ಕಾಂಗ್ರೆಸ್ ಇಂದು ಬೆಳ್ಳಂ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಹಿಂದೆಯೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅತೀ ಶೀಘ್ರದಲ್ಲಿಯೇ ಬಿಡುಗಡೆ ಮಾಡೋದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಅಂತೆಯೇ ಚುನಾವಣೆಗೆ ದಿನಾಂಕ ಘೋಷಣೆಯಾಗೋಕೂ ಮುನ್ನವೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ.
ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋದೇ ದೊಡ್ಡ ತಲೆನೋವಾಗಿತ್ತು. ಮೊದಲು ಈ ಬಾರಿ ಕೋಲಾರದಿಂದ ಸ್ಪರ್ಧಿಸುವೆ ಎಂದು ಹೇಳಿದ್ದ ಸಿದ್ದರಾಮಯ್ಯ ರಾಹುಲ್ ಗಾಂಧಿ ಸೂಚನೆಯ ಬಳಿಕ ವಾಪಸ್ ಬಾದಾಮಿ ಕ್ಷೇತ್ರದತ್ತ ಮುಖ ಮಾಡಿದ್ದರು. ಆದರೆ ಇಂದು ರಿಲೀಸ್ ಆಗಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಮರಳಿದ್ದಾರೆ. ಪುತ್ರ ಯತೀಂದ್ರ ಸಿದ್ದರಾಮಯ್ಯ ತಂದೆಗೆ ಟಿಕೆಟ್ ಬಿಟ್ಟುಕೊಟ್ಟಿದ್ದಾರೆ.

ಎಐಸಿಸಿ ಲೆಕ್ಕಾಚಾರ ಏನಿರಬಹುದು..?
ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ನ ಪ್ರಬಲ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸಿದ್ದರಾಮಯ್ಯ ಗೆಲುವು ಕಾಂಗ್ರೆಸ್ಗೆ ಆನೆಬಲ ವಿದ್ದಂತೆ. ಹೀಗಾಗಿಯೇ ಸಿದ್ದರಾಮಯ್ಯರಿಗೆ ತವರು ಕ್ಷೇತ್ರ ವರುಣಾ ಫಿಕ್ಸ್ ಮಾಡಲಾಗಿದೆ. ಎಐಸಿಸಿ ಕೋಲಾರ ಮತ್ತು ಬಾದಾಮಿ ಕ್ಷೇತ್ರದ ಟಿಕೆಟ್ನ್ನು ಇನ್ನೂ ತನ್ನ ಬಳಿಯೇ ಉಳಿಸಿಕೊಂಡಿದೆ. ಈ ಎರಡು ಕ್ಷೇತ್ರಗಳಲ್ಲಿ ಒಂದರ ಟಿಕೆಟ್ ಸಿದ್ದರಾಮಯ್ಯರಿಗೆ ನೀಡಿ ಅವರನ್ನು ಈ ಬಾರಿಯೂ 2 ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮಾಡುವುದು ಎಐಸಿಸಿ ಲೆಕ್ಕಾಚಾರವಾಗಿದೆ .
ಒಂದು ವೇಳೆ ವರುಣಾ ಹಾಗೂ ಮತ್ತೊಂದು ಕ್ಷೇತ್ರಗಳೆರಡರಲ್ಲಿಯೂ ಸಿದ್ದರಾಮಯ್ಯ ಗೆಲುವು ಸಾಧಿಸಿದಲ್ಲಿ ವರುಣಾ ಕ್ಷೇತ್ರವನ್ನು ಪುತ್ರನಿಗೆ ಸಿದ್ದರಾಮಯ್ಯ ಬಿಟ್ಟುಕೊಡಲಿದ್ದಾರೆ. ಮುಂದೆ ನಡೆಯುವ ಉಪಚುನಾವಣೆಯಲ್ಲಿ ಯತೀಂದ್ರ ವರುಣಾದಿಂದ ಸ್ಪರ್ಧೆ ಮಾಡಬಹುದಾಗಿದೆ. ಒಂದು ವರುಣಾದಿಂದ ಸೋತರೂ ಮತ್ತೊಂದು ಕ್ಷೇತ್ರದಲ್ಲಿಯಾದರೂ ಸಿದ್ದರಾಮಯ್ಯ ಗೆಲ್ಲಬಹುದು ಎಂಬುದು ಎಐಸಿಸಿ ಲೆಕ್ಕಾಚಾರವಾಗಿದ್ದು ಹೀಗಾಗಿ ಕಾಂಗ್ರೆಸ್ ಟಗರಿಗೆ ಡಬಲ್ ಚಾನ್ಸ್ ನೀಡೋಕೆ ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.