ನವದೆಹಲಿ:ಏ.೦೩: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಪ್ರಜಾಪ್ರಭುತ್ವವನ್ನು ಉಳಿಸಲು “ಮಿತ್ರಕಾಲ” ವಿರುದ್ಧದ ಹೋರಾಟ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.
ಇಂದು ಕೆಲವೇ ನಿಮಿಷಗಳಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ನಂತರ, ಹಿಂದಿಯಲ್ಲಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ, “ಇದು ಪ್ರಜಾಪ್ರಭುತ್ವವನ್ನು ಉಳಿಸಲು ‘ಮಿತ್ರಕಾಲ’ದ ವಿರುದ್ಧದ ಹೋರಾಟ. ಈ ಹೋರಾಟದಲ್ಲಿ, ಸತ್ಯವೇ ನನ್ನ ಅಸ್ತ್ರ, ಮತ್ತು ಸತ್ಯವೇ ನನ್ನ ಆಸರೆ!” ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಬಂಡವಾಳಶಾಹಿ ಮಿತ್ರರಿಗೆ ನೆರವು ನೀಡುತ್ತಿದ್ದಾರೆ ಎಂಬರ್ಥದಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಇಂದು ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ಸ್ವೀಕರಿಸಿದ ಕೋರ್ಟ್, ಆರೋಪಿ ಕಾಂಗ್ರೆಸ್ ನಾಯಕನಿಗೆ ಜಾಮೀನು ಮಂಜೂರು ಮಾಡಿ, ವಿಚಾರಣೆಯನ್ನುಮೇ 3ಕ್ಕೆ ಮುಂದೂಡಿದೆ.