ಬೆಂಗಳೂರು: ಇದು ಬಿಜೆಪಿ ಸರ್ಕಾರದ ಕೊನೆ ಬಜೆಟ್ ಜೊತೆಗೆ ನಿರ್ಗಮನದ ಬಜೆಟ್. ಮುಂದಿನ ವರ್ಷ ಈ ಸರ್ಕಾರ ಇರುವುದಿಲ್ಲ, ಹಾಗಾಗಿ ಮುಂದಿನ ವರ್ಷ ಬಿಜೆಪಿ ರಾಜಸ್ವ ಉಳಿಕೆ ಬಜೆಟ್ ಮಂಡನೆ ಮಾಡಲು ಸಾಧ್ಯವಿಲ್ಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿಗೆ ಮುಂಗಡಪತ್ರವನ್ನು ಮಂಡಿಸಿದ್ದಾರೆ. ಬಜೆಟ್ ಎಂದರೆ ಹಿನ್ನೋಟ, ಮುನ್ನೋಟ ಎರಡೂ ಇರಬೇಕು. 2022-23ಕ್ಕೆ ರಾಜಸ್ವ ಉಳಿಕೆಯ ಬಜೆಟ್ ಮಾಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲಾ ವರ್ಷ ಕೂಡ ರಾಜಸ್ವ ಉಳಿಕೆಯ ಬಜೆಟ್ ಮಂಡನೆ ಮಾಡಿದ್ದೆ. ಬಜೆಟ್ ನಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕು. ಆದರೆ ಈ ಬಜೆಟ್ ನಲ್ಲಿ ಎಲ್ಲೂ ಜನರಿಗೆ ಸತ್ಯ ಹೇಳುವ ಕೆಲಸ ಮಾಡಿಲ್ಲ. ಬಜೆಟ್ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಣಾಳಿಕೆಯಲ್ಲಿನ ಭರವಸೆಗಳ ಈಡೇರಿಕೆ: ಚರ್ಚೆಗೆ ಸಿದ್ದ
ಬೊಮ್ಮಾಯಿ ಅವರು ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಜನರಿಗೆ ನೀಡಿದ್ದ ಭರವಸೆಗಳಲ್ಲಿ ಶೇ.30 ಭರವಸೆಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ. ನಾವು ಹೇಳಿದ್ದೆಷ್ಟು, ಈಡೇರಿಸಿದ್ದೆಷ್ಟು? ನೀವು ಹೇಳಿದ್ದೆಷ್ಟು? ಈಡೇರಿಸಿದ್ದೆಷ್ಟು? ಎಂದು ಇಲ್ಲಿ ಚರ್ಚೆಯಾಗಲಿ. ಸುಳ್ಳು ಹೇಳಿ ಜನರಿಗೆ ತಪ್ಪು ಸಂದೇಶ ಹೋಗಬಾರದು. ಚರ್ಚೆಗೆ ನಾನು ಸಿದ್ಧನಿದ್ದೇನೆ, ಇದನ್ನು ಸವಾಲಾಗಿ ಸ್ವೀಕರಿಸಿ ಯಾರಾದರೂ ಚರ್ಚೆಗೆ ಬರುವುದಾದರೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಸರ್ಕಾರದ ಶೇ. 90ಭರವಸೆಗಳು ಈಡೇರಿಕೆಯಾಗದೆ ಹಾಗೆಯೇ ಉಳಿದಿದೆ. ಕಳೆದ ಬಜೆಟ್’ನಲ್ಲಿ ಸರ್ಕಾರ 206 ಹೊಸ ಕಾರ್ಯಕ್ರಮಗಳನ್ನು ಹೇಳಿತ್ತು, ಅದರಲ್ಲಿ ಸುಮಾರು 57 ಕಾರ್ಯಕ್ರಮಗಳನ್ನು ಇವತ್ತಿನ ವರೆಗೆ ಜಾರಿಗೆ ಕೊಡಲು ಆಗಿಲ್ಲ. ಜನವರಿ ಅಂತ್ಯದವರೆಗೆ ಬಜೆಟ್ ನಲ್ಲಿ ತೋರಿಸಿದ ಹಣದಲ್ಲಿ ಖರ್ಚಾದದ್ದು ಕೇವಲ ಶೇ. 56 ಮಾತ್ರ. ಒಂದು ತಿಂಗಳಲ್ಲಿ ಶೇ.44% ಹಣ ಖರ್ಚು ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದರು.
