ಬೆಳಗಾವಿ: ಮಾ.20: ಈ ದೇಶ ಎಲ್ಲರಿಗೂ ಸೇರಿದ್ದು, ಯಾರೋ ಎರಡ ರಿಂದ ಮೂರು ಮಂದಿಗೆ ಸೇರಿದ್ದಲ್ಲ ಅಥವಾ ಅದಾನಿಯವರದ್ದಲ್ಲ. ಬಿಜೆಪಿಯ ಮಿತ್ರರಾದ ಆಯ್ದ ಜನರಿಗೆ ಎಲ್ಲಾ ಲಾಭಗಳು ಸಿಗುತ್ತಿವೆ. ಇದುವೇ ಭ್ರಷ್ಟಾಚಾರಕ್ಕೆ ಕಾರಣ. ಕರ್ನಾಟಕದ ಸರ್ಕಾರವು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ʼಯುವ ಕ್ರಾಂತಿʼ ಸಮಾವೇಶದಲ್ಲಿ ಮಾತನಾಡಿದ ಅವರು, ʼಭಾರತ ಅದಾನಿಯವರದ್ದಲ್ಲ. ಬದಲಿಗೆ ರೈತರ, ಯುವಕರ ಭಾರತ. ದೇಶದಲ್ಲಿಂದು ದ್ವೇಷವನ್ನು ಬಿತ್ತಲಾಗುತ್ತಿದೆ. ರಾಜ್ಯ ಸರ್ಕಾರ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ. ರಾಜ್ಯದಲ್ಲಿ ಗುತ್ತಿಗೆದಾರರ ಬಳಿ ಶೇ.40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಪದವೀಧರರಿಗೆ 3000 ರೂ., ಡಿಪ್ಲೊಮಾ ಹೊಂದಿರುವವರಿಗೆ 2 ವರ್ಷಕ್ಕೆ 1500 ರೂ. ಮಾಸಿಕ ನಿರುದ್ಯೋಗ ಭತ್ಯೆ ನೀಡಲಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯ ವೇಳೆ ಇಲ್ಲಿನ ಯುವಕರು ಇಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಸರ್ಕಾರ ಶೇ.40 ಕಮಿಷನ್ ಸರ್ಕಾರ ಎಂದು ಜನರು ದೂರಿದ್ದಾರೆ. ಎಲ್ಲಾ ಕಾಂಗ್ರೆಸ್ ನಾಯಕರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷವು ಜಯಭೇರಿ ಬಾರಿಸಲಿದೆ ಎಂದರು.