿಯ ಸಂರಕ್ಷಣೆಯ ಸಂಕಲ್ಪದೊಂದಿಗೆ ಪೂಜ್ಯ ಶ್ರೀ ಮಾರುತಿ ಗುರೂಜಿ ಅವರು ಶರಾವತಿ ಕುಂಭದಂತಹ ಕಾರ್ಯಕ್ರಮ ಆಯೋಜಿಸಿ, ಧಾರ್ಮಿಕತೆಯ ಮೂಲಕ ಜನಜಾಗೃತಿಯ ಹೊಸಕಲ್ಪನೆಗೆ ಮುನ್ನುಡಿ ಬರೆದಿದ್ದಾರೆ. ಒಂದು ದಶಕಕ್ಕೂ ಅಧಿಕ ವರ್ಷದಿಂದ ಕುಂಭದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದ್ದು, ಇದರ ಪರಿಣಾಮವಾಗಿ ಜನರಲ್ಲಿ ಅಲ್ಪಪ್ರಮಾಣದ ಬದಲಾವಣೆ ಕೂಡ ಕಂಡುಬರುತ್ತಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ರಾಜಕೀಯ ರಹಿತವಾಗಿ ಶರಾವತಿಯ ಬಗೆಗೆ ಭಯ-ಭಕ್ತಿ ಮೂಡಿಸಲು ಶರಾವತಿಯನ್ನು ಉಳಿಸಿ-ಬೆಳೆಸಿ-ಬಳಸಿ ಎನ್ನುವ ಸಂದೇಶದ ಮೂಲಕ ಶರಾವತಿಗೆ ಆರತಿ, ಪುಣ್ಯಸ್ನಾನದಂತಹ ಕಾರ್ಯಕ್ರಮದ ಮೂಲಕ, ನದಿ ಉಳಿವಿಗೆ ಪ್ರತಿಜ್ಞೆ ಕೈಗೊಂಡು, ನದಿ ಸಂರಕ್ಷಣೆಗೆ ಜನರೇ ಕಂಕಣಬದ್ಧರಾಗುವಂತೆ ಮಾಡುವ ಉದ್ದೇಶ ಮಾರುತಿ ಗುರೂಜಿ ಅವರದ್ದಾಗಿದೆ.

ಹೀಗಾಗಿ ನದಿಯ ಬಲಬಂಡೆಯಲ್ಲಿ ವನವಾಸಿ ಶ್ರೀ ರಾಮನ ಪರಿವಾರ ಗುಡಿಯನ್ನು ನಿರ್ಮಿಸಿದ್ದಾರೆ. ಪ್ರತಿ ವರ್ಷ ನಡೆಯುವ ಕುಂಭದಲ್ಲಿ ಶ್ರೀ ಆಂಜನೇಯ ಮತ್ತು ಶ್ರೀರಾಮನ ಪರಿವಾರಕ್ಕೆ ಕುಂಭ ಸ್ನಾನ ಮಾಡಿಸುವ ಸಂಪ್ರದಾಯಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ಶರಾವತಿಗೆ ಜನಸಾಮಾನ್ಯರಲ್ಲಿ ಭಕ್ತಿಯ ಭಾವನೆ ಮೂಡಬೇಕು ಎನ್ನುವುದು ಮಾರುತಿ ಗುರೂಜಿ ಅವರ ಚಿಂತನೆ ಹಾಗೂ ದೂರದೃಷ್ಟಿಗೆ ನಿದರ್ಶನವಾಗಿದೆ. ಇಂತಹ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಕಾರ್ಯ ಶ್ಲಾಘನೀಯವಾದದ್ದು. ಪೂಜ್ಯ ಗುರುಗಳ ಈ ಕನಸಿಗೆ ಎಸ್.ಆರ್.ಎಲ್ ಸಂಸ್ಥೆಯ ಮುಖ್ಯಸ್ಥರಾದ ವೆಂಕಟ್ರಮಣ ಹೆಗಡೆ ಅವರು ಸಾಥ್ ನೀಡುತ್ತಿರುವುದು ವಿಶೇಷವಾಗಿದೆ.*ಬಾಕ್ಸ್**ಶರಾವತಿಯ ಪೌರಾಣಿಕ ಹಿನ್ನೆಲೆ*ಶರಾವತಿ ನದಿಯ ಉಗಮದ ಕುರಿತು ಪೌರಾಣಿಕ ಹಿನ್ನೆಲೆ ಇದೆ.