ಸುಳ್ಳು ಹೇಳುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ
ಈ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿರುವ, ರೈತರ, ಬಡವರ, ದಲಿತರ ವಿರೋಧಿ ಬಜೆಟ್. ಇದರಲ್ಲಿ ಬರಿ ಸುಳ್ಳುಗಳೇ ಕೂಡಿವೆ. ನಾವು ಈ ಸರ್ಕಾರದ ವಿರುದ್ಧ ಯಾವುದೇ ಆರೋಪ ಮಾಡಿದರೂ ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂಬ ಸುಳ್ಳು ಹೇಳುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ಲೋಕಾಯುಕ್ತವನ್ನು ನಿಷ್ಕ್ರಿಯ ಮಾಡಿದ್ದರು, ನಾವು ಮತ್ತೆ ಬಂದು ಲೋಕಾಯುಕ್ತಕ್ಕೆ ಅಧಿಕಾರ ನೀಡಿದ್ದೇವೆ ಎಂದಿದ್ದಾರೆ. ಈ ಹಿಂದೆ ನಮ್ಮ ಸರ್ಕಾರ ಇರುವಾಗ ತಾವು ವಿರೋಧ ಪಕ್ಷದಲ್ಲಿ ಇದ್ದಿರಿ, ಇಂದು ಮಾಡುತ್ತಿರುವ ಆರೋಪಗಳನ್ನು ಅಂದು ಯಾಕೆ ಮಾಡಿಲ್ಲ? ಕಳೆದ ನಾಲ್ಕು ವರ್ಷದಿಂದ ನೀವು ಅಧಿಕಾರದಲ್ಲಿ ಇದ್ದೀರ ನಿಮ್ಮ ಬಳಿ ಸೂಕ್ತ ಸಾಕ್ಷ್ಯಗಳ ಇದ್ದರೆ ಒಂದು ತನಿಖಾ ಸಮಿತಿಯನ್ನು ಯಾಕೆ ರಚನೆ ಮಾಡಿಲ್ಲ? ತನಿಖೆ ಮಾಡಿಸಿಲ್ಲ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದ ವಿರುದ್ಧ ಕೇಳಿ ಬಂದ ಆರೋಪಗಳ 8 ಪ್ರಕರಣಗಳನ್ನು ನಾವು ಸಿಬಿಐಗೆ ವಹಿಸಿದ್ದೆವು. ಈ ಸರ್ಕಾರ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿದ್ಯಾ? ಆಗ ನರೇಂದ್ರ ಮೋದಿ ಅವರ ಸರ್ಕಾರ ಇತ್ತು, ನಾವು ಆದರೂ ಧೈರ್ಯವಾಗಿ ಸಿಬಿಐ ತನಿಖೆಗೆ ವಹಿಸಿದ್ದೆವು. ಅರ್ಕಾವತಿ ಲೇಔಟ್ ಪ್ರಕರಣವನ್ನು ಕೂಡ ನ್ಯಾಯಾಂಗ ತನಿಖೆಗೆ ನೀಡಿದ್ದೆವು. ಆಗ ನಮ್ಮ ವಿರುದ್ಧದ ಯಾವ ಆರೋಪಗಳಿಗೂ ಬಿಜೆಪಿ ದಾಖಲಾತಿ ನೀಡಿರಲಿಲ್ಲ. ಈಗ ಈ ಎಲ್ಲಾ ಪ್ರಕರಣಗಳಲ್ಲಿ ಸಿಬಿಐ ಬಿ ರಿಪೋರ್ಟ್ ನೀಡಿದೆ. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ನಮ್ಮ ವಿರುದ್ಧ ಯಾವ ಆರೋಪ ಮಾಡದೆ, ಈಗ ನಾವು ಇವರ ಭ್ರಷ್ಟಾಚಾರವನ್ನು ಹೊರಗೆ ತಂದ ಮೇಲೆ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.