“ಮೊದಲು ಅವರು ತಮಿಳರಿಗಾಗಿ ಬಂದರು, ನಾನು ಮಾತಾಡಿಲ್ಲ, ಯಾಕೆಂದರೆ ನಾನು ತಮಿಳನಾಗಿರಲಿಲ್ಲ..
ನಂತರ ಅವರು ಮುಸ್ಲಿಮರಿಗಾಗಿ ಬಂದರು, ನಾನು ಮಾತಾಡಿಲ್ಲ, ಯಾಕೆಂದರೆ ನಾನು ಮುಸ್ಲಿಮನಾಗಿರಲಿಲ್ಲ..
ಬಳಿಕ ಅವರು ನನಗಾಗಿ ಬಂದರು, ಆದರೆ ನನಗಾಗಿ ಮಾತಾಡಲೂ ಈಗ ಯಾರೂ ಉಳಿದಿಲ್ಲ….”
ಈ ಬರೆಹದ ಭಿತ್ತಿಪತ್ರ ಹಿಡಿದು ನಿಂತ ಸಿಂಹಳೀಯ ಮಹಿಳೆಯ ಚಿತ್ರ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ತಮಿಳು ಹಾಗೂ ಮುಸ್ಲಿಂ ಜನಾಂಗೀಯ ವಿರೋಧಿ ಬಲಪಂಥೀಯ ಶಕ್ತಿ ಅಧಿಕಾರದಲ್ಲಿರು ಶ್ರೀಲಂಕಾದ ಈಗಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಈ ಚಿತ್ರ ರವಾನಿಸುವ ಸಂದೇಶದಲ್ಲಿ ಭಾರತಕ್ಕೆ ಪ್ರಮುಖವಾದ ಪಾಠವಿದೆ. ಅದರಲ್ಲೂ, ಮುಸ್ಲಿಂ ಜನಾಂಗೀಯ ವಿರೋಧಿ ನಿಲುವು ವ್ಯಾಪಕವಾಗುತ್ತಿರುವ ಈ ಹೊತ್ತಿನಲ್ಲಿ, ಭಾರತವು ಶ್ರೀಲಂಕಾದ ನಿನ್ನೆಗಳನ್ನು ಮತ್ತು ವರ್ತಮಾನಗಳನ್ನು ನೋಡಿ ಎಚ್ಚೆತ್ತುಕೊಳ್ಳಬೇಕಿದೆ.
2009 ರ ವರೆಗೆ ಶ್ರೀಲಂಕಾದಲ್ಲಿ ನಡೆದ ಅಂತರ್ ಯುದ್ಧಗಳು, ಅದರಲ್ಲಿ ಶ್ರೀಲಂಕನ್ ಪಡೆ ಬಂಡುಕೋರರ ಮಟ್ಟ ಹಾಕುವ ಕಾರ್ಯಾಚರಣೆಯಲ್ಲಿ ಶ್ರೀಲಂಕನ್-ತಮಿಳರ ಮೇಲೆ ನಡೆಸಿದ ಜನಾಂಗೀಯ ದೌರ್ಜನ್ಯ ಅಷ್ಟಿಷ್ಟಲ್ಲ. ಬೌದ್ಧರು ಬಹುಸಂಖ್ಯಾತರಾಗಿರುವ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತ ಕ್ರಿಷ್ಚಿಯನ್-ಮುಸ್ಲಿಮರ ವಿರುದ್ಧವೂ ಜನಾಂಗೀಯ ತಾರತಮ್ಯಗಳು ತೀವ್ರಗೊಂಡವು. ಭಾರತದಲ್ಲಿ ಇಂದು ಮುಸ್ಲಿಮರ ವಿರುದ್ಧ ನರಮೇಧಕ್ಕೆ ಕರೆ ನೀಡುತ್ತಿರುವುದು ಸಾಮಾನ್ಯವಾದಂತೆ 2017-21 ರಲ್ಲಿ ಶ್ರೀಲಂಕಾದಲ್ಲಿ ಮುಸ್ಲಿಮರ ವಿರುದ್ಧ ಬೌದ್ಧ ಬಲಪಂಥೀಯ ಸಂಘಟನೆ ಬಿಬಿಎಸ್ ಧ್ವೇಷ ಭಾಷಣವನ್ನು ವ್ಯಾಪಕವಾಗಿ ಮಾಡುತ್ತಿತ್ತು.
ಒಂದು ಹಂತದಲ್ಲಿ ಸರ್ಕಾರದ ಸಚಿವರೇ, ಭದ್ರತೆಯ ಹೆಸರಿನಲ್ಲಿ ಮುಸ್ಲಿಮ್ ಮಹಿಳೆಯರು ಬುರ್ಖಾ ಧರಿಸುವುದನ್ನು ಮತ್ತು ಮುಸ್ಲಿಂ ಮದರಸಾಗಳನ್ನು ಬ್ಯಾನ್ ಮಾಡುವುದಾಗಿ ಘೋಷಿಸಿದರು. ನಂತರ ಅದು ಅನಿವಾರ್ಯ ಕಾರಣಕ್ಕೆ ಮುಂದೂಡಲ್ಪಟ್ಟರೂ ಮುಸ್ಲಿಂ ವಿರೋಧಿ ಮನಸ್ಥಿತಿಗಳು ಶ್ರೀಲಂಕನ್ ಬಹುಸಂಖ್ಯಾತರಲ್ಲಿ ವ್ಯಾಪಕವಾಗಿತ್ತು.
ಲಂಕಾದ ಸಾರ್ವಜನಿಕ ಭದ್ರತೆಯ ಸಚಿವ ಶರತ್ ವೀರಶೇಖರ ಅವರು ಸರ್ಕಾರವು ಬುರ್ಖಾ ಧರಿಸುವುದನ್ನು ನಿಷೇಧಿಸುತ್ತದೆ ಮತ್ತು ದೇಶದಲ್ಲಿ 1,000 ಕ್ಕೂ ಹೆಚ್ಚು ಇಸ್ಲಾಮಿಕ್ ಶಾಲೆಗಳನ್ನು ಮುಚ್ಚುತ್ತದೆ ಎಂದು ಘೋಷಿಸಿದರು. “ಬುರ್ಖಾ” “ಧಾರ್ಮಿಕ ಉಗ್ರವಾದದ ಸಂಕೇತ” ಮತ್ತು “ರಾಷ್ಟ್ರೀಯ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ” ಎಂದು ಸಚಿವರು ಕಳೆದ ವರ್ಷದ ಮಾರ್ಚ್ ನಲ್ಲಿ ಆರೋಪಿಸಿದ್ದರು.
2009 ರಲ್ಲಿ ಅಂತರ್ಯುದ್ಧದ ಅಂತ್ಯದ ನಂತರ, ಸನ್ಯಾಸಿ ಗಲಬೋಡ್ ಅತ್ತೆ ಜ್ಞಾನಸಾರ ನೇತೃತ್ವದ ಬೋಡು ಬಲ ಸೇನೆ (ಬಿಬಿಎಸ್) ಯಿಂದ ಮುಸ್ಲಿಂ ವಿರೋಧಿ ಚಳುವಳಿಯು ತೀವ್ರಗೊಳ್ಳಲು ಪ್ರಾರಂಭಿಸಿತು. BBS ಬೌದ್ಧ ಸನ್ಯಾಸಿಗಳ ನೇತೃತ್ವದ ಗುಂಪಾಗಿದ್ದು, ಇದು ಮುಸ್ಲಿಮರ ವಿರುದ್ಧ ಸಾಮಾಜಿಕ ಪ್ರತ್ಯೇಕತೆ ನಿರಂತರ ಪ್ರಚಾರ ಮಾಡುತ್ತಾ ಬಂದಿದೆ. BBS ನ ದೊಡ್ಡ ಸಾರ್ವಜನಿಕ ರ್ಯಾಲಿಗಳು ಮತ್ತು ಅವರ ಸಾಮಾಜಿಕ ಮಾಧ್ಯಮ ಪ್ರಚಾರಗಳು ದೇಶಾದ್ಯಂತ ಮುಸ್ಲಿಮರ ಮೇಲೆ ದ್ವೇಷದ ಭಾಷಣ ಮತ್ತು ದೈನಂದಿನ ಕಿರುಕುಳವನ್ನು ಸಾಮಾನ್ಯಗೊಳಿಸಿದವು.
ಯುದ್ಧಾನಂತರದ ವರ್ಷಗಳಲ್ಲಿ BBS ನೀಡುತ್ತಾ ಬಂದ ಪ್ರಚೋದನೆಯು 2014, 2017 ಮತ್ತು 2018 ರಲ್ಲಿ ಮುಸ್ಲಿಂ ಸಮುದಾಯಗಳ ವಿರುದ್ಧ ಹಿಂಸಾತ್ಮಕ ದಾಳಿಗಳು ನಡೆದವು.
ಬಹು ಸಂಖ್ಯಾತ ಬೌದ್ಧರನ್ನು ಕೇಂದ್ರದಲ್ಲಿಟ್ಟುಕೊಂಡ ಶ್ರೀಲಂಕಾದ ರಾಜಕೀಯವು ಅಲ್ಪಸಂಖ್ಯಾತರನ್ನು ನಿರಂತರ ಶೋಷಿಸುತ್ತಾ ಬಂತು ಮಾತ್ರವಲ್ಲ, ಅಲ್ಪಸಂಖ್ಯಾತ ಹೋರಾಟಗಾರರನ್ನು, ಮಾನವ ಹಕ್ಕು ಚಳುವಳಿಗಾರರನ್ನು ಮಟ್ಟ ಹಾಕಲು ತನ್ನೆಲ್ಲಾ ಅಧಿಕಾರವನ್ನು ನಿರ್ದಾಕ್ಷಿಣ್ಯವಾಗಿ ಉಪಯೋಗಿಸಿತು. ಅಧಿಕಾರದಲ್ಲಿರುವ ರಾಜಪಕ್ಷೆ ಕುಟುಂಬದ ವಿರುದ್ಧದ ದನಿಗಳನ್ನು ಅಡಗಿಸಲು ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿತು ಮಾತ್ರವಲ್ಲ, ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜಪಕ್ಸೆ ವಿರುದ್ಧ ಪ್ರಜಾತಾಂತ್ರಿಕವಾಗಿ ಪ್ರಶ್ನೆಯನ್ನೂ ಎತ್ತಲಾರದಂತ ವಾತಾವರಣವನ್ನು ನಿರ್ಮಿಸಿದರು. ಈ ಎಲ್ಲಾ ಕ್ರಮಗಳು ರಾಜಪಕ್ಸೆ ಅಧಿಕಾರವನ್ನು ಮತ್ತಷ್ಟು ಬಲಪಡಿಸಿತೇ ವಿನಃ ದೇಶದ ಅಭಿವೃದ್ಧಿಗೆ, ಪ್ರಗತಿಗೆ ಯಾವ ಕೊಡುಗೆಯನ್ನು ನೀಡಲಿಲ್ಲ. ಬದಲಾಗಿ, ಶ್ರೀಲಂಕಾದ ಪರಿಸ್ಥಿತಿ ಇಂದು ಯಾವ ಮಟ್ಟದಲ್ಲಿದೆಯೆಂಬುದಕ್ಕೆ ನಾವು ಈಗ ಸಾಕ್ಷಿಯಾಗಿದ್ದೇವೆ.
ಜನರೇ ದಂಗೆಯೆದ್ದು ರಾಜಪಕ್ಸೆ ಕುಟುಂಬದ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಣದುಬ್ಬರದ ಮಟ್ಟ ತೀವ್ರವಾಗಿದ್ದು, ಆಹಾರಕ್ಕೂ ವಿದೇಶಿ ರಾಜ್ಯಗಳನ್ನು ಅವಲಂಬಿಸಬೇಕಾದ ಅತಿ ಕೆಟ್ಟ ಪರಿಸ್ಥಿತಿಗೆ ಶ್ರೀಲಂಕಾ ತಲುಪಿದೆ. ಅಭಿವೃದ್ಧಿ ಮತ್ತು ಶಾಂತಿ ಸಮಾಧಾನವನ್ನು ನಗಣ್ಯಗೊಳಿಸಿ ಅಲ್ಪಸಂಖ್ಯಾತರ ಮೇಲೆ ಧ್ವೇಷವನ್ನೇ ಕಟ್ಟಿಕೊಂಡು, ಅದರ ಮೇಲೆ ರಾಜಕಾರಣ ಮಾಡಿಕೊಂಡ ಶ್ರೀಲಂಕಾ ತೀವ್ರ ಅಧೋಗತಿಗೆ ತಲುಪಿದೆ. ಇದನ್ನು ನೋಡಿಯಾದರೂ ಅಲ್ಪಸಂಖ್ಯಾತ ಧ್ವೇಷವನ್ನು ಉತ್ತೇಜಿಸುತ್ತಿರುವ ಭಾರತ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ, ಶ್ರೀಲಂಕಾದ ಇಂದಿನ ಸ್ಥಿತಿ ಭಾರತದ ಭವಿಷ್ಯವಾಗಲಿದೆ.