ರಾಮಚಂದ್ರನ ಬಾಣದಿಂದ ಭೂಗರ್ಭದಿಂದ ಮೇಲೆದ್ದು, ಸೀತಾಮಾತೆಯ ಬಾಯಾರಿಕೆಯನ್ನು ಇಂಗಿಸಿದೆ ಎಂದು ಹೇಳಲಾಗುತ್ತಿದೆ. *ಬಾಕ್ಸ್**ಕುಂಭಕ್ಕೊಂದು ವೈಜ್ಞಾನಿಕ ಕಾರಣ*ಒಂದೆಡೆ, ನದಿಯ ಸಂರಕ್ಷಣೆಯ ಮೂಲಕ ಜೀವಜಲದ ರಕ್ಷಣೆಯ ಕಾರ್ಯವಾದರೆ, ಮತ್ತೊಂದು ಕಡೆ ಪರಿಸರದ ಸಂರಕ್ಷಣೆಯ ಉದ್ದೇಶ. ಮಗದೊಂದು ಕಡೆ ಭಕ್ತರ ಆರೋಗ್ಯಕ್ಕೆ ಪೂರಕ ಈ ಶರಾವತಿ ಕುಂಭ. ಶರಾವತಿ ನದಿ . 135 ಕಿಮಿ ವ್ಯಾಪ್ತಿಯಲ್ಲಿ ಸೈಹಾದ್ರಿ ಪರ್ವತದ ಮೂಲಕ ಹರಿದು ಬರುತ್ತದೆ. ಹಲವು ಬಗೆಗಿನ ಆಯುರ್ವೇದ ಸಸ್ಯಗಳು, ಇಲ್ಲಿನ ಮಣ್ಣಿನ ಗುಣಗಳನ್ನು ಮೈಗೂಡಿಸಿಕೊಂಡು ಶರಾವತಿ ಹರಿದು ಬರುತ್ತಾಳೆ. ಹೀಗಾಗಿ ಈ ನೀರಿಗೆ ಆಯುರ್ವೇದದ ಗುಣವಿದೆ. ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೂ ಉಪಕಾರಿ.*ಪೂಜ್ಯ ಶ್ರೀ ಮಾರುತಿ ಗುರೂಜಿ, ಧರ್ಮದರ್ಶಿಗಳು**ಬಾಕ್ಸ್**ರೈಲಿನಲ್ಲಿ ಹೆಚ್ಚುವರಿ ಭೋಗಿಗಳ ವ್ಯವಸ್ಥೆ*ಬಂಗಾರಮಕ್ಕಿಯ ವೀರಾಂಜನೇಯ ದೇವಸ್ಥಾನದಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 13 ರವರೆಗೆ ನಡೆಯಲಿರುವ ಪವಿತ್ರ ಕುಂಭಮೇಳ ಹಾಗೂ ರಥೋತ್ಸವಕ್ಕೆ ಬೆಂಗಳೂರು ಭಾಗದಿಂದ ಆಗಮಿಸುವ ಯಾತ್ರಿಕರಿಗೆ ಅನುಕೂಲವಾಗುವಂತೆ ಯಶವಂತಪುರ-ಕಾರವಾರ ರೈಲಿನಲ್ಲಿ ಎರಡು ಹೆಚ್ಚುವರಿ ಭೋಗಿಗಳನ್ನು ಒದಗಿಸಲಾಗಿದೆ.

ಈ ವಿಶೇಷ ಸೌಲಭ್ಯವು ಕುಂಭಮೇಳಕ್ಕೆ ಆಗಮಿಸುವ ಯಾತ್ರಿಕರಿಗೆ ಪ್ರಯಾಣವನ್ನು ಸುಗಮಗೊಳಿಸಲಿದೆ. ಭಕ್ತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಮನವಿ. *ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು**ಭಾಕ್ಸ್**ಸಾಧು-ಸಂತರು-ಸತ್ಪುರುಷರು ಭಾಗಿ*ಏ.7ರಂದು ಗೇರುಸೊಪ್ಪೆಯಲ್ಲಿ ನಡೆಯಲಿರುವ ಶರಾವತಿ ಆರತಿ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಹೊನ್ನಾವರದಲ್ಲಿ ನಡೆಯುವ ಆರತಿಯಲ್ಲಿ ಮಿರ್ಜಾನ್ ಒಕ್ಕಲಿಗ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮತ್ತು ಹೊರನಾಡು ಅನ್ನಪೂರ್ಣೇಶ್ವರಿ ಧರ್ಮಕರ್ತರಾದ ಭೀಮೇಶ್ವರ ಜೋಷಿ ಅವರು ಸೇರಿದಂತೆ ಆಯಾ ಭಾಗದ ಸ್ಥಳೀಯ ಗಣ್ಯರು, ಭಕ್ತರು ಪಾಲ್ಗೊಳ್ಳಲಿದ್ದಾರೆ